ADVERTISEMENT

ಹಾರೋಹಳ್ಳಿ | ಕೇಬಲ್ ಅಳವಡಿಕೆಗೆ ಲಂಚ: ಮುಖ್ಯಾಧಿಕಾರಿ ವಿರುದ್ಧ ಹರಿದಾಡಿದ ವಿಡಿಯೊ

ಕೇಬಲ್ ಅಳವಡಿಕೆಗೆ ₹3.50 ಲಕ್ಷ ಬೇಡಿಕೆ ಇಟ್ಟ ಹಾರೋಹಳ್ಳಿ ಪ.ಪಂ. ಮುಖ್ಯಾಧಿಕಾರಿ ಶ್ವೇತಾ ಬಾಯಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 6:38 IST
Last Updated 14 ಸೆಪ್ಟೆಂಬರ್ 2024, 6:38 IST
ಶ್ವೇತಾ ಬಾಯಿ ಮುಖ್ಯಾಧಿಕಾರಿ ಹಾರೋಹಳ್ಳಿ ಪಟ್ಟಣ ಪಂಚಾಯಿತಿ
ಶ್ವೇತಾ ಬಾಯಿ ಮುಖ್ಯಾಧಿಕಾರಿ ಹಾರೋಹಳ್ಳಿ ಪಟ್ಟಣ ಪಂಚಾಯಿತಿ   

ಹಾರೋಹಳ್ಳಿ: ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್‌ಸಿ) ಅಳವಡಿಕೆಗಾಗಿ ಇಲ್ಲಿನ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ವೇತಾ ಬಾಯಿ ಅವರು, ಗುತ್ತಿಗೆದಾರನೊಬ್ಬನಿಗೆ ₹3.50 ಲಕ್ಷಕ್ಕೆ ಬೇಡಿಕೆ ಇಟ್ಟಿರುವ ವಿಡಿಯೊ ಫೇಸ್‌ಬುಕ್, ವಾಟ್ಸ್‌ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಶುಕ್ರವಾರ ಬೆಳಿಗ್ಗೆಯಿಂದಲೇ ಹರಿದಾಡುತ್ತಿರುವ ವಿಡಿಯೊ ಭಾರಿ ಚರ್ಚೆಗೆ ಗ್ರಾಸವಾಗಿದೆ. 

ಕೇಬಲ್ ಅಳವಡಿಕೆಗೆ ಸಂಬಂಧಿಸಿದಂತೆ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಶ್ವೇತಾ ಅವರನ್ನು ಭೇಟಿಯಾಗಿ ಮಾತನಾಡಿರುವ ಆನೇಕಲ್ ಮೂಲದ ಈಶಾ ಎಂಟರ್‌ಪ್ರೈಸಸ್‌ನ ಗುತ್ತಿಗೆದಾರ ವಿಶ್ವನಾಥ್, ಅದನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ.

ವಿಡಿಯೊದಲ್ಲೇನಿದೆ?: ಪಟ್ಟಣದ ವ್ಯಾಪ್ತಿಯಲ್ಲಿ ಹಾಗೂ ಕೈಗಾರಿಕಾ ಪ್ರದೇಶದಲ್ಲಿ ಕೇಬಲ್ ಅಳವಡಿಕೆ ಕುರಿತು ಪ್ರಸ್ತಾಪಿಸಿರುವ ವಿಶ್ವನಾಥ್, ಪಟ್ಟಣದಲ್ಲಿ 2 ಕಿಲೋಮೀಟರ್ ರಸ್ತೆಯಲ್ಲಿ ಕೇಬಲ್ ಅಳವಡಿಕೆಗೆ ಸಹಕರಿಸುವಂತೆ ಕೋರಿದ್ದಾನೆ. ಅದಕ್ಕಾಗಿ, ಬೇರೆಯವರಿಗೆ ಹಣ ಕೊಟ್ಟಿರುವುದಾಗಿ ಗುತ್ತಿಗೆದಾರ ಹೇಳುತ್ತಾನೆ. ಆಗ ಶ್ವೇತಾ ಅವರು ಕಿ.ಮೀ.ಗೆ ₹2 ಲಕ್ಷದಂತೆ ₹4 ಲಕ್ಷಕ್ಕೆ ಬೇಡಿಕೆ ಇಟ್ಟು, ಕಡೆಗೆ ₹3.50 ಲಕ್ಷಕ್ಕೆ ಒಪ್ಪಿಕೊಳ್ಳುತ್ತಾರೆ. 

