ADVERTISEMENT

ಮಾಗಡಿ: ರಾಜಕಾಲುವೆಯೇ ಒತ್ತುವರಿ

ಸರ್ಕಾರಿ ಸ್ವತ್ತು ಉಳಿವಿಗೆ ಬೇಕು ಜನಪ್ರತಿನಿಧಿಗಳು, ಅಧಿಕಾರಿಗಳಲ್ಲಿ ಇಚ್ಛಾಶಕ್ತಿ

ದೊಡ್ಡಬಾಣಗೆರೆ ಮಾರಣ್ಣ
Published 20 ಸೆಪ್ಟೆಂಬರ್ 2021, 6:02 IST
Last Updated 20 ಸೆಪ್ಟೆಂಬರ್ 2021, 6:02 IST
ಮಾಗಡಿಯ ರಾಜಕಾಲುವೆಯೊಂದರ ದುಃಸ್ಥಿತಿ
ಮಾಗಡಿಯ ರಾಜಕಾಲುವೆಯೊಂದರ ದುಃಸ್ಥಿತಿ   

ಮಾಗಡಿ: ಪಟ್ಟಣದ ಗೌರಮ್ಮನಕೆರೆಯಿಂದ ನೇತೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯವರೆಗಿನ ರಾಜಕಾಲುವೆಯು ಅಲ್ಲಲ್ಲಿ ಒತ್ತುವರಿಯಾಗಿದ್ದು, ಇದರಿಂದ ಮಳೆಗಾಲದಲ್ಲಿ ಜನರಿಗೆ ನಾನಾ ಸಮಸ್ಯೆಗಳು ಉಂಟಾಗುತ್ತಿವೆ.

ಹೊಯ್ಸಳ ದೊರೆ ಮೂರನೇ ವೀರಬಲ್ಲಾಳನ ಆಳ್ವಿಕೆಯಲ್ಲಿ ನಿರ್ಮಾಣವಾಗಿರುವ ಗೌರಮ್ಮನ ಕೆರೆ ಕೋಡಿ ಬಳಿ 60 ಅಡಿ ಅಗಲದ ರಾಜಕಾಲುವೆ ಇದೆ. ರಾಮಮಂದಿರದ ಹಿಂಬದಿ ಮತ್ತು ಗದ್ದೆ ಬಯಲಿನ ಮೂಲಕ ಹಾದು ಬಿ.ಕೆ. ರಸ್ತೆ ದಾಟಿಕೊಂಡು ಹೊಂಬಾಳಮ್ಮನಪೇಟೆ, ವ್ಯಾಸರಾಯನಪಾಳ್ಯ, ಪರಂಗಿಚಿಕ್ಕನ ಪಾಳ್ಯದ ಬಳಿ ಭಾರ್ಗವತಿ ಕೆರೆಗೆ ಸೇರುವ ಈ ರಾಜಕಾಲುವೆಯು ಬಹುತೇಕ ಅಕ್ರಮವಾಗಿ ಒತ್ತುವರಿಯಾಗಿದೆ.

ಗದ್ದೆಬಯಲಿನಲ್ಲಿ ಗುಂಡಯ್ಯನ ಬಾವಿ ಪೂರ್ವದಲ್ಲಿ 12 ಅಡಿ ಅಗಲವಿದ್ದ ಕಾಲುವೆಯನ್ನು ಕೆಂಪೇಗೌಡನಗರ ಲೇಔಟ್‌ ನಿರ್ಮಾಣ ಮಾಡುವಾಗ ಒತ್ತುವರಿ ಮಾಡಿದ್ದು, ಮಳೆಗಾಲದಲ್ಲಿ ಹರಿದು ಬರುವ ನೀರು ಬಡಾವಣೆಯಲ್ಲಿನ ಮನೆಗಳಿಗೆ ನುಗ್ಗಿ ರಾದ್ಧಾಂತವಾಗಿತ್ತು. ಬಿ.ಕೆ. ರಸ್ತೆ ದಾಟಿದ ತಕ್ಷಣ ರಾಜಕಾಲುವೆ 4 ಅಡಿ ಇರುವಂತೆ ಎರಡು ಬದಿಗಳಲ್ಲಿ ಒತ್ತುವರಿ ಮಾಡಲಾಗಿದೆ. ಮಳೆಗಾಲದಲ್ಲಿ ಕಾಲುವೆ ಮುಚ್ಚಿರುವುದರಿಂದ ಮಳೆಯ ನೀರು ರೈತರ ಹೊಲ, ಗದ್ದೆ, ತೋಟಗಳಿಗೆ ನುಗ್ಗಿ ವೀಳ್ಯದೆಲೆ ಅಂಬು, ಅಡಿಕೆ, ತೆಂಗಿನ ಮರಗಳು ನೆಲಕ್ಕೆ ಉರುಳುತ್ತಿವೆ.

