
ಚನ್ನಪಟ್ಟಣ: ಹಲ್ಲುಗಳ ಸ್ವಚ್ಛತೆ ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಖನಿಜಯುಕ್ತ ಆಹಾರ ಸೇವಿಸಬೇಕು ಎಂದು ಬೆಂಗಳೂರಿನ ದಿ ಆಕ್ಸ್‌ಫರ್ಡ್ ಡೆಂಟಲ್ ಕಾಲೇಜಿನ ಹಿರಿಯ ವೈದ್ಯಾಧಿಕಾರಿ ಡಾ. ರಮೇಶ್ ಹೇಳಿದರು.
ತಾಲ್ಲೂಕಿನ ಹೊಂಗನೂರು ಗ್ರಾಮದ ಅರಸು ಸಮುದಾಯ ಭವನದಲ್ಲಿ ರೋಟರಿ ಟಾಯ್ಸ್ ಸಿಟಿ, ದಿ ಆಕ್ಸ್‌ಫರ್ಡ್ ಡೆಂಟಲ್ ಕಾಲೇಜ್ ಅಂಡ್ ಹಾಸ್ಪಿಟಲ್, ಹೊಸೂರು ರಸ್ತೆ, ಬೆಂಗಳೂರು ಹಾಗೂ ಹೊಂಗನೂರು ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರು ಯಾವುದೇ ಆಹಾರ ಪದಾರ್ಥ ಸೇವಿಸಿದ ನಂತರ ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು. ಹಲ್ಲು ಉಜ್ಜುವಾಗ ವಸಡಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ವೈದ್ಯರ ಸಲಹೆ ಪಡೆಯಬೇಕು. ಜೊತೆಗೆ ಸೊಪ್ಪು, ತರಕಾರಿ, ಹಣ್ಣು, ರಾಗಿ ಸೇರಿದಂತೆ ಖನಿಜಯುಕ್ತ ಆಹಾರ ಸೇವಿಸಬೇಕು ಎಂದರು.
ಹೊಂಗನೂರು ಗ್ರಾ.ಪಂ. ಅಧ್ಯಕ್ಷೆ ರೂಪಾ ನಂಜೇಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ತಂಬಾಕು ಸೇವನೆ ಹೆಚ್ಚಾಗಿದೆ. ಇದರಿಂದ ಹದಿಹರೆಯದ ವಯಸ್ಸಿನಲ್ಲಿ ಹಲ್ಲಿನ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇದರ ಬಗ್ಗೆ ಎಚ್ಚರಿಕೆ ಅಗತ್ಯ ಎಂದರು.
ಶಿಬಿರದಲ್ಲಿ ಡೆಂಟಲ್ ಕಾಲೇಜಿನ 25ಕ್ಕೂ ಹೆಚ್ಚು ಮಂದಿ ನುರಿತ ವೈದ್ಯರ ತಂಡ ಕಾರ್ಯನಿರ್ವಹಿಸಿತು. ಹೊಂಗನೂರು ಭಾಗದ ಸುಮಾರು 300ಕ್ಕೂ ಹೆಚ್ಚು ಮಂದಿ ಶಿಬಿರದ ಸದುಪಯೋಗ ಪಡೆದುಕೊಂಡರು.
ರೋಟರಿ ಟಾಯ್ಸ್ ಸಿಟಿ ಅಧ್ಯಕ್ಷ ರಾಜೇಶ್, ಕಾರ್ಯದರ್ಶಿ ಯೋಗೇಶ್ ಚಕ್ಕೆರೆ, ಗ್ರಾ.ಪಂ. ಸದಸ್ಯ ರಾಮಕೃಷ್ಣೇಗೌಡ, ವಿಜಯನಗರದ ಅರಸು ಅಭಿವೃದ್ಧಿ ಸಂಘದ ಅಧ್ಯಕ್ಷ ಸುಗಂಧರಾಜೇ ಅರಸು, ಡೆಂಟಲ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮಗೇಶ್, ರೋಟರಿ ಟಾಯ್ಸ್ ಸಿಟಿ ಕ್ಲಬ್ ಬಿ.ಎಂ. ನಾಗೇಶ್, ಪದಾಧಿಕಾರಿಗಳಾದ ನಿತಿನ್, ಮೋಹನ್, ರಘು, ಬೈ ಶ್ರೀನಿವಾಸ್, ಯದುಗಿರಿಗೌಡ, ಜಯರಾಮು, ರಾಜೇಶ್, ಅರ್ಜುನ್, ಗಿರೀಶ್, ರವಿ, ಅಪ್ಪಾಜಿಗೌಡ, ಶೇಖರ್ ಲಾಡ್ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.