ಹಾರೋಹಳ್ಳಿ (ರಾಮನಗರ): ವರದಕ್ಷಿಣೆಗಾಗಿ ಪತ್ನಿಯನ್ನು ಹೊಡೆದು ಸಾಯಿಸಿ ಆತ್ಮಹತ್ಯೆಯ ಬಣ್ಣ ಕಟ್ಟಲು ಯತ್ನಿಸಿದ್ದ ಪತಿಗೆ ರಾಮನಗರದ (ಕನಕಪುರ) ಎರಡನೇ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ₹3.50 ಲಕ್ಷ ದಂಡ ವಿಧಿಸಿದೆ.
ಅನಿಲ್ ಕುಮಾರ್ ಶಿಕ್ಷೆಗೊಳಗಾದ ಅಪರಾಧಿ. ಆತನ ಪತ್ನಿ ಅಶ್ವಿನಿ (23) ವರದಕ್ಷಿಣೆ ಕಾರಣಕ್ಕೆ ಪತಿಯಿಂದ ಹಲ್ಲೆಗೊಳಗಾಗಿ ಜೀವ ಕಳೆದುಕೊಂಡವರು. ಚಾಲಕನಾಗಿ ಕೆಲಸ ಮಾಡುತ್ತಿದ್ದ ಅನಿಲ್‌ನನ್ನು ಅಶ್ವಿನಿ ಅವರು ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದರು.
ಮದುವೆ ಸಂದರ್ಭದಲ್ಲಿ ಅಶ್ವಿನಿ ಕುಟುಂಬದವರು ವರದಕ್ಷಿಣೆಯಾಗಿ ಚಿನ್ನಾಭರಣ ಕೊಟ್ಟಿದ್ದರೂ, ಮತ್ತಷ್ಟು ವರದಕ್ಷಿಣೆ ತರುವಂತೆ ಅನಿಲ್ ಆಗಾಗ ಪತ್ನಿಗೆ ಹಿಂಸೆ ನೀಡುತ್ತಿದ್ದ. 2020ರ ಮೇ 14ರಂದು ರಾತ್ರಿ ಅಶ್ವಿನಿಯೊಂದಿಗೆ ಅನಿಲ್ ಮತ್ತು ಕುಟುಂಬದವರು ಜಗಳವಾಡಿ ಹಲ್ಲೆ ನಡೆಸಿದ್ದರು. ಈ ಕುರಿತು ಅಶ್ವಿನಿ ತನ್ನ ಸಂಬಂಧಿಯೊಬ್ಬರಿಗೆ ಕರೆ ಮಾಡಿ ತಿಳಿಸಿದ್ದರು ಎಂದು ಪೊಲೀಸರು ಹೇಳಿದರು.
ಅದೇ ದಿನ ರಾತ್ರಿ 1 ಗಂಟೆ ಸುಮಾರಿಗೆ ಅಶ್ವಿನಿ ತಂದೆ ರಾಜಣ್ಣ ಅವರಿಗೆ ಕರೆ ಮಾಡಿದ್ದ ಓಣಿಕೇರಿ ಗ್ರಾಮಸ್ಥರು, ನಿಮ್ಮ ಮಗಳು ಅಶ್ವಿನಿ ಸತ್ತು ಹೋಗಿದ್ದಾಳೆ ಎಂದು ತಿಳಿಸಿದ್ದರು. ಕೂಡಲೇ ರಾಜಣ್ಣ ಗ್ರಾಮಕ್ಕೆ ಬಂದು ನೋಡಿದಾಗ, ನೇಣು ಬಿಗಿದ ಸ್ಥಿತಿಯಲ್ಲಿ ಅಶ್ವಿನಿ ಶವ ಪತ್ತೆಯಾಗಿತ್ತು.
ಬಳಿಕ ರಾಜಣ್ಣ ಅವರು, ವರದಕ್ಷಿಣೆಗಾಗಿ ಅನಿಲ್ ಮತ್ತು ಕುಟುಂಬದವರು ನನ್ನ ಮಗಳನ್ನು ಹೊಡೆದು ಸಾಯಿಸಿದ್ದಾರೆ ಎಂದು ಆರೋಪಿಸಿ ಅನಿಲ್ ಹಾಗೂ ಆತನ ಕುಟುಂಬದವರಾದ ರತ್ನಮ್ಮ, ಸಹನಾ ಹಾಗೂ ಕುಳ್ಳಮ್ಮ ವಿರುದ್ಧ ಠಾಣೆಗೆ ದೂರು ಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದರು.
ಬಂಧಿಸಿ ಜೈಲಿಗೆ ಕಳಿಸಿದ್ದರು:
ದೂರಿನ ಮೇರೆಗೆ ಅನಿಲ್ ಮತ್ತು ಕುಟುಂಬದವರ ವಿರುದ್ಧ ಐಪಿಸಿ 498(ಎ) (ವಿವಾಹಿತ ಮಹಿಳೆ ಮೇಲೆ ಪತಿ ಅಥವಾ ಆತನ ಕುಟುಂಬದವರಿಂದ ಕ್ರೌರ್ಯ), ಐಪಿಸಿ 304 (ಬಿ) (ವರದಕ್ಷಿಣೆ ಸಾವು), ಐಪಿಸಿ 34 (ಅಪರಾಧಕ್ಕೆ ಸಂಚು) ಹಾಗೂ ಇತರ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಅನಿಲ್‌ನನ್ನು ಬಂಧಿಸಿ ಜೈಲಿಗೆ ಕಳಿಸಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡಿದ್ದ ರಾಮನಗರದ ಹಿಂದಿನ ಡಿವೈಎಸ್ಪಿ ಪುರುಷೋತ್ತಮ ಪಿ.ಎ ಅವರು, ಅಶ್ವಿನಿ ಸಾವಿಗೆ ವರದಕ್ಷಿಣೆಗಾಗಿ ನಡೆದ ಹಲ್ಲೆಯೇ ಕಾರಣ ಎಂದು ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು ಎಂದು ಪೊಲೀಸರು ಹೇಳಿದರು.
ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಎಚ್.ಎನ್. ಕುಮಾರ್ ಅವರು, ಅನಿಲ್ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ಮತ್ತು ₹3.50 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದರು. ಪ್ರಕರಣದಲ್ಲಿ ಆತನ ಕುಟುಂಬದ ಮೂವರು ಆರೋಪಿಗಳು ಖುಲಾಸೆಯಾಗಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕಿ ಎಂ.ಕೆ. ರೂಪಲಕ್ಷ್ಮಿ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.