ADVERTISEMENT

ಪಟ್ಟಣದ ವ್ಯಾಪ್ತಿಯಲ್ಲಿ ಒಳಚರಂಡಿ ಮಾರ್ಗಗಳನ್ನು ಈ ರಾಜಕಾಲುವೆಗಳ ಮೂಲಕವೇ ನಿರ್ಮಿಸಲಾಗಿದೆ. ಈ ಕಾಮಗಾರಿಗಳು ಕಳಪೆಯಾಗಿರುವ ಕಾರಣ ಕಟ್ಟಿಕೊಂಡು ಒಳಚರಂಡಿಯ ಕಲ್ಮಶ ರಾಜಕಾಲುವೆಯಲ್ಲಿ ಹರಿದು ಪರಿಸರ ದುರ್ಗಂಧಮಯವಾಗಿದೆ. ರಾಜಕಾಲುವೆಯ ಪಕ್ಕದ ರೈತರು ಕಾಲುವೆಯಲ್ಲಿ ಹರಿಯುವ ಒಳಚರಂಡಿಯ ಕಲುಷಿತ ನೀರು ಬಳಸಿಕೊಂಡು ಸೊಪ್ಪು, ತರಕಾರಿ, ಹೂವು ಬೆಳೆದು ಮಾರಾಟ ಮಾಡುತ್ತಿದ್ದಾರೆ. ಕಲ್ಮಶ ನೀರಿನಲ್ಲಿ ಬೆಳೆದ ತರಕಾರಿ ತಿನ್ನುವುದರಿಂದ ಜನಸಾಮಾನ್ಯರು ರೋಗರುಜಿನಗಳಿಗೆ ತುತ್ತಾಗುತ್ತಿದ್ದಾರೆ.

ವ್ಯಾಸರಾಯನ ಪಾಳ್ಯ ಬಳಿ ರಾಜಕಾಲುವೆ ಕೇವಲ 3 ಅಡಿಗಳಿಗೆ ಸೀಮಿತವಾಗಿದೆ. ಹೊಂಬಾಳಮ್ಮನ ಪೇಟೆಯಲ್ಲಿ ಹೊಸದಾಗಿ ಬಡಾವಣೆ ನಿರ್ಮಾಣ ಆಗುತ್ತಿರುವ ಹಿನ್ನೆಲೆಯಲ್ಲಿ ಕಾಲುವೆ ಮುಚ್ಚಿರುವುದರಿಂದ ಕಲುಷಿತ ನೀರು ರೈತರ ಹೊಲಗಳ ಮೇಲೆ ಹರಿಯುತ್ತಿದೆ. ವಡ್ಡರ ಪಾಳ್ಯದಿಂದ ಹೊಸಹಳ್ಳಿ ಕೆರೆಗೆ ಸೇರುತ್ತಿದ್ದ 45 ಅಡಿ ಅಗಲದ ರಾಜಕಾಲುವೆ ಸೋಮೇಶ್ವರ ಬಡಾವಣೆ ನಿರ್ಮಾಣ ಆದಂದಿನಿಂದ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ. ಕಲ್ಯಾಬಾಗಿಲು ಜಾಮೀಯಾ ಮಸೀದಿ ಬಡಾವಣೆಯಿಂದ ಹೊಂಬಾಳಮ್ಮನಪೇಟೆ ಸಿಹಿನೀರು ಬಾವಿ ಮಾರ್ಗವಾಗಿ ಹರಿದು ಹೋಗುತ್ತಿದ್ದ ರಾಜಕಾಲುವೆಯನ್ನು ಕಳೆದ 6 ವರ್ಷಗಳಿಂದಲೂ ಸತತವಾಗಿ ಅಕ್ರಮವಾಗಿ ಮಣ್ಣು ಸುರಿದು ಮುಚ್ಚಲಾಗುತ್ತಿದೆ.

ಹಣ ಪೋಲು: ಗೌರಮ್ಮನ ಕೆರೆಯ ಕೋಡಿಯಿಂದ 8 ಕಿ.ಮೀ ದೂರದ ಭಾರ್ಗಾವತಿ ಕೆರೆಗೆ ಸಂಪರ್ಕಿಸುವ ರಾಜಕಾಲುವೆಯನ್ನು ಪುರಸಭೆ ವತಿಯಿಂದ ಪ್ರತಿವರ್ಷವೂ ಸ್ವಚ್ಛಗೊಳಿಸಿದಂತೆ ಹಣ ಖರ್ಚು ಮಾಡಲಾಗಿದೆ.
ಆದರೆ, 10 ವರ್ಷಗಳಿಂದಲೂ ರಾಜಕಾಲುವೆಯಲ್ಲಿ ಪೊದೆ ಬೆಳೆದು ವಿಷಜಂತುಗಳ ಆವಾಸ ಸ್ಥಾನವಾಗಿದೆ. ಪಟ್ಟಣದ ಸರ್ಕಾರಿ ಆಸ್ತಿ ಉಳಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗಬೇಕು ಎಂಬುದು ಸಾರ್ವಜನಿಕರ ಆಗ್ರಹ.

