ಹಾರೋಹಳ್ಳಿ: ತಾಲೂಕಿನ ಹೊನ್ನಾಗಲದೊಡ್ಡಿ ಗ್ರಾಮದ ದಲಿತ ಕಾಲೊನಿಯಲ್ಲಿ ಜನರು ವಾಸಿಸಲು ಬೇಕಾದ ಕನಿಷ್ಠ ಮೂಲ ಸೌಕರ್ಯ ಇಲ್ಲದೆ, ಇಲ್ಲಿನ ನಿವಾಸಿಗಳು ಸಮಸ್ಯೆಗಳಿಗೆ ಹೊಂದಿಕೊಂಡು ಕಷ್ಟದಲ್ಲೇ ಜೀವನ ಸಾಗಿಸುತ್ತಿದ್ದಾರೆ.
ಇಲ್ಲಿ ಸುಮಾರು 35 ಮನೆಗಳಿದ್ದು, ಪರಿಶಿಷ್ಟ ಜಾತಿಯ ಕೂಲಿ ಕಾರ್ಮಿಕರು ಬದುಕು ನಡೆಸುತ್ತಿದ್ದಾರೆ. ಉತ್ತಮ ರಸ್ತೆ, ಚರಂಡಿ ವ್ಯವಸ್ಥೆ, ಸ್ವಚ್ಛತೆ ಮತ್ತು ಕುಡಿಯುವ ನೀರಿನ ಸೌಲಭ್ಯ ಇಲ್ಲದೆ ನಿವಾಸಿಗಳು ಪರಿಪಿಸುವಂತಾಗಿದೆ.
ಹಲವು ವರ್ಷಗಳ ಹಿಂದೆ ಹಾಕಲಾಗಿದ್ದ ಕಾಂಕ್ರಿಟ್ ರಸ್ತೆ ಕಿತ್ತು ಹೋಗಿದ್ದು, ಸಂಚಾರಕ್ಕೆ ತೊಂದರೆ ಆಗುತ್ತಿದೆ. ಕಾಲೊನಿಯಲ್ಲಿ ಒಳ ಚರಂಡಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದ ತಗ್ಗು ಪ್ರದೇಶದಲ್ಲಿ ಕೊಳಚೆ ಹರಿಯುತ್ತಿದ್ದು, ಮನೆ ಮುಂದೆ ಕೊಳಚೆ ನಿಲ್ಲುತ್ತದೆ.
ಅಲ್ಲದೆ ಇರುವ ಚರಂಡಿಯಲ್ಲೂ ಕಸ ಸಂಗ್ರಹವಾಗಿದೆ. ಗಿಡ ಗಂಟಿಗಳು ಬೆಳೆದು ನಿಂತು ವಿಷ ಜಂತುಗಳ ತಾಣವಾಗಿದೆ. ಇದರಿಂದ ಗಲೀಜು ತಾಂಡವವಾಡುತ್ತಿದ್ದು, ಸಾಂಕ್ರಾಮಿಕ ಕಾಯಿಲೆ ಭೀತಿ ಇಲ್ಲಿನ ಜನರನ್ನು ಆವರಿಸಿದೆ.
ಕೆಟ್ಟು ಹೋಗುವ ಬೀದಿದೀಪ: ಖಾಲಿ ಜಾಗಗಳಲ್ಲಿ ಗಿಡ ಗಂಟೆಗಳು ಬೆಳೆದು, ಹಾವು, ಚೇಳು ಮತ್ತು ಕ್ರಿಮಿ ಕೀಟಗಳ ವಾಸಸ್ಥಾನವಾಗಿದೆ. ಬೀದಿ ದೀಪ ಆಗ್ಗಾಗ ಕೆಟ್ಟು ನಿಲ್ಲುವುದು ಸಾಮಾನ್ಯವಾಗಿದೆ. ಇದರಿಂದ ರಾತ್ರಿ ವೇಳೆ ಸಂಚರಿಸುವುದು ಸವಾಲಾಗಿದೆ. ವೃದ್ಧರು, ಮಕ್ಕಳು ಮತ್ತು ಮಹಿಳೆಯರು ಸಂಜೆ ಆಗುತ್ತಿದ್ದಂತೆ ಮನೆ ಸೇರಿಕೊಳ್ಳಬೇಕಿದೆ.
