ರಾಮನಗರ: ವಾಣಿಜ್ಯ ಇಲಾಖೆಯು ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್ ವಿತರಿಸಿರುವುದನ್ನು ಖಂಡಿಸಿ, ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಬುಧವಾರ ತಳ್ಳುಗಾಡಿಯಲ್ಲಿ ತರಕಾರಿ ಮತ್ತು ಬೇಕರಿ ಉತ್ಪನ್ನಗಳನ್ನಿಟ್ಟುಕೊಂಡು ನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ತಳ್ಳುವ ಗಾಡಿಯಲ್ಲಿ ಹಣ್ಣು, ತರಕಾರಿ, ಬ್ರೆಡ್, ರಸ್ಕ್ ಇನ್ನಿತರ ಉತ್ಪನ್ನಗಳನ್ನು ಇಟ್ಟುಕೊಂಡು ಮಾರಾಟ ಮಾಡಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಣ್ಣ ವ್ಯಾಪಾರಿಗಳ ಮೇಲೆ ರಾಜ್ಯ ಸರ್ಕಾರ ತೆರಿಗೆಯ ಬ್ರಹ್ಮಾಸ್ತ್ರ ಪ್ರಯೋಗಿಸಿರುವುದು ಸರಿಯಲ್ಲ. ಕೂಡಲೇ ನೋಟಿಸ್ ಕಳಿಸುವುದನ್ನು ಬಿಡಬೇಕು’ ಎಂದು ಆಗ್ರಹಿಸಿದರು.
‘ಸರ್ಕಾರದ ಕ್ರಮವು ವ್ಯಾಪಾರಿಗಳಲ್ಲಿ ಆತಂಕ ಮೂಡಿಸಿದೆ. ಜಿಎಸ್‌ಟಿ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಡುವೆ ತಿಕ್ಕಾಟ ನಡೆಯುತ್ತಿದೆ. ಈ ಕಾರಣಕ್ಕೆ ಸಣ್ಣಪುಟ್ಟ ವ್ಯಾಪಾರಸ್ಥರ ಮೇಲೆ ದುಪ್ಪಟ್ಟು ತೆರಿಗೆ ಹಾಕಲಾಗುತ್ತಿದೆ. ಹೀಗಾದರೆ, ಸಣ್ಣಪುಟ್ಟ ವ್ಯಾಪಾರ ಮಾಡಿ ಬದುಕು ಕಟ್ಟಿಕೊಂಡಿರುವವರು ಬೀದಿಗೆ ಬರಬೇಕಾಗುತ್ತದೆ. ಹಾಗಾಗಿ, ನೋಟಿಸ್ ನಿಲ್ಲಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು’ ಎಂದರು.
ಪ್ರತಿಭಟನೆಯಲ್ಲಿ ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ. ಜಗದೀಶ್, ಜಿಲ್ಲಾಧ್ಯಕ್ಷ ಸಿ.ಎಸ್. ಜಯಕುಮಾರ್, ಮುಖಂಡರಾದ ಗಂಗಾಧರ್ ವಿ. ಎನ್, ಭಾಗ್ಯ ಸುಧಾ, ಕೆ. ಜಯರಾಮ, ಮಂಜುನಾಥ್, ಕೃಷ್ಣಮೂರ್ತಿ, ಪಿ.ಸುರೇಶ ಕೊತ್ತಿಪುರ, ರೇಖಾ, ಸುಂದರ್, ವಾಟಾಳ್ ಪಕ್ಷದ ಅಧ್ಯಕ್ಷ ನಾರಾಯಣಸ್ವಾಮಿ, ಪಾರ್ಥಸಾರಥಿ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.