
ರಾಮನಗರ: ‘ಎಲ್ಲರೂ ಅಧಿಕಾರದ ಕನಸು ಕಾಣುತ್ತಾರೆ. ಆದರೆ, ಕನಸ್ಸಿದ್ದರಷ್ಟೇ ಅಧಿಕಾರಕ್ಕೆ ಬರಲು ಸಾಧ್ಯವಾಗುವುದಿಲ್ಲ. ಅದಕ್ಕೆ ಜನಾಶೀರ್ವಾದವೂ ಬೇಕು. ಜನಪರವಾದ ಕೆಲಸಗಳನ್ನು ಮಾಡಿರುವ ಕಾಂಗ್ರೆಸ್ ಪಕ್ಷಕ್ಕೆ 2028ರ ವಿಧಾನಸಭಾ ಚುನಾವಣೆಯಲ್ಲೂ ಜನಾಶೀರ್ವಾದ ಸಿಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಜೆಡಿಎಸ್–ಬಿಜೆಪಿ ಮೈತ್ರಿಕೂಟ 2028ರಲ್ಲಿ ಅಧಿಕಾರಕ್ಕೆ ಬರಲಿದೆ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ನಗರದಲ್ಲಿ ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ನಾವು ಜನರ ಪರವಾಗಿದ್ದು, ಅವರಿಗಾಗಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದೇವೆ. ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಅಗತ್ಯವಿದೆ’ ಎಂದರು.
‘ಹಿಂದೆ ಬಿಜೆಪಿಯವರಿಗೆ 2008ರಿಂದ 2013ರವರೆಗೆ ಅಧಿಕಾರ ಸಿಕ್ಕಿತ್ತು. ಆದರೆ, ಆಂತರಿಕ ಕಿತ್ತಾಟದಿಂದಾಗಿ ಮೂವರು ಮುಖ್ಯಮಂತ್ರಿಗಳಾದರು. 2019-23ರವರೆಗೆ ಇದ್ದಾಗಲೂ ಇಬ್ಬರು ಮುಖ್ಯಮಂತ್ರಿಗಳಾದರು. ಅಧಿಕಾರವಿದ್ದಾಗ ಕೆಲಸ ಮಾಡದೆ ಸ್ವಜನ ಪಕ್ಷಪಾತ, ಭ್ರಷ್ಟಾಚಾರದಲ್ಲಿ ಮುಳುಗಿದ್ದರಿಂದ ಜನ ಅವರನ್ನು ಮನೆಗೆ ಕಳಿಸಿದರು. ಕಷ್ಟಕ್ಕೆ ಸ್ಪಂದಿಸಿದ ನಮ್ಮನ್ನು ಅಧಿಕಾರಕ್ಕೆ ತಂದರು’ ಎಂದು ತಿಳಿಸಿದರು.
‘ಬೈಕ್ ಟ್ಯಾಕ್ಸಿಗೆ ಅನುಮತಿ ಕುರಿತು ಹೈಕೋರ್ಟ್ ಆದೇಶಕ್ಕೆ ಮೇಲ್ಮನವಿ ಸಲ್ಲಿಸುತ್ತೀರಾ?’ ಎಂಬ ಪ್ರಶ್ನೆಗೆ, ‘ನಮ್ಮ ಕಾರ್ಯದರ್ಶಿ ಹೈಕೋರ್ಟ್ ಆದೇಶ ಪರಿಶೀಲಿಸಿ ಅಡ್ವೋಕೇಟ್ ಜನರಲ್ ಸಲಹೆ ಪಡೆದು ನಮಗೆ ಕಡತ ಕಳಿಸುತ್ತಾರೆ. ಮುಂದೆ ಏನು ಮಾಡಬೇಕೆಂದು ಎಲ್ಲರೂ ಚರ್ಚಿಸಿ ನಿರ್ಧರಿಸುತ್ತೇವೆ’ ಎಂದರು.
‘ಜಾಹೀರಾತುಗಳಿಂದ ಬಿಎಂಟಿಸಿಗೆ ನಿತ್ಯ ₹60 ಕೋಟಿ ಆದಾಯ ಬರುತ್ತಿದೆ. ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಗುಟ್ಕಾ ಜಾಹೀರಾತು ಹರಿದಿದ್ದಾರೆ. ಹಾಗಾದರೆ, ದೇಶದಲ್ಲಿ ಗುಟ್ಕಾ ನಿಷೇಧಿಸಲಿ. ನಾವು ಗುಟ್ಕಾ ನಿಷೇಧಿಸೋಕೆ ಹೋರಾಡಬೇಕಾ ಅಥವಾ ಬಸ್ ಮೇಲಿನ ಸ್ಟಿಕ್ಕರ್ ಬಗ್ಗೆ ಹೋರಾಡಬೇಕಾ. ಈ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿ. ನಾವು ಬಸ್ ಪೂರ್ತಿ ಜಾಹೀರಾತು ಹಾಕುತ್ತಿಲ್ಲ. ಬದಲಿಗೆ ಶೇ 40ರಷ್ಟು ಮಾತ್ರ ಹಾಕಲು ಸೂಚಿಸಿದ್ದೇವೆ’ ಎಂದು ಹೇಳಿದರು.
ರಾಮನಗರಕ್ಕೆ ಸದ್ಯದಲ್ಲೇ ಬಿಎಂಟಿಸಿ ಬಸ್
‘ರಾಮನಗರದ ಜನರ ಬಹುದಿನಗಳ ಬೇಡಿಕೆಯಾದ ಬಿಎಂಟಿಸಿ ಬಸ್ ಸೇವೆಯನ್ನು ಸದ್ಯದಲ್ಲೇ ಆರಂಭಿಸಲಾಗುವುದು. ಈ ಕುರಿತು ಇತ್ತೀಚೆಗೆ ತೀರ್ಮಾನ ಕೈಗೊಂಡಿದ್ದು ಆದೇಶ ಕೂಡ ಆಗಿದೆ. ಅದಕ್ಕೆ ಒಂದು ತಿಂಗಳು ಆಕ್ಷೇಪಣೆ ಸಲ್ಲಿಸಲು ಗಡುವು ನೀಡಿದ್ದು ಅದಾದ ಬಳಿಕ ಕೆಲ ಪ್ರಕ್ರಿಯೆ ಮುಗಿಸಿ ಬಸ್ ಕಾರ್ಯಾಚರಣೆ ಆರಂಭಿಸಲಾಗುವುದು’ ಎಂದು ರಾಮನಗರಕ್ಕೆ ಬಿಎಂಟಿಸಿ ವಿಸ್ತರಣೆ ಕುರಿತ ಪ್ರಶ್ನೆಗೆ ಸಚಿವ ರೆಡ್ಡಿ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.