ಕಾಲೊನಿಯಲ್ಲಿ ಕುಡಿಯುವ ನೀರಿಗೆ ಒಂದೇ ಟ್ಯಾಂಕ್ ಇದೆ. ಅದರಲ್ಲಿಯೇ ಎಲ್ಲರೂ ಸಹ ಕುಡಿಯಲು ಮತ್ತು ದಿನ ಬಳಕೆಗೆ ನೀರು ಹಿಡಿದುಕೊಳ್ಳಬೇಕು. ಆದರೆ ಈ ಟ್ಯಾಂಕ್‌ಗೆ ಇರುವುದು ಒಂದೇ ನಲ್ಲಿ. ಒಬ್ಬರು ನೀರು ಹಿಡಿದುಕೊಳ್ಳುವವರೆಗೆ ಉಳಿದ ಜನ ಕಾಯುವ ಸ್ಥಿತಿ ಇದೆ. ಹೀಗಾಗಿ ಟ್ಯಾಂಕ್ ಹೆಚ್ಚು ನಳಗಳನ್ನು ಅಳವಡಿಸಬೇಕೆಂಬುದು ಸ್ಥಳೀಯರ ಒತ್ತಾಯ.
ದಲಿತ ಕಾಲೋನಿಗೆ ದಶಕಗಳೇ ಉರುಳಿದರೂ ಉತ್ತಮ ರಸ್ತೆ ಚರಂಡಿ ನಿರ್ಮಾಣಮಾಡದೇ ನಿರ್ಲಕ್ಷ್ಯ ವಹಿಸಲಾಗಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತು ಮೂಲಸೌಕರ್ಯ ಒದಗಿಸಬೇಕುವನಜಾ ದಲಿತ ಕಾಲೊನಿ ನಿವಾಸಿ
ಮೂಲ ಸೌಕರ್ಯ ಒದಗಿಸಿ ಅಭಿವೃಧ್ದಿಪಡಿಸಲು ಕ್ರಿಯಾಯೋಜನೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇಲ್ಲಿನ ನಿವಾಸಿಗಳ ಸಮಸ್ಯೆ ಬಗೆಹರಿಸಲಾಗುವುದುಸಿದ್ದಮುಗಿಲೇಗೌಡ ಪಿಡಿಒ ಕೊಳ್ಳಿಗಾನಹಳ್ಳಿ
ಮನವಿ ಸ್ಪಂದಿಸಿದ ಸ್ಥಳೀಯ ಆಡಳಿತಗಳು
ರಸ್ತೆ ದುರಸ್ತಿ ನೀರು ಬೀದಿದೀಪ ಸಮಸ್ಯೆ ಸರಿಪಡಿಸಿ ಚರಂಡಿ ವ್ಯವಸ್ಥೆ ಕಲ್ಪಿಸಬೇಕೆಂದು ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಆಡಳಿತಕ್ಕಡ ಲಿಖಿತ ಮತ್ತು ಮೌಖಿಕ ಮನವಿ ಸಲ್ಲಿಸಿದ್ದರೂ ಇದುವರೆಗೆ ಯಾವ ಅಧಿಕಾರಿಯೂ ಕಾಲೊನಿಗೆ ಭೇಟಿ ನೀಡಿ ಇಲ್ಲಿನ ಸಮಸ್ಯೆ ಅರಿಯುವ ಪ್ರಯತ್ನ ಮಾಡಿಲ್ಲ ಎಂದು ದೂರುತ್ತಾರೆ ಸ್ಥಳೀಯರು. ಸ್ಥಳೀಯ ಆಡಳಿತ ಸಂಸ್ಥೆಗಳ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹೊನ್ನಾಗಲದೊಡ್ಡಿಗೆ ಭೇಟಿ ನೀಡಿ ಸಮಸ್ಯೆ ಅರಿತು ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಶಿಷ್ಟರಿಗಾಗಿ ಜಾರಿಗೊಳಿಸಿರುವ ಹಲವು ಯೋಜನೆಗಳ ಅರಿವು ಈ ಕಾಲೊನಿಯ ಜನತೆ ತಿಳಿದಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ ಕ್ರಮವಹಿಸಬೇಕೆಂದು ಇಲ್ಲಿನ ವಿದ್ಯಾವಂತರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.