ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮಾಲವಿ ಜಲಾಶಯದಲ್ಲಿ ಕ್ರಸ್ಟ್‍ಗೇಟ್‍ಗಳ ಬಳಿ ನೀರು ಹರಿಯದಂತೆ ಒಡ್ಡು ಕಟ್ಟಿರುವುದು
ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಮಾಲವಿ ಜಲಾಶಯದ ಕ್ರಸ್ಟ್ ಗೇಟ್‌ಗಳ ದುರಸ್ತಿಗೆ ಕೊನೆಗೂ ಅದೃಷ್ಟ ಒದಗಿಬಂದಿದೆ. ಈ ಮೂಲಕ ಬಹುಕಾಲದ ತಾಂತ್ರಿಕ ಸಮಸ್ಯೆಗೆ ಇತಿಶ್ರೀ ಹಾಡುವ ಸಮಯ ಕೂಡಿಬಂದಿದೆ.
ಜಲಾಶಯದ ಕ್ರಸ್ಟ್‌ಗೇಟ್‍ಗಳ 150 ಮೀಟರ್ ದೂರದಲ್ಲಿ ಮಣ್ಣಿನ ಒಡ್ಡು ಕಟ್ಟಿ ನೀರು ಹರಿಯದಂತೆ ತಡೆಯಲಾಗಿದೆ. ಕಾಮಗಾರಿಗೆ ಅನುಕೂಲವಾಗುವಂತೆ 1 ಅಡಿ ನೀರನ್ನು 2ನೇ ಕ್ರಸ್ಟ್ ಗೇಟ್ ಮೂಲಕ ಹೊರ ಬಿಡಲಾಗಿದೆ. ಈ ಮೂಲಕ ದುರಸ್ತಿ ಕಾಮಗಾರಿಗೆ ಚಾಲನೆ ಸಿಕ್ಕಿದೆ.
ಗುಜರಾತ್ ಮೂಲದ ವಿಜಯಪುರದಲ್ಲಿರುವ ಗುತ್ತಿಗೆದಾರ ರಾಜೇಂದ್ರ ಬೇತಾಳ್ ದುರಸ್ತಿಯ ಹೊಣೆಯನ್ನು ಹೊತ್ತಿದ್ದಾರೆ. ₹ 4.20 ವೆಚ್ಚದಲ್ಲಿ 10 ಕ್ರಸ್ಟ್‌ಗೇಟ್‍ಗಳ ದುರಸ್ತಿಯಾಗಲಿದೆ. ಅಣೆಕಟ್ಟೆಯಲ್ಲಿ 2 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಇದೆ. ಆದರೆ ಕ್ರಸ್ಟ್‌ಗೇಟ್‌ಗಳ ಸಮಸ್ಯೆಯಿಂದಾಗಿ ಇದುವರೆಗೂ ಜಲಾಶಯಕ್ಕೆ ನೀರು ಹರಿದುಬಂದ ವೇಗದಲ್ಲಿ ನೀರು ಪೋಲಾಗಿ ಹರಿದು ಹೋಗುತ್ತಿತ್ತು. 3 ವರ್ಷಗಳ ಹಿಂದೆ ದುರಸ್ತಿಗೆ ಟೆಂಡರ್ ಕರೆದಿದ್ದರೂ ಗುತ್ತಿಗೆ ಪಡೆಯಲು ಯಾರೂ ಮುಂದೆ ಬಂದಿರಲಿಲ್ಲ.
