ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಗ್ಯಾರಂಟಿ ಯೋಜನೆಗಳ ಕಾರ್ಯಾಗಾರದ ಶಕ್ತಿ ಯೋಜನೆಯ ಮಳಿಗೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡಿದರು.
ರಾಮನಗರ: ‘ಜನರ ಬದುಕಿಗೆ ಆಧಾರವಾಗಿರುವ ಗ್ಯಾರಂಟಿ ಯೋಜನೆಗಳ ಕುರಿತು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಫಲಾನುಭವಿಗಳ ಸಮಾವೇಶ ಮಾಡಿ ಪ್ರಚುರಪಡಿಸಬೇಕು. ಯೋಜನೆಯ ಪ್ರಯೋಜನ ಪಡೆದು ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರವು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಯೋಜನೆಗಳ ಕುರಿತು ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಪಂಚಾಯಿತಿ ಮಟ್ಟದಲ್ಲಿ ಫಲಾನುಭವಿಗಳ ವಾಟ್ಸ್ಆ್ಯಪ್ ಗ್ರೂಪ್ ರಚಿಸಿ, ಯೋಜನೆಗಳ ಕುರಿತು ಜಾಗೃತಿ ಮೂಡಿಸಬೇಕು. ಅವರಿಂದ ಅಭಿಪ್ರಾಯ ಸಂಗ್ರಹಿಸಬೇಕು’ ಎಂದರು.
‘ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಿಗೆ ಶಾಸಕರಿಗಿಂತಲೂ ಹೆಚ್ಚು ಶಕ್ತಿ ಇದೆ. ಎರಡೂ ಹಂತದ ಅಧಿಕಾರಿಗಳ ಜೊತೆ ಅವರು ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಬಹುದು. ತಮ್ಮ ಹುದ್ದೆಯ ಮಹತ್ವ ಅರಿತು ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.
‘ನಾನು ಡಿಸಿಎಂ ಆದ ಬಳಿಕ, ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಆಶೀರ್ವಾದ ಪಡೆಯಲು ಹೋಗಿದ್ದೆ. ಆಗ ಅವರು, ಗ್ಯಾರಂಟಿ ಯೋಜನೆಗಳನ್ನು ವರ್ಷಕ್ಕೆ ಒಂದರಂತೆ ಅನುಷ್ಠಾನ ಮಾಡ್ತಿರಾ? ಎಂದು ಕೇಳಿದ್ದರು. ನಾನು ನಕ್ಕು ಸುಮ್ಮನಾಗಿದ್ದೆ. ಆದರೆ, ಅಧಿಕಾರಕ್ಕೆ ಬಂದ ಐದೇ ತಿಂಗಳಿಗೆ ಐದೂ ಯೋಜನೆಗಳನ್ನು ಜಾರಿಗೆ ತಂದೆವು’ ಎಂದರು.
ರಾಮನಗರ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್, ‘ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು, ದೇಶದ ರಾಜಕೀಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿವೆ. ಮುಂದೆ ಯಾರೂ ಇಂತಹ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.
ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಕೆ. ರಾಜು, ‘ಕೋವಿಡ್‌ನಿಂದ ಸಂಕಷ್ಟದಲ್ಲಿದ್ದ ಜನರಿಗೆ ಗ್ಯಾರಂಟಿ ಯೋಜನೆಗಳು ಆಶಾಕಿರಣವಾಗಿವೆ. ಬಡ ಕುಟುಂಬಗಳಿಗೆ ಆರ್ಥಿಕವಾಗಿ ಆಸರೆಯಾಗಿವೆ’ ಎಂದು ಬಣ್ಣಿಸಿದರು.
ಯೋಜನೆಗಳ ಮಹತ್ವದ ಕುರಿತು ಡಾ. ಎಚ್.ವಿ. ವಾಸು ಉಪನ್ಯಾಸ ನೀಡಿದರು. ಕಾರ್ಯಗಾರ ನಿಮಿತ್ತ ಜಿ.ಪಂ. ಆವರಣದಲ್ಲಿ ಗ್ಯಾರಂಟಿ ಮಳಿಗೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟಿಸಿದರು. ಕಾರ್ಯಕ್ರಮ ಆರಂಭವಾದ ಕೆಲವೇ ನಿಮಿಷಗಳಲ್ಲಿ ಅನ್ಯ ಕೆಲಸ ನಿಮಿತ್ತ ಎದ್ದು ಹೋದರು.
ಬೆಳಿಗ್ಗೆ 11 ಗಂಟೆಗೆ ಶುರುವಾಗಬೇಕಿದ್ದ ಕಾರ್ಯಾಗಾರ ಡಿಸಿಎಂ ಬರುವುದು ತಡವಾಗಿದ್ದರಿಂದ ಮಧ್ಯಾಹ್ನ 1.30ಕ್ಕೆ ಆರಂಭವಾಯಿತು. ಡಿಸಿಎಂ ಅವರನ್ನು ಆಂಜನೇಯ ಗೋಪುರದ ಬಳಿ ಸ್ವಾಗತಿಸಿ, ಅಲ್ಲಿಂದ ಮೆರವಣಿಗೆಯಲ್ಲಿ ಕರೆ ತರಲಾಯಿತು. ಜಾನಪದ ಕಲಾತಂಡಗಳು ಸಾಥ್ ನೀಡಿದವು.
ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್ ಎಂ.ಎನ್. ಹೆಗಡೆ, ವಿಧಾನ ಪರಿಷತ್ ಸದಸ್ಯ ಎಸ್. ರವಿ, ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್, ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ, ಗ್ಯಾರಂಟಿ ಪ್ರಾಧಿಕಾರದ ತಾಲ್ಲೂಕು ಅಧ್ಯಕ್ಷರು, ಪದಾಧಿಕಾರಿಗಳು, ಅಧಿಕಾರಿಗಳು ಹಾಗೂ ಕಾಂಗ್ರೆಸ್ ಮುಖಂಡರು ಇದ್ದರು.
ಚುನಾವಣೆ ವೇಳೆ ಬಿಜೆಪಿಯಲ್ಲಿದ್ದ ನಾನು ಸಹ ಈ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದೆ. ಆದರೆ ಯೋಜನೆಗಳು ಮಹಿಳೆಯರ ಸ್ವಾವಲಂಬನೆಯಲ್ಲಿ ಮುಖ್ಯ ಪಾತ್ರ ವಹಿಸಿವೆ. ಜಿಲ್ಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನಲ್ಲೇ ಹೆಚ್ಚು ಫಲಾನುಭವಿಗಳಿದ್ದಾರೆಸಿ.ಪಿ. ಯೋಗೇಶ್ವರ್ ಚನ್ನಪಟ್ಟಣ ಶಾಸಕ
‘ಬಿಜೆಪಿ ಕುತಂತ್ರಕ್ಕೆ ಪ್ರತಿತಂತ್ರ ರೂಪಿಸಿ’
‘ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಯೋಜನೆಗಳು ಎಂದು ಹೇಳುತ್ತಾ ಇದರಿಂದಾಗಿ ಅಭಿವೃದ್ದಿಗೆ ಹಿನ್ನಡೆಯಾಗಿದೆ ಎಂದು ಬಿಜೆಪಿ ಮತ್ತು ಜೆಡಿಎಸ್‌ನವರು ಅಪಪ್ರಚಾರ ಮಾಡುತ್ತಿದ್ದಾರೆ. ಮುಂದೆ ಯೋಜನೆಗಳನ್ನು ನಿಲ್ಲಿಸಲು ಈಗಿನಿಂದಲೇ ಕುತಂತ್ರ ಮಾಡುತ್ತಿದ್ದಾರೆ. ಯೋಜನೆಗಳಿಗೆ ನಾವೀಗ ಕೊಡುತ್ತಿರುವ ಹಣವನ್ನು ಮುಂದೆ ಶಾಸಕರಿಗೆ ಕೊಡಬಹುದು ಎಂಬ ಆಲೋಚನೆ ಅವರದ್ದು. ಅವರ ಕುತಂತ್ರಕ್ಕೆ ಪ್ರತಿತಂತ್ರ ರೂಪಿಸಬೇಕು. ಬೂತ್ ಮಟ್ಟದಲ್ಲಿ ಪಕ್ಷದವರು ಡಿಜಿಟಲ್ ಯೂತ್ ಗ್ರೂಪ್ ರಚಿಸಬೇಕು. ಸರ್ಕಾರದ ಯೋಜನೆಗಳನ್ನು ಸಾಮಾಜಿಕ ಜಾಲತಾಣದ ಮೂಲಕ ವ್ಯಾಪಕವಾಗಿ ಪ್ರಚಾರ ಮಾಡಬೇಕು. ಫಲಾನುಭವಿಗಳ ಜೊತೆ ಸಂಪರ್ಕ ಇಟ್ಟುಕೊಂಡು ಅವರನ್ನೇ ಪ್ರಚಾರ ರಾಯಭಾರಿಯಾಗಿ ಮಾಡಬೇಕು’ ಎಂದು ಶಿವಕುಮಾರ್ ನಿರ್ದೇಶನ ನೀಡಿದರು.
‘ಬಿಟ್ಟಿ ಎನ್ನುವವರದ್ದು ಆತ್ಮವಂಚನೆ’
‘ಜನರ ಬದುಕಿಗೆ ಆಧಾರವಾಗಿ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಿರುವ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯ ಎಂದು ವಿರೋಧ ಪಕ್ಷದವರು ಟೀಕಿಸುವುದು ಆತ್ಮವಂಚನೆಯಾಗಿದೆ. ನಮ್ಮ ಯೋಜನೆಗಳು ಪಕ್ಷಾತೀತವಾಗಿ ಎಲ್ಲಾ ಜಾತಿ ಧರ್ಮಗಳನ್ನು ತಲುಪುತ್ತಿವೆ. ಮಾಧ್ಯಮಗಳು ನಮ್ಮ ಪರವಾಗಿಲ್ಲ. ಹಾಗಾಗಿ ನಮ್ಮವರೇ ಯೋಜನೆಗಳ ಕುರಿತು ಬಾಯಿ ಪ್ರಚಾರ ಮಾಡಬೇಕು. ಪ್ರಾಧಿಕಾರದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿರುವ 15 ಪದಾಧಿಕಾರಿಗಳು ಗ್ರಾಮಮಟ್ಟದಲ್ಲಿ ಯೋಜನೆಗಳ ಕುರಿತು ಜಾಗೃತಿ ಮತ್ತು ಪ್ರಚಾರ ಕೆಲಸ ಮಾಡಬೇಕು’ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.