ADVERTISEMENT

ಹಾರೋಹಳ್ಳಿ ಗ್ರಾಮಾಂತರ ಪ್ರೌಢಶಾಲೆ ಮಾನ್ಯತೆ ರದ್ದು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 2:30 IST
Last Updated 3 ಸೆಪ್ಟೆಂಬರ್ 2025, 2:30 IST
<div class="paragraphs"><p>ಶಾಲೆ</p></div>

ಶಾಲೆ

   

(ಸಾಂಕೇತಿಕ ಚಿತ್ರ)

ಹಾರೋಹಳ್ಳಿ: ಸರ್ಕಾರ ನಿಗದಿಪಡಿಸಿದ್ದ ಶುಲ್ಕಕ್ಕಿಂತ ಹೆಚ್ಚು ಶುಲ್ಕ ವಸೂಲಿ ಮಾಡಿದ ಹಾರೋಹಳ್ಳಿ ಗ್ರಾಮಾಂತರ ಪ್ರೌಢಶಾಲೆಯ ಮಾನ್ಯತೆಯನ್ನು ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ನಿರ್ದೆಶನದ ಮೇರೆಗೆ ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕರು ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ.

ADVERTISEMENT

ಪ್ರೌಢಶಾಲೆಯಲ್ಲಿ ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹೆಣ್ಣು ಮಕ್ಕಳಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗಿದೆ. ಈ ಬಗ್ಗೆ ತನಿಖೆ ಕೈಗೊಂಡು ಶಿಸ್ತು ಕ್ರಮ ಕೈಗೊಳ್ಳಬೇಕು. ಜೊತೆಗೆ ಹೆಚ್ಚುವರಿ ಪಾವತಿ ಹಣವನ್ನು ವಾಪಸ್ ಕೊಡುವಂತೆ ಸೂಚಿಸಬೇಕೆಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ವಕೀಲ ಕೆ.ಎಸ್.ಮನೋಜ್ ದೂರು ಸಲ್ಲಿಸಿದ್ದರು.

ದೂರಿನನ್ವಯ ಶಿಕ್ಷಣಾಧಿಕಾರಿಗಳು ಮತ್ತು ಸಿಬ್ಬಂದಿ ತಂಡ ತಪಾಸಣೆ ನಡೆಸಿದಾಗ, ಆಡಳಿತ ಮಂಡಳಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಂದ ₹3,500 ಹಾಗೂ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಂದ ₹4,000 ಅಭಿವೃದ್ಧಿ ಶುಲ್ಕವೆಂದು ವಸೂಲಿ ಮಾಡಿದ್ದಾರೆ. 2017–18ನೇ ಸಾಲಿನಿಂದ 2023–24ನೇ ಸಾಲಿನವರೆಗೆ ಅಭಿವೃದ್ಧಿ ಶುಲ್ಕವಾಗಿ ಆಡಳಿತ ಮಂಡಳಿ ಖಾತೆಗೆ ₹70.23 ಲಕ್ಷ ಹಣ ಜಮಾವಾಗಿದೆ ಎಂದು ತಿಳಿದು ಬಂದಿದೆ.

ಈ ಶಾಲೆ ಅನುದಾನಿತ ಶಾಲೆಯಾಗಿದ್ದು, ನಿಯಮಬಾಹಿರವಾಗಿ ಶುಲ್ಕ ವಸೂಲಿ ಮಾಡಿದ್ದಾರೆ. ಈ ಬಗ್ಗೆ ಶಾಲಾ ಆಡಳಿತ ಮಂಡಳಿಗೆ ಕಾರಣ ಕೇಳಿ ಇಲಾಖೆ ನೋಟಿಸ್ ನೀಡಲಾಗಿತ್ತು. ಇದಕ್ಕೆ ಉತ್ತರಿಸಿದ ಆಡಳಿತ ಮಂಡಳಿ ಇದು ಅನುದಾನಿತ ಶಾಲೆ. ಈ ಶಾಲೆಯಲ್ಲಿ ಕಾಯಂ ಆಗಿ ಅನುಮೋದನೆಗೊಂಡ ಶಿಕ್ಷಕರಿಗೆ ಮಾತ್ರ ವೇತನ ನೀಡುತ್ತಿದೆ. ಅದನ್ನು ಹೊರತು ಪಡಿಸಿ ಯಾವುದೇ ಅನುದಾನ ಬರುತ್ತಿಲ್ಲ. ಹಾಗಾಗಿ ಶಾಲೆಯ ಶೌಚಾಲಯ, ಕುಡಿವ ನೀರು, ವಿದ್ಯುತ್, ಕೊಠಡಿಗಳ ನಿರ್ವಹಣೆ, ಶಿಕ್ಷಕರ ವೇತನ ಮತ್ತು ಸ್ವಚ್ಛತೆ ಮತ್ತಿತರ ಖರ್ಚುಗಳಿಗೆ ಸಂಪನ್ಮೂಲ ಕೊರತೆಯಿಂದ ನಿರ್ವಹಣೆಗಾಗಿ ಶಾಲಾ ಅಭಿವೃದ್ಧಿವೆಂದು ವಿದ್ಯಾರ್ಥಿಗಳಿಂದ ಪಡೆಯಲಾಗಿದೆ ಎಂದು ಆಡಳಿತ ಮಂಡಳಿ ಉತ್ತರಿಸಿತ್ತು.

ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲಿ ಹಾಗೂ ಆಡಳಿತ ಮಂಡಳಿ ನೀಡಿರುವ ಲಿಖಿತ ಹೇಳಿಕೆ ನಿಯಮಬಾಹಿರ ಎಂಬುದು ಕಂಡು ಬಂದಿದ್ದು, ಶಾಲೆಯ ವೇತನ ಅನುದಾನವನ್ನು ಹಿಂಪಡೆಯುವ ಬಗ್ಗೆ ಇಲಾಖೆ ಆಯುಕ್ತರ ಕಚೇರಿಯಿಂದ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು.

ವಿದ್ಯಾರ್ಥಿಗಳ ಹಣ ದುರುಪಯೋಗ ಪಡಿಸಿಕೊಂಡಿದ್ದಕ್ಕೆ ಆಡಳಿತ ಮಂಡಳಿ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರ ನಿರ್ದೇಶನ ನೀಡಿತ್ತು. ಆ ನಿರ್ದೇಶನದ ಮೇರೆಗೆ ಇಲಾಖೆ ಮಾನ್ಯತೆಯನ್ನು ರದ್ದುಗೊಳಿಸಲು ಆದೇಶ ಹೊರಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.