
ಹಾರೋಹಳ್ಳಿ: ಶಾಸಕ ಇಕ್ಬಾಲ್ ಹುಸೇನ್ ಹಾಗೂ ಹಾರೋಹಳ್ಳಿ ತಹಸೀಲ್ದಾರ್ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಇಬ್ಬರೂ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ರೈತ ಸಂಘ ಮತ್ತು ಬಿಜೆಪಿ– ಜೆಡಿಎಸ್ ಕಾರ್ಯಕರ್ತರು ಸೋಮವಾರ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸ್ವತಂತ್ರವಾಗಿ ಕೆಲಸ ಮಾಡಬೇಕಿದ್ದ ತಹಶೀಲ್ದಾರ್, ಶಾಸಕ ಇಕ್ಬಾಲ್ ಹುಸೇನ್ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದು, ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಪ್ರತಿಭಟನನಿರತರು ಆರೋಪಿಸಿದರು.
ತಾಲ್ಲೂಕು ಕಚೇರಿ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆಗೆ ಶಾಸಕರು ಹಾಗೂ ತಹಶೀಲ್ದಾರ್, ಸಂಸದ ಡಾ. ಸಿ.ಎನ್.ಮಂಜುನಾಥ್ ಅವರನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.
ಹಾರೋಹಳ್ಳಿಯಿಂದ 5 ಕಿಲೋ ಮೀಟರ್ ದೂರದಲ್ಲಿ ತಾಲ್ಲೂಕು ಕಚೇರಿ ನಿರ್ಮಾಣ ಮಾಡಲು ಹೊರಟಿದ್ದಾರೆ. ಪಟ್ಟಣದಲ್ಲಿ ಕಚೇರಿ ತೆರೆಯಲು ಈ ಹಿಂದೆ ನಿರ್ಣಯ ಮಾಡಲಾಗಿತ್ತು, ಪಟ್ಟಣದದಲ್ಲಿ ಸಾಕಷ್ಟು ಜಾಗ ಇದ್ದರೂ ಯಾರ ಸಲಹೆ ಪಡೆಯದೆ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡಿರುವುದು ಸರಿಯಲ್ಲ. ಇದನ್ನು ಕೈ ಬಿಡದಿದ್ದರೆ ಮುಂದೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ತಾಲ್ಲೂಕು ಕಚೇರಿ ಉದ್ಘಾಟನೆಗಾಗಿ ತಂದಿದ್ದ ಪಟಾಕಿಗಳು ಇನ್ನೂ ಕಚೇರಿ ಆವರಣದಲ್ಲಿಯೇ ಇದ್ದವು. ಖಾಸಗಿ ವಾಹನದಲ್ಲಿ ಪಟಾಕಿ ಬಾಕ್ಸ್ ಇಡಲಾಗಿತ್ತು. ಇದನ್ನು ಕಂಡ ಪ್ರತಿಭಟನಾಕಾರರು ಪ್ರಕರಣ ದಾಖಲಿಸುವಂತೆ ಪಟ್ಟು ಹಿಡಿದರು. ಹಾರೋಹಳ್ಳಿ ಪೊಲೀಸರು ಪಟಾಕಿ ತುಂಬಿದ್ದ ವಾಹನವನ್ನು ವಶಕ್ಕೆ ಪಡೆದರು.
ಬಿಜೆಪಿ ಜಿಲ್ಲಾಧ್ಯಕ್ಷ ಅನಂತಸ್ವಾಮಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಸಬ್‌ಕೆರೆ ಶಿವಲಿಂಗಯ್ಯ, ಪಿಚ್ಚನಕೆರೆ ಜಗದೀಶ್, ತಾ.ಪಂ. ಮಾಜಿ ಸದಸ್ಯ ಕೆ.ಎನ್.ರಾಮು, ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೆಚ್.ಎಸ್.ಮುರುಳಿಧರ್,ಮೇಡಮಾರನಹಳ್ಳಿ ಕುಮಾರ್, ತೋಕಸಂದ್ರ ಶಿವರುದ್ರ, ಪಡುವಣಗೆರೆ ಸಿದ್ದರಾಜು, ಮುದುವಾಡಿ ನಾಗರಾಜ್, ಮಲ್ಲಪ್ಪ, ಮರಳವಾಡಿ ತಮ್ಮಣ್ಣ, ಶೇಷಾದ್ರಿರಾಮು, ಸೋಮಸುಂದರ್, ಬಿಜೆಪಿ ತಾಲ್ಲೂಕು ಅಧ್ಯಕ್ಷ , ವಕೀಲ ಚಂದ್ರಶೇಖರ್, ಶಿವಮುತ್ತು , ಕೆ.ಆರ್.ಸುರೇಶ್, ರೈತ ಸಂಘದ ಹರೀಶ್, ಬಿ.ಎಂ.ಪ್ರಕಾಶ್, ಆರ್.ವಿ.ಹೊನ್ನೇಗೌಡ, ಅನಂತರಾಮ್, ಬಾಲಾಜಿ, ಗಜೇಂದ್ರಸಿಂಗ್, ರಘು, ಗಿರೀಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.