ADVERTISEMENT

ಸೋಂಕು ತಡೆಗೆ ಸರ್ಕಾರ ವಿಫಲ: ವಾಟಾಳ್‌ ನಾಗರಾಜ್‌

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 3:05 IST
Last Updated 27 ಏಪ್ರಿಲ್ 2021, 3:05 IST

ಕನಕಪುರ: ‘ಕೊರೊನಾ ಸೋಂಕು ತೀವ್ರಗತಿಯಲ್ಲಿ ಏರುತ್ತಿರುವುದರಿಂದ ರಾಜ್ಯದಲ್ಲಿ ಯಾವುದೇ ಚುನಾವಣೆ ನಡೆಸಬಾರದು’ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಒತ್ತಾಯಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಂಕು ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿದೆ. ಇದರ ನಡುವೆಯೂ ಚುನಾವಣೆಗಳನ್ನು ನಡೆಸಿ ಸೋಂಕು ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದು ಆರೋಪಿಸಿದರು.

ಕಳೆದ ವರ್ಷವೇ ಸೋಂಕು ವಿಶ್ವದೆಲ್ಲೆಡೆ ಹರಡಿದ್ದ ಬಗ್ಗೆ ಸರ್ಕಾರಕ್ಕೆ ತಿಳಿದಿತ್ತು. ಈ ವರ್ಷ ಎರಡನೇ ಅಲೆ ಬರುತ್ತದೆ ಎಂದು ವೈದ್ಯರು ಮೊದಲೇ ತಿಳಿಸಿದ್ದರು. ಆದರೂ ರಾಜ್ಯ ಮತ್ತು ಕೇಂದ್ರ ಸರ್ಕಾರ ನಿರ್ಲಕ್ಷ್ಯವಹಿಸಿ ಸೋಂಕು ಹರಡಲು ಕಾರಣವಾಗಿವೆ ಎಂದು ದೂರಿದರು.

ADVERTISEMENT

ರಾಜ್ಯದಲ್ಲಿ ಸೋಂಕು ಹೆಚ್ಚಾಗುತ್ತಿರುವುದರಿಂದ ಈಗ ಬೆಂಕಿಗೆ ಬಿದ್ದಂತೆ ಆಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಬೆಡ್‌ ಮತ್ತು ಆಮ್ಲಜನಕದ ಕೊರತೆ ಎದುರಿಸುತ್ತಿದ್ದಾರೆ. ಹಿಂದಿನ ವರ್ಷ ಮಾಡಿಕೊಂಡಿದ್ದ ಸಿದ್ಧತೆಗಳೆಲ್ಲಾ ಏನಾಯಿತು ಎಂದರು.

ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿದೆ. ಇದರಿಂದ ಬಡವರು, ಕೂಲಿ ಕಾರ್ಮಿಕರು, ಫುಟ್‌ಬಾತ್‌ ವ್ಯಾಪಾರಿಗಳ ಬದುಕು ಏನಾಗಬೇಕು. ಅವರ ಜೀವನಕ್ಕೆ ಸರ್ಕಾರ ಏನು ಪರಿಹಾರ ಸೂಚಿಸಿದೆ. ರೋಗ ನಿಯಂತ್ರಿಸಲು ಸರ್ಕಾರ ಲಾಕ್‌ಡೌನ್‌ ಮಾಡುವುದಾದರೆ ತೊಂದರೆಯಲ್ಲಿ ಸಿಲುಕುವ ಜನಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಕಳೆದ ವರ್ಷ ಲಾಕ್‌ಡೌನ್‌ ಮಾಡಿದ ಅವಧಿಯಲ್ಲಿ ಜನರ ಜೀವನವೇ ಏರುಪೇರಾಯಿತು. ಸರ್ಕಾರ ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ಪರಿಹಾರ ನೀಡುವುದಾಗಿ ಘೋಷಣೆ ಮಾಡಿತು. ಅದರಲ್ಲಿ ಅಲ್ಪಸ್ವಲ್ಪ ಜನಕ್ಕೆ ಬಿಟ್ಟರೆ ಬಹುತೇಕರಿಗೆ ಪರಿಹಾರವೇ ಸಿಕ್ಕಿಲ್ಲ. ಸರಿಯಾದ ಮಾನದಂಡವಿಲ್ಲದೆ ಪರಿಹಾರ ಘೋಷಣೆ ಮಾಡಿದ್ದು ಜನರನ್ನು ಗೊಂದಲಕ್ಕೀಡು ಮಾಡಿತು ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.