ADVERTISEMENT

ಹಣದ ಕುರಿತು ಮಾತನಾಡಿರುವ ವಿಷಯವನ್ನು ಬೇರೆ ಯಾರೊಂದಿಗೆ ಮಾತನಾಡಬಾರದು ಎಂದು ಹೇಳುವ ಶ್ವೇತಾ, ನಂತರ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ಕೇಬಲ್ ಅಳವಡಿಕೆಯ ವಿಷಯ ತಿಳಿಸುತ್ತಾರೆ. ಕೆಲಸಕ್ಕೆ ಸಂಬಂಧಿಸಿದಂತೆ, ಏನೇ ಇದ್ದರೂ ನೋಡಿಕೊಳ್ಳುವಂತೆ ಸೂಚನೆ ನೀಡುತ್ತಾರೆ.

ರೇಗಿಸಲು ವಿಡಿಯೊ: ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ವಿಶ್ವನಾಥ್, ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ್ದಾರೆ. ‘ಶ್ವೇತಾ ಬಾಯಿ ಅವರು ಚಂದಾಪುರ ಪಟ್ಟಣ ಪಂಚಾಯಿತಿಯಲ್ಲೂ ಮುಖ್ಯಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು. ಅಂದಿನಿಂದಲೂ ಅವರು ಪರಿಚಯವಿದ್ದಿದ್ದರಿಂದ ನನ್ನೊಂದಿಗೆ ಆತ್ಮೀಯವಾಗಿ ಮಾತನಾಡುತ್ತಿದ್ದರು. ಈ ವೇಳೆ ಅವರನ್ನು ರೇಗಿಸಲು ವಿಡಿಯೊ ಮಾಡಿಕೊಂಡಿದ್ದೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

‘ಕೇಬಲ್ ಅಳವಡಿಕೆಯ ಕಾಮಗಾರಿ ನಡೆಸಬೇಕಾದರೆ ಸಂಬಂಧಪಟ್ಟ ಪಂಚಾಯಿತಿಗೆ ಇಂತಿಷ್ಟು ಹಣವನ್ನು ಪಾವತಿಸಬೇಕು. ಅದರಂತೆ, ಹಾರೋಹಳ್ಳಿಯಲ್ಲಿ ಅಳವಡಿಸುವುದರ ಕುರಿತು ಶ್ವೇತಾ ಬಾಯಿ ಅವರೊಂದಿಗೆ ಚರ್ಚಿಸಲಾಗುತ್ತಿತ್ತು. ಆಗ ಚಿತ್ರೀಕರಿಸಿದ ವಿಡಿಯೊವನ್ನು ನನ್ನ ಯೂಟ್ಯೂಬ್‌ ಚಾನೆಲ್‌ಗೂ ಅ‍ಪ್ಲೋಡ್ ಮಾಡಲಾಗಿತ್ತು. ನಂತರ, ಆ ವಿಡಿಯೊ ಡಿಲಿಟ್ ಮಾಡಿದ್ದೇನೆ. ಅದೇ ವಿಡಿಯೊ ಈಗ ವೈರಲ್ ಆಗಿದ್ದು, ಮಾಧ್ಯಮಗಳಲ್ಲಿ ಪೂರ್ತಿ ತೋರಿಸದೆ ಕತ್ತರಿಸಿ ತೋರಿಸಲಾಗುತ್ತಿದೆ. ವಿಡಿಯೊಗೆ ಸಂಬಂಧಿಸಿದಂತೆ, ಈಗಾಗಲೇ ಜಿಲ್ಲಾಧಿಕಾರಿ ಕಚೇರಿಗೆ ಸ್ಪಷ್ಟನೆಯ ಪತ್ರವೊಂದನ್ನು ಸಲ್ಲಿಸಿದ್ದೇನೆ. ಅವರು ವಿಚಾರಣೆಗೆ ಕರೆದರೆ ಹೋಗಿ ಸತ್ಯ ತಿಳಿಸಲು ಸಿದ್ಧನಿದ್ದೇನೆ’ ಎಂದು ತಿಳಿಸಿದ್ದಾರೆ.

ಗುತ್ತಿಗೆದಾರ ವಿಶ್ವನಾಥ್
ನಾನು ಹಣಕ್ಕೆ ಬೇಡಿಕೆ ಇಟ್ಟಿಲ್ಲ. ಸರ್ಕಾರಿ ಶುಲ್ಕವನ್ನು ಪಾವತಿಸುವಂತೆ ಹೇಳಿದ್ದೆ. ಅದರ ಪೂರ್ತಿ ವಿಡಿಯೋ ತೋರಿಸದೆ ಅರ್ಧ ವಿಡಿಯೊ ತೋರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದೇನೆ ಎಂದು ಹಬ್ಬಿಸಲಾಗಿದೆ
ಶ್ವೇತಾ ಬಾಯಿ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಹಾರೋಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.