ಹಾರೋಹಳ್ಳಿ: ತಾಲೂಕಿನಾದ್ಯಂತ ವಿವಿಧ ಯೋಜನೆಗಳಲ್ಲಿ ಆರಂಭಗೊಂಡಿದ್ದ ಸಮುದಾಯ ಭವನ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿದೆ. ಸರ್ಕಾರ ಸೂಕ್ತ ಸಮಯದಲ್ಲಿ ಹಣ ಬಿಡುಗಡೆ ಮಾಡದ ಪರಿಣಾಮ ಅರ್ಧಕ್ಕೆ ನಿಂತಿರುವ ಭವನಗಳು ದನದ ಕೊಟ್ಟಿಗೆಯಂತೆ ಬಳಕೆಯಾಗುತ್ತಿವೆ.
ತಾಲೂಕಿನಲ್ಲಿ ಕೆಲವು ವರ್ಷಗಳ ಹಿಂದೆ ಆರಂಭಗೊಂಡಿದ್ದ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಬಹಳಷ್ಟು ಭವನಗಳು ಅಡಿಪಾಯ ಹಂತದಲ್ಲೇ ನಿಂತಿದ್ದು ಮೇಲೆದ್ದಿಲ್ಲ. ಕೆಲ ಭವನಗಳ ಕಾಮಗಾರಿ ಶೇ50ರಷ್ಟು ಪೂರ್ಣಗೊಂಡಿದ್ದರೂ ಅಂತಿಮ ಹಂತದ ಕೆಲಸ ಮಾಡಿ ಅವುಗಳನ್ನು ಉದ್ಘಾಟನೆ ಮಾಡಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ಆರಂಭಗೊಂಡಿದ್ದ ಬಹುತೇಕ ಸಮುದಾಯ ಭವನಗಳ ಕಾಮಗಾರಿ ಅರ್ಧಕ್ಕೆ ನಿಂತಿವೆ. ಇದಕ್ಕಾಗಿ ನೂರಾರು ಕೋಟಿ ಹಣ ಪೋಲಾಗಿದೆ.
ಸಮುದಾಯ ಸುತ್ತಮುತ್ತ ಆಳೆತ್ತರ ಗಿಡಗಂಟಿ ಬೆಳೆದು ನಿಂತಿವೆ. ಲಕ್ಷಾಂತರ ರೂಪಾಯಿ ಸರ್ಕಾರದ ಹಣ ಖರ್ಚು ಮಾಡಿ ನಿರ್ಮಿಸಿರುವ ಭವನ ಹಾವು, ಹಲ್ಲಿಗಳ ಆವಾಸ ಸ್ಥಾನವಾಗಿದೆ. ಸಮುದಾಯ ಭವನ ಆವರಣ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ರಾತ್ರಿ ವೇಳೆ ಮದ್ಯ ಸೇವನೆ ಮಾಡುವವರು ಆವರಣದಲ್ಲಿ ಮೋಜು, ಮಸ್ತಿ ಮಾಡುತ್ತಿದ್ದಾರೆ.
ಬಹುತೇಕ ಸಮುದಾಯ ಭವನಗಳ ಕಾಮಗಾರಿ ಅನುದಾನ ಕೊರತೆಯಿಂದ ಸ್ಥಗಿತಗೊಂಡಿದೆ. ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭವನಕ್ಕೆ ಶಂಕು ಸ್ಥಾಪನೆ ಮಾಡಿದ್ದು ಹಣವನ್ನು ಸಕಾಲದಲ್ಲಿ ಬಿಡುಗಡೆ ಮಾಡದ ಕಾರಣ ಕಟ್ಟಡ ಕಾಮಗಾರಿ ನಡೆದಿಲ್ಲ.
ರಾಜಕೀಯ ಮೇಲಾಟ, ಅನುದಾನ ಮತ್ತು ಇಚ್ಛಾಶಕ್ತಿ ಕೊರತೆಯಿಂದ ತಾಲ್ಲೂಕಿನ ಹಲವೆಡೆ 10ಕ್ಕೂ ಹೆಚ್ಚು ಸಮುದಾಯ ಭವನಗಳು ಅರ್ಧಕ್ಕೆ ನಿಂತಿದ್ದರೆ ಮತ್ತೊಂದಷ್ಟು ಭವನಗಳಿಗೆ ಪೂಜೆ ಸಲ್ಲಿಸಿ ಅಡಿಗಲ್ಲು ಹಾಕದಿರುವುದು ಇಲ್ಲಿನ ಅಭಿವೃದ್ಧಿ ಕೆಲಸಗಳಿಗೆ ಹಿಡಿದ ಕೈಗನ್ನಡಿ ಆಗಿದೆ.
