ADVERTISEMENT

ಹಾರೋಹಳ್ಳಿ: ಯುವತಿಗೆ ಅಶ್ಲೀಲ ಫೋಟೊ ಕಳಿಸುತ್ತಿದ್ದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 19:41 IST
Last Updated 9 ಡಿಸೆಂಬರ್ 2025, 19:41 IST
ಆರೋಪಿ ಶಿವಶಂಕರ್ (35)
ಆರೋಪಿ ಶಿವಶಂಕರ್ (35)   

ಹಾರೋಹಳ್ಳಿ: ಎಡಿಟ್ ಮಾಡಿದ ಅಶ್ಲೀಲ ಫೋಟೊ ಕಳುಹಿಸಿ ಯುವತಿಗೆ ತೊಂದರೆ ಕೊಡುತ್ತಿದ್ದ ಆರೋಪಿಯನ್ನು ಕಗ್ಗಲಿಪುರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರದ ಶಿವಶಂಕರ್(35) ಬಂಧಿತ ಆರೋಪಿ. ಈತ ಮೂಲತಃ ಬಳ್ಳಾರಿಯ ಕುರುಗೋಡು ಬಳಿಯ ಯಲ್ಲಾಪುರ ಗ್ರಾಮದ ನಿವಾಸಿ.   

ನ.16 ರಂದು ಆರೋಪಿಯು ದೂರುದಾರರಿಗೆ ವರ್ಕ್ ಫ್ರಮ್ ಹೋಂ ಕೆಲಸ ಕೊಡಿಸುವುದಾಗಿ ನಂಬಿಸಿ, ಪರಿಚಯ ಮಾಡಿಕೊಂಡಿದ್ದರು. ದೂರುದಾರರಿಂದ ಮುಂಗಡವಾಗಿ ₹500 ಪಡೆದು ನಂತರ ಮೊಬೈಲ್‌ ವಾಲೆಟ್‌ನಲ್ಲಿದ್ದ ದೂರುದಾರರ ಭಾವಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ದೂರುದಾರರಿಗೆ ಹಾಗೂ ಪರಿಚಯದವರಿಗೆ ಕಳುಹಿಸಿ ತೊಂದರೆ ನೀಡುತ್ತಿದ್ದ ಎಂದು ಯುವತಿ ಡಿ.5ರಂದು ಕಗ್ಗಲೀಪುರ ಠಾಣೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

ಆರೋಪಿಯನ್ನು ಡಿ.6 ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಬೆಂಗಳೂರಿನಲ್ಲಿ ಕೊರಿಯರ್‌ ಹಾಗೂ ಬಾಡಿಗೆ ಬೈಕ್‌ ಓಡಿಸುವ ಕೆಲಸ ಮಾಡುತ್ತಿದ್ದ ಆರೋಪಿ ಫ್ರೆಂಡ್‌ ಆ್ಯಪ್‌ ಮೂಲಕ ಯುವತಿಯರು ಮತ್ತು ಮಹಿಳೆಯರನ್ನು ಸಂಪರ್ಕಿಸಿ ವರ್ಕ್ ಫ್ರಮ್ ಹೋಂ ಕೆಲಸ ಕೊಡಿಸುವುದಾಗಿ ನಂಬಿಸುತ್ತಿದ್ದ. ಅವರಿಂದ ಫೋಟೊ ಹಾಗೂ ದಾಖಲೆ ಪಡೆದು ನಂತರ ಫೋಟೊಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ  ಪರಿಚಯಸ್ಥರಿಗೆ ಕಳಿಸುತ್ತಿದ್ದ ಎಂಬ ವಿಷಯ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಬಂಧಿತನಿಂದ ಕೃತ್ಯಕ್ಕೆ ಬಳಕೆ ಮಾಡಿದ ಮೊಬೈಲ್‌ ಫೋನ್‌ ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.