ADVERTISEMENT

‘ವಿದ್ಯಾರ್ಥಿಗಳು ಒಳ್ಳೆಯ ವಿಚಾರ ಆರಿಸಿಕೊಳ್ಳಿ’

ವ್ಯಕ್ತಿತ್ವ ವಿಕಸನ, ಸಮಯ ನಿರ್ವಹಣೆ ಕುರಿತ ಶೈಕ್ಷಣಿಕ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 12:47 IST
Last Updated 4 ಜನವರಿ 2019, 12:47 IST
ಶೈಕ್ಷಣಿಕ ಕಾರ್ಯಾಗಾರದಲ್ಲಿ ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಅವರನ್ನು ಸನ್ಮಾನಿಸಲಾಯಿತು
ಶೈಕ್ಷಣಿಕ ಕಾರ್ಯಾಗಾರದಲ್ಲಿ ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಅವರನ್ನು ಸನ್ಮಾನಿಸಲಾಯಿತು   

ರಾಮನಗರ: ವಿದ್ಯಾರ್ಥಿಗಳು ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳನ್ನು ಆರಿಸಿ ತುಂಬಿಕೊಳ್ಳುವ ಅಗತ್ಯವಿದೆ ಎಂದು ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಹೇಳಿದರು.

ಇಲ್ಲಿನ ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ರೋಟರಿ ಸಂಸ್ಥೆಯ ಸಹಯೋಗದಲ್ಲಿ ತಾಲ್ಲೂಕಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಮತ್ತು ಸಮಯ ನಿರ್ವಹಣೆ ಕುರಿತು ಶುಕ್ರವಾರ ನಡೆದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಜೀವನ ಒಂದು ಸುಂದರವಾದ ಹೂತೋಟವಿದ್ದಂತೆ. ಇಲ್ಲಿ ಬಣ್ಣ ಬಣ್ಣದ ಹೂವುಗಳನ್ನು ನಾವೇ ಬೆಳೆಸಿಕೊಳ್ಳಬೇಕು. ಒಳ್ಳೆಯದನ್ನು ಆರಿಸಿಕೊಂಡರೆ ಹೂ ಬುಟ್ಟಿಯಾಗುತ್ತದೆ. ಕೆಟ್ಟದ್ದನ್ನು ಆರಿಸಿ ತುಂಬಿದರೆ ಕಸದ ಬುಟ್ಟಿಯಾಗುತ್ತದೆ. ಒಳ್ಳೆಯದನ್ನು ಮಾತ್ರ ಸ್ವೀಕರಿಸುವ ಅರಿವು ವಿದ್ಯಾರ್ಥಿಗಳಿಗೆ ಇರಬೇಕು ಎಂದರು.

ಮೈಕಲ್ ಎಂಜಿಲೋ ಎಂಬ ಶಿಲ್ಪಿ ಮೊದಲ ಬಾರಿಗೆ ಪ್ರಕೃತಿಯ ಕಲ್ಲನ್ನು ಬಳಸಿಕೊಂಡು ಮೂರ್ತಿಯನ್ನಾಗಿಸಿದ. ಅಲ್ಲಿಯವರೆಗೂ ಕಲ್ಲಿನೊಳಗಣ ಶಿಲ್ಪ ಕಲೆಯ ಅರಿವು ಇರಲಿಲ್ಲ. ಈ ರೀತಿ ಪ್ರಕೃತಿಯನ್ನು ಬಳಸಿಕೊಂಡಾಗ ಮಾತ್ರ ಸಂಸ್ಕೃತಿ ಅರಿವು ಉಂಟಾಗುತ್ತದೆ. ಬಳಸದೇ ಇದ್ದಾಗ ವಿಕೃತಿ ಉಂಟಾಗುತ್ತದೆ ಎಂದರು.

ADVERTISEMENT

ಮಕ್ಕಳು ಯಾವುದನ್ನು ಬಯಸುತ್ತಾರೆಯೋ ಅದಕ್ಕೆ ಪೋಷಕರು, ಶಿಕ್ಷಕರು ಪೂರಕ ವಾತಾವರಣ ಒದಗಿಸಬೇಕು. ಈ ಮೊದಲು ದೊಡ್ಡ ಕುಟುಂಬ ನಮ್ಮದಾಗಿತ್ತು. ಒಬ್ಬರನ್ನು ನೋಡಿ ಮತ್ತೊಬ್ಬರು ಕಲಿಯುವ ಅವಕಾಶಗಳಿದ್ದವು. ಈಗ ಅವೆಲ್ಲಾ ಇಲ್ಲದಾಗಿದೆ ಎಂದು ತಿಳಿಸಿದರು. ದೇವರ ಮೇಲಿನ ನಂಬಿಕೆ ಬರುವಂತಹ ಪುಸ್ತಕಗಳ ಬಳಕೆ, ಶ್ರದ್ಧೆ, ಪೌಷ್ಟಿಕತೆ ಹಾಗೂ ದೇಶ ಪ್ರೇಮದದ ಬಗ್ಗೆ ಅರಿವನ್ನು ಮೂಡಿಸಬೇಕು ಎಂದರು.

