ಚನ್ನಪಟ್ಟಣ: ತಾಲ್ಲೂಕಿನ ಪ್ರಸಿದ್ಧ ಗೌಡಗೆರೆ ಚಾಮುಂಡೇಶ್ವರಿ ಬಸವಪ್ಪ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಮೂಲ ಸೌಲಭ್ಯ ಒದಗಿಸಲು ದೇವಸ್ಥಾನ ಆಡಳಿತ ಮಂಡಳಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಡಿವೈಎಸ್‌ಪಿ ಕೆ.ಸಿ.ಗಿರಿ ಸೂಚನೆ ನೀಡಿದರು.
ಆಷಾಢ ಮಾಸದಲ್ಲಿ ಕ್ಷೇತ್ರಕ್ಕೆ ಹೆಚ್ಚಿನ ಭಕ್ತರು ಆಗಮಿಸುವ ಹಿನ್ನೆಲೆ ಮೂಲಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಆವರಣದಲ್ಲಿ ಬುಧವಾರ ನಡೆದ ಆಡಳಿತ ಮಂಡಳಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಕ್ಷೇತ್ರ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಆಷಾಢ ಮಾಸ ಹಾಗೂ ಭೀಮನ ಅಮಾವಾಸ್ಯೆ ಕಾರ್ಯಕ್ರಮಕ್ಕೆ ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆಯಿದೆ. ಈ ವೇಳೆ ಕಾನೂನು ಸುವ್ಯವಸ್ಥೆ ಸೇರಿದಂತೆ ಭಕ್ತರ ಕ್ಷೇಮ ನೋಡಿಕೊಳ್ಳಬೇಕಾದ ಮಹತ್ತರ ಜವಾಬ್ದಾರಿ ಎಲ್ಲರ ಮೇಲಿದೆ. ನಮ್ಮ ಇಲಾಖೆಯಿಂದ ಆದಷ್ಟೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸ್ಥಳೀಯ ಗ್ರಾ.ಪಂ., ಆರೋಗ್ಯ, ಬೆಸ್ಕಾಂ, ಪಿಡಬ್ಲ್ಯೂಡಿ, ಅಗ್ನಿಶಾಮಕ ದಳ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಸ್ಥಳೀಯ ಪಿಡಿಒಗಳು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು. ದೇವಸ್ಥಾನದ ಆಡಳಿತ ಮಂಡಳಿ ಆದಷ್ಟೂ ಬೇಗ ಸೆಕ್ಯುರಿಟಿ ಏಜೆನ್ಸಿಯನ್ನು ನೇಮಿಸಿಕೊಳ್ಳಬೇಕು. ದೇವಸ್ಥಾನದ ವತಿಯಿಂದ ಪ್ರತಿಯೊಂದು ಕಡೆ ಸಿಸಿ ಟಿವಿ ಮತ್ತು ಸೈನ್ ಬೋರ್ಡ್ ಅಳವಡಿಸಬೇಕು. ಇದರ ಜೊತೆಗೆ ಧ್ವನಿವರ್ಧಕದಿಂದ ಭಕ್ತರಿಗೆ ಕಳ್ಳರ ಬಗ್ಗೆ ಮಾಹಿತಿ ಹಾಗೂ ಸೂಚನೆ ನೀಡಬೇಕು ಎಂದರು.
ಭಕ್ತರ ಯೋಗಕ್ಷೇಮ ಆಡಳಿತ ಮಂಡಳಿಯ ಜವಾಬ್ದಾರಿಯಾಗಿದೆ. ಆರೋಗ್ಯ ಕೇಂದ್ರ ಹಾಗೂ ಆಂಬುಲೆನ್ಸ್ ವ್ಯವಸ್ಥೆ ಮಾಡಬೇಕು. ಅನ್ನದಾಸೋಹದ ಬಗ್ಗೆ ಅಗತ್ಯ ಜಾಗ್ರತೆ ವಹಿಸಬೇಕು. ಒಟ್ಟಾರೆ ಯಾವ ಅನಾನೂಕೂಲವಾಗದಂತೆ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಕ್ಷೇತ್ರದ ಧರ್ಮದರ್ಶಿ ಮಲ್ಲೇಶ್ ಗುರೂಜಿ ಮಾತನಾಡಿ, ಭೀಮನ ಅಮಾವಾಸ್ಯೆಯಂದು ಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮಗಳ ವಿವರ ಹಾಗೂ ಕ್ಷೇತ್ರದ ವತಿಯಿಂದ ಕೈಗೊಂಡಿರುವ ಅಗತ್ಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾಮಾಂತರ ಸರ್ಕಲ್ ಇನ್‌ಸ್ಪೆಕ್ಟರ್ ಪ್ರಕಾಶ್, ಸಬ್ ಇನ್‌ಸ್ಪೆಕ್ಟರ್ ಸಹನಾ ಪಾಟೀಲ್, ದೇವಸ್ಥಾನ ಆಡಳಿತ ಮಂಡಳಿಯ ಬಾಬು, ದಯಾನಂದ್ ಸಾಗರ್, ರಾಮಕೃಷ್ಣಪ್ಪ, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.