ದಾಖಲೆಗಳಲ್ಲಷ್ಟೇ ಲೆಕ್ಕ

ಮಾಗಡಿ ಕಸಬಾ ಸರ್ವೆ ಸಂಖ್ಯೆ 11ರಲ್ಲಿ 60 ಅಡಿ, ಸರ್ವೆ ಸಂಖ್ಯೆ 19ರಲ್ಲಿ 54 ಅಡಿ, ನಂಬರ್ 42, 46ರಲ್ಲಿ 45 ಅಡಿ, 19ರಲ್ಲಿ 32 ಅಡಿ, 111ರಲ್ಲಿ 23 ಅಡಿ, 47ರಲ್ಲಿ 20, 50ರಲ್ಲಿ 34 ಅಡಿ ರಾಜಕಾಲುವೆ ಇರುವ ಬಗ್ಗೆ ಸರ್ಕಾರದ ದಾಖಲೆಗಳಲ್ಲಿ ವಿವರ ಇದೆ.

ಕಸಬಾ ಹೋಬಳಿ ಕಂದಾಯ ಅಧಿಕಾರಿ ಮತ್ತು ಭೂಮಾಪನಾ ಇಲಾಖೆಯ ಅಧಿಕಾರಿಗಳು ನಕ್ಷೆಯಲ್ಲಿ ಇರುವ ಬಗ್ಗೆ ಮತ್ತೊಮ್ಮೆ ಸರ್ವೆ ಮಾಡಿಸಿ, ರಾಜಕಾಲುವೆಯನ್ನು ಖಚಿತ ಪಡಿಸಿಕೊಳ್ಳಬೇಕಿದೆ. ಸರ್ವೆಗೆ ಸಿಬ್ಬಂದಿಯೇ ಇಲ್ಲದಿರುವುದು ಹಾಗೂ ಇಚ್ಛಾಶಕ್ತಿಯ ಕೊರತೆಯಿಂದ ಈ ಕಾರ್ಯ ಸಾಧ್ಯವಾಗಿಲ್ಲ.

ದುರಸ್ತಿ ನೆಪ

ಕೆಲವು ಕಡೆ ಅಧಿಕಾರಿಗಳೇ ರಾಜಕಾಲುವೆ ಜಾಗಗಳನ್ನು ಖಾಸಗಿಯವರಿಗೆ ಮಾರಿಕೊಂಡಿದ್ದಾರೆ. ಪ್ರತಿ ವರ್ಷ ಕಾಲುವೆ ದುರಸ್ತಿ ನೆಪದಲ್ಲಿ ಹಣ ಪೋಲಾಗುತ್ತಿದೆ. ಕೂಡಲೇ ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಬೇಕು.

ಗೋಪಾಲಕೃಷ್ಣ, ಹೋರಾಟಗಾರ, ಬಾಬು ಜಗಜೀವನ್ ರಾಮ್ ನಗರ.

ಅಕ್ರಮ ಪರಭಾರೆ

ರಾಜಕಾಲುವೆಗಳು ಆಳಿಬಾಳಿದ್ದ ಮಹಾರಾಜರ ಕೊಡುಗೆಗಳು. ಪುರಸಭೆ ವ್ಯಾಪ್ತಿಯಲ್ಲಿ ರಾಜಕಾಲುವೆಯೂ ಸೇರಿದಂತೆ ಸರ್ಕಾರಿ ಸ್ವತ್ತುಗಳು ಅಕ್ರಮ ಪರಭಾರೆಯಾಗಿವೆ. ಕೆಂಪೇಗೌಡರ ಮಾಗಡಿಯಲ್ಲಿ ಉಳಿದಿರುವ ರಾಜಕಾಲುವೆಗಳನ್ನು ರಕ್ಷಿಸುವ ಅಗತ್ಯ ನಮ್ಮೆಲ್ಲರ ಮೇಲಿದೆ.

ಎಂ.ಜೆ. ಜಯಾನಂದಸ್ವಾಮಿ, ಸಾಮಾಜಿಕ ಕಾರ್ಯಕರ್ತ, ದಾಸರ ಬೀದಿ.‌

ರೋಗ ಖಚಿತ

ಗೌರಮ್ಮನ ಕೆರೆಯಿಂದ ಭಾರ್ಗಾವತಿ ಕೆರೆಯ ತನಕ ಇರುವ ವಿಶಾಲವಾಗಿದ್ದ ರಾಜಕಾಲುವೆಯಲ್ಲಿ ವರ್ಷಪೂರ್ತಿ ತಿಳಿನೀರು ಹರಿಯುತ್ತಿತ್ತು. 23 ವರ್ಷಗಳ ಹಿಂದೆ ನಮ್ಮ ಓರಗೆಯವರೆಲ್ಲರೂ ರಾಜಕಾಲುವೆಯ ನೀರಲ್ಲಿ ನಿತ್ಯ ಈಜುತ್ತಿದ್ದೆವು. ಈಗ ಕಾಲುವೆಯ ಒಳಗೆ ಕಾಲಿಟ್ಟರೆ ಸಾಂಕ್ರಾಮಿಕ ರೋಗ ಬರುವುದು ಖಚಿತ.

ಕುಮಾರ್, ಅರೆಕಲ್ಲಟ್ಟಿ, ಹೊಸಪೇಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.