ಬೆಂಗಳೂರು ಮೂಲಕ 100 ಟನ್ ಸಾಮರ್ಥ್ಯ ಕ್ರೇನ್‍ಗಳ ತಾಂತ್ರಿಕ ತಜ್ಞರು ಜಲಾಶಯಕ್ಕೆ ಭೇಟಿ ನೀಡಿ ಎಲ್ಲ ಪರಿಶೀಲನೆ ನಡೆಸಿದ್ದಾರೆ. ಗೇಟ್‍ಗಳ ಬಳಿ ತೇವಾಂಶ ಇರುವುದರಿಂದ ಸಂಪೂರ್ಣ ಒಣಗಬೇಕು. ಅಲ್ಲಿ ಸಮತಟ್ಟಾದ ಗರಸು ಮಣ್ಣು ಹಾಕಿಸುವಂತೆ ಸಲಹೆ ನೀಡಿದ್ದಾರೆ. ವಾರದ ಒಳಗೆ ಕ್ರೇನ್‍ಗಳ ಸಹಾಯದಿಂದ ದುರಸ್ತಿ ಕಾರ್ಯ ಆರಂಭವಾಗಲಿದೆ ಎಂದು ಜಲಾಶಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
₹ 150 ಕೋಟಿ ಮೊತ್ತದಲ್ಲಿ ತುಂಗಭದ್ರಾ ಹಿನ್ನೀರು ಪ್ರದೇಶದಿಂದ ಜಲಾಶಯಕ್ಕೆ ನೀರು ಹರಿಸುವುದರ ಜತೆಗೆ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರಿಂದ 2022ರಲ್ಲಿ ಜಲಾಶಯ ಸಂಪೂರ್ಣ ಭರ್ತಿಯಾಗಿ ಒಳ ಹರಿವು ಹೆಚ್ಚಾಗಿತ್ತು, ಆಗ ನೀರು ಹೊರ ಬಿಡುವುದಕ್ಕೆ ಗೇಟ್‍ಗಳನ್ನು ತೆಗೆಯಲು ಮತ್ತು ಮುಚ್ಚಲು ಜಲಾಶಯದ ಸಿಬ್ಬಂದಿ ಹರಸಾಹಸ ಪಟ್ಟಿದ್ದರು. ಜೆಸಿಬಿ ಯಂತ್ರದ ಸಹಾಯದಿಂದ ಜಲಾಶಯದ ರಕ್ಷಣಾ ಗೋಡೆಯನ್ನು ಕೆಡವಿ ಗೇಟ್‍ಗಳನ್ನು ತೆರೆದು ಬಳಿಕ ಮುಚ್ಚಲಾಗಿತ್ತು. ನಂತರದಲ್ಲಿ 10ಗೇಟ್‍ಗಳಿಂದಲೂ ನೀರು ಹರಿದು ಪೋಲಾಗಿತ್ತು. ಅಂದಾಜು 2 ಟಿಎಂಸಿ ಅಡಿಗಳಷ್ಟು ಅಧಿಕ ನೀರು ಹಗರಿ ಹಳ್ಳದ ಮೂಲಕ ತುಂಗಭದ್ರಾ ಜಲಾಶಯದ ಪಾಲಾಗಿತ್ತು. ಜಲಾಶಯ ಸಂಪೂರ್ಣ ಖಾಲಿ ಆಗಿತ್ತು, ಕಳೆದ ವರ್ಷವೂ ಜಲಾಶಯ ಭರ್ತಿಯಾಗಿದ್ದರೂ ನೀರನ್ನು ಕೆರೆಗಳಿಗೆ ಕಾಲುವೆಗಳ ಮೂಲಕ ಹರಿಸಲಾಗಿತ್ತು. ಈಗ ಕೇವಲ ಮೂರು ಅಡಿಗಳಷ್ಟು ಮಾತ್ರ ನೀರು ಉಳಿದಿದೆ.
ಜಲಾಶಯದಿಂದ ನಿಗದಿತ ಅವಧಿಯಲ್ಲಿ ನೀರೊದಗಿದರೆ ತಾಲ್ಲೂಕಿನ 13 ಗ್ರಾಮಗಳ ಅಚ್ಚುಕಟ್ಟು ಪ್ರದೇಶದ 10 ಸಾವಿರ ಎಕರೆಗೂ ಹೆಚ್ಚು ಪ್ರದೇಶಕ್ಕೆ ನೀರುಣಿಸಬಹುದಾಗಿದೆ. ಜತೆಗೆ ಸಾವಿರಾರು ಕೊಳವೆಬಾವಿಗಳ ಅಂತರ್ಜಲ ಹೆಚ್ಚುತ್ತದೆ. ನನೆಗುದಿಗೆ ಬಿದ್ದಿರುವ ಕಾಮಗಾರಿಗೆ ಚಾಲನೆ ಸಿಕ್ಕಿರುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರು ಸಂತಸಗೊಂಡಿದ್ದಾರೆ.
ನಿಗದಿತ ಸಮಯದಲ್ಲಿ ಕ್ರಸ್ಟ್ ಗೇಟ್‌ಗಳ ದುರಸ್ತಿ ಕಾರ್ಯ ಮುಗಿಯಲಿದೆ. ಜಲಾಶಯದ ಎಲ್ಲ ತಾಂತ್ರಿಕ ಸಮಸ್ಯೆಗಳು ಬಗೆಹರಿಯಲಿವೆ. ವಾರದೊಳಗೆ ಕ್ರೇನ್‍ಗಳು, ಹಿಟಾಚಿಗಳು ಕಾರ್ಯನಿರ್ವಹಿಸಲಿವೆಹುಲಿರಾಜ, ಜೂನಿಯರ್ ಎಂಜಿನಿಯರ್, ಮಾಲವಿ ಜಲಾಶಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.