ಪ್ರತಿಯೊಬ್ಬರೂ ಪ್ರತಿಭಾವಂತರಾಗಿರುತ್ತಾರೆ. ಯಾರನ್ನೂ ಅನುಕರಣೆ ಮಾಡಬೇಡಿ, ಅನುಕರಣೆ ಮಾಡಿದರೆ ನಿಮ್ಮಲ್ಲಿರುವ ಸೃಜನಶೀಲತೆ ನಾಶವಾಗುತ್ತದೆ. ನಿಮ್ಮಲ್ಲಿ ಶಿಸ್ತು, ಸಂಯಮ, ಶ್ರದ್ಧೆ ಇದ್ದರೆ ಯಶಸ್ಸು ಎನ್ನುವುದು ನಿಮ್ಮ ಮನೆ ಬಾಗಿಲಿಗೆ ಬರುತ್ತದೆ ಎಂದು ತಿಳಿಸಿದರು.

ಯಾವುದನ್ನು ಕಷ್ಟ ಅಂದುಕೊಳ್ಳಬಾರದು. ನನಗೆ ಗಣಿತ ಕಷ್ಟ, ಇಂಗ್ಲಿಷ್ ಕಷ್ಟ ಎಂದು ಹಲವು ವಿದ್ಯಾರ್ಥಿಗಳು ತಮ್ಮಲ್ಲಿನ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಪರೀಕ್ಷೆಗೆ ಇನ್ನು ಮೂರು ತಿಂಗಳು ಉಳಿದಿದೆ. ಇಂದಿನಿಂದಲೇ ಕ್ರಮಬದ್ಧವಾಗಿ ಅಧ್ಯಯನಕ್ಕೆ ತೊಡಗಿಕೊಂಡರೆ ಅತ್ಯುತ್ತಮ ಫಲಿತಾಂಶವನ್ನು ಪಡೆಯಬಹುದು ಎಂದರು.

ರೋಟರಿ ಕ್ಲಬ್‌ನ ಜಿಲ್ಲಾ ರಾಜ್ಯಪಾಲ ಸುರೇಶ್ ಹರಿ ಮಾತನಾಡಿ, ಇಂದಿನ ಪೋಷಕರು ಹಣ ನೀಡಿದರೆ ತಮ್ಮ ಮಕ್ಕಳಿಗೆ ಏನನ್ನು ಬೇಕಾದರೂ ಕೊಡಿಸಬಹುದು ಎಂಬ ಭಾವನೆ ಹೊಂದಿದ್ದಾರೆ. ಇಂತಹ ತಪ್ಪ ಭಾವನೆಗಳಿಂದ ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿವೆ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್. ಮರಿಗೌಡ ಮಾತನಾಡಿ ವಿದ್ಯಾರ್ಥಿಗಳು ಸಮಯದ ಸದುಪಯೋಗವನ್ನು ಮಾಡಿಕೊಳ್ಳಬೇಕು. ಗುರುರಾಜ ಕರ್ಜಗಿಯವರ ಮಾರ್ಗದರ್ಶನದಂತೆ ಓದಿನಲ್ಲಿ ತೊಡಗಿಸಿಕೊಳ್ಳಬೇಕು, ಜತೆಗೆ ಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ರೋಟರಿ ಕ್ಲಬ್‌ನ ಅಧ್ಯಕ್ಷ ಡಿ.ಪಿ. ಶಂಕರಲಿಂಗೇಗೌಡ, ಕಾರ್ಯದರ್ಶಿ ಸುನಿಲ್, ಪದಾಧಿಕಾರಿಗಳಾದ ನಕುಲ್, ಎಚ್. ರಮೇಶ್, ಕೆ.ವಿ. ಕಿರಣ್‌ಕುಮಾರ್, ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್. ಕುಮಾರಸ್ವಾಮಿ, ನಿರ್ದೇಶಕಿ ಸೌಮ್ಯಕುಮಾರ್‌, ಆಡಳಿತಾಧಿಕಾರಿ ಜಫ್ರಲ್ಲ, ಸ್ವಾಮಿ ಇದ್ದರು.

*
ಮಕ್ಕಳಿಗೆ ಪಾಲಕರೇ ದಾರಿ ದೀಪವಾಗಬೇಕು. ಪ್ರತಿಯೊಬ್ಬರು ಮೊದಲು ತಾಯಿ ತಂದೆಗಳಿಗೆ ಗೌರವಿಸುವುದನ್ನು ಕಲಿಯಬೇಕು
–ಡಾ. ಗುರುರಾಜ ಕರ್ಜಗಿ, ಶಿಕ್ಷಣ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.