ಎಲ್ಲೆಲ್ಲಿ ಅರ್ಧ ಕಾಮಗಾರಿ: ಹಾರೋಹಳ್ಳಿ ಕೆಲವಡೆ ಕಾಮಗಾರಿ ಆರಂಭವಾಗಿದೆ. ಕೆಬ್ಬೆದೊಡ್ಡಿ, ದೊಡ್ಡ ಮುದವಾಡಿ, ಹಾರೋಹಳ್ಳಿ–ಆನೇಕಲ್ ರಸ್ತೆ ಓಂ ಶಕ್ತಿ ದೇವಾಲಯದ ಬಳಿ ಸಮುದಾಯ ಭವನ ಕಾಮಗಾರಿ ಆರಂಭವಾಗಿ ಅರ್ಧಕ್ಕೆ ನಿಂತು ದಶಕ ಕಳೆದರೂ ಕಟ್ಟಡದ ಕಾಮಗಾರಿ ಪೂರ್ಣಗೊಳಿಸದೆ ಬಿಟ್ಟಿರುವುದರಿಂದ ಈವರೆಗೆ ಮಾಡಿದ ಸರ್ಕಾರದ ವೆಚ್ಚ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಕ್ಕಸಂದ್ರ, ಚೀಲೂರು, ಟಿ.ಹೊಸಹಳ್ಳಿ, ಮಲ್ಲಿಗೆಮೆಟ್ಟಿಲು,ತೋಕಸಂದ್ರ, ಗೂಗರೇದೊಡ್ಡಿ, ಕೊಟ್ಟಗಾಳು, ಗ್ರಾಮಗಳು ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಈ ಹಿಂದಿನ ಶಾಸಕರು ಭೂಮಿ ಪೂಜೆ ನೆರವೇರಿಸಿದ್ದಾರೆ ಅಷ್ಟೇ. ಆದರೆ, ಅನುದಾನದ ಕೊರತೆಯಿಂದ ಇದುವರೆಗೂ ಭವನ ನಿರ್ಮಿಸುವ ಕಾಮಗಾರಿಗೆ ಚಾಲನೆಯೇ ಸಿಕ್ಕಿಲ್ಲ. ಇದರಿಂದಾಗಿ ಭವನದ ಉದ್ದೇಶ ಈಡೇರದಂತಾಗಿದೆ ಎಂದು ಜನಸಾಮಾನ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮುದಾಯ ಭವನ ನಿರ್ಮಾಣದ ಹಿಂದೆ ರಾಜಕೀಯ ಇರುವುದರಿಂದ ಬಹುತೇಕ ಸಮುದಾಯ ಭವನಗಳು ಅರ್ಧಕ್ಕೆ ನಿಂತಿವೆ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಸಾರ್ವಜನಿಕರ ಹಣ ಪೋಲು ಮಾಡಿ ಅರ್ಧಕ್ಕೆ ಬಿಟ್ಟಿರುವುದರಿಂದ ಅಲ್ಲಿನ ಸಾಮಗ್ರಿಗಳನ್ನು ಹೊತ್ತು ಹೋಗುತ್ತಿದ್ದಾರೆ. ಮತ್ತೆ ಹೊಸ ಪ್ರಸ್ತಾವ ಸಲ್ಲಿಸಿ ಕಾಮಗಾರಿ ಆರಂಭಿಸಬೇಕು. ಇದ್ದ ಸಮುದಾಯ ಭವನಗಳು ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗಿ ಹೋಗುತ್ತಿವೆ.
ಅನುದಾನ ಕೊರತೆ
ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಕೊರತೆ ಎದುರಾಗಿದೆ. ಅನುದಾನ ಬಂದ ತಕ್ಷಣ ಮತ್ತೆ ಕಾಮಗಾರಿ ಆರಂಭಿಸಲಾಗುವುದು ಗೋವಿಂದರಾಜು ಎಚ್.ವಿ ಕಾರ್ಯಪಾಲಕ ಎಂಜಿನಿಯರ್ ನಿರ್ಮಿತಿ ಕೇಂದ್ರ ರಾಮನಗರ ಬಡ ಜನರಿಗೆ ಅನುಕೂಲ ಜನರ ಅನುಕೂಲಕ್ಕಾಗಿ ಸಾವಿರಾರು ರೂಪಾಯಿ ವೆಚ್ಚದಲ್ಲಿ ಕೈಗೊಂಡಿದ್ದ ಸಮುದಾಯ ಭವನ ಕಾಮಗಾರಿಯು ಬಹಳ ವರ್ಷಗಳಿಂದ ಅರ್ಧಕ್ಕೆ ನಿಂತಿದೆ.
ಸಮುದಾಯ ಭವನದ ಕಾಮಗಾರಿ ಶೀಘ್ರ ಪೂರ್ಣಗೊಂಡರೆ ಈ ಭಾಗದ ಬಡವರಿಗೆ ಮದುವೆ ಮತ್ತು ಇತರೆ ಶುಭ ಕಾರ್ಯ ಮಾಡಲು ತುಂಬಾ ಅನುಕೂಲವಾಗಲಿದೆ. ರಮೇಶ್ ಕೆಬ್ಬೆದೊಡ್ಡಿ ಗ್ರಾಮಸ್ಥ ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕರ ಅನುಕೂಲಕ್ಕೆ ಓಂ ಶಕ್ತಿ ದೇವಾಲಯದ ಪಕ್ಕದಲ್ಲಿ ಸಮುದಾಯ ಭವನ ನಿರ್ಮಿಸಲು ಅನುದಾನ ಬಿಡುಗಡೆಯಾಗಿ ಕಾಮಗಾರಿಯೂ ಆರಂಭವಾಗಿತ್ತು. ಈಗ ಕಾಮಗಾರಿ ಸ್ಥಗಿತಗೊಂಡಿದ್ದು ಶೀಘ್ರ ಸಮುದಾಯ ಭವನ ನಿರ್ಮಾಣ ಮಾಡಬೇಕು ಭಾನುಪ್ರಕಾಶ್ ಹಾರೋಹಳ್ಳಿ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.