ADVERTISEMENT

ಮಳೆ ಅಬ್ಬರ: ಅಂದಾಜಿಗೆ ಸಿಗದಷ್ಟು ನಷ್ಟ

ಧರೆಗುರುಳಿದ ವಿದ್ಯುತ್ ಕಂಬಗಳು l ಕೃಷಿ ಜಮೀನು ಜಲಾವೃತ l ದಿಕ್ಕೆಟ್ಟ ರೈತರು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 3:48 IST
Last Updated 5 ಆಗಸ್ಟ್ 2022, 3:48 IST
ಕನಕಪುರ ವೃತ್ತ ಸಮೀಪ ವಸತಿ ಪ್ರದೇಶಕ್ಕೆ ಮಳೆ ನೀರು ನುಗ್ಗಿರುವುದು
ಕನಕಪುರ ವೃತ್ತ ಸಮೀಪ ವಸತಿ ಪ್ರದೇಶಕ್ಕೆ ಮಳೆ ನೀರು ನುಗ್ಗಿರುವುದು   

ರಾಮನಗರ: ಜಿಲ್ಲೆಯಾದ್ಯಂತ ಗುರುವಾರವೂ ಮಳೆ ಅಬ್ಬರಿಸಿದ್ದು, ಭಾರಿ ಪ್ರಮಾಣದ ಹಾನಿ ಸಂಭವಿಸಿದೆ.

ಬೆಳಿಗ್ಗೆ ಎರಡು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ಅಲ್ಲಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಯಿತು. ರಾಮನಗರದ ರಂಗರಾಯರದೊಡ್ಡಿ ಕೆರೆ ಕೋಡಿ ಬಿದ್ದು ನೀರು ಹಳ್ಳಕ್ಕೆ ಹರಿಯಿತು. ಕನಕಪುರ ವೃತ್ತದ ಬಳಿ ಬೆಂಗಳೂರು–ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಈ ಹಳ್ಳಕ್ಕೆ ಸೇತುವೆ ನಿರ್ಮಿಸಿದ್ದು, ಅಲ್ಲಿ ಕಸಕಡ್ಡಿ ಹೆಚ್ಚಾದ ಕಾರಣ ಮಳೆ ನೀರು ಮುಂದೆ ಹೋಗದೇ ಅಕ್ಕಪಕ್ಕದ ವಸತಿ ಪ್ರದೇಶಗಳತ್ತ ನುಗ್ಗಿತು. ಇದರಿಂದಾಗಿ ಕನಕಪುರ ವೃತ್ತದ ಸುತ್ತಮುತ್ತ ಮಳೆ ನೀರು ಮನೆಗಳಿಗೆ ನುಗ್ಗಿ ಜನರು ಪರದಾಡಿದರು.

20ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದವು. ಜನರು ಹೊರಗೆ ಬರಲಾಗದಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತು. ಹೊಳೆಯಂತೆ ಮಳೆ ನೀರು ಸುತ್ತಲಿನ ಪ್ರದೇಶವನ್ನು ಆಕ್ರಮಿಸಿತ್ತು.

ADVERTISEMENT

ಗುಡ್ಡ ಕುಸಿತ: ನಗರದ ಪಾಲಬೋವಿದೊಡ್ಡಿ ಸಮೀಪ ನಿರ್ಮಾಣ ಹಂತದಲ್ಲಿರುವ ಲೇಔಟ್ ಪಕ್ಕದ ಗುಡ್ಡವು ಮಳೆಯಿಂದಾಗಿ ಕುಸಿದಿದ್ದು, ಮಳೆ ಪ್ರವಾಹ ಗ್ರಾಮಕ್ಕೆ ನುಗ್ಗಿತು. ಇದರಿಂದಾಗಿ ಮನೆಗಳು ಜಲಾವೃತಗೊಂಡಿದ್ದವು.

ವಿದ್ಯುತ್‌ ಕಂಬಗಳಿಗೆ ಹಾನಿ: ಮಳೆಯಿಂದಾಗಿ ರಾಮನಗರ ಒಂದರಲ್ಲಿಯೇ 35–40 ವಿದ್ಯುತ್‌ ಕಂಬಗಳು ನೆಲಕ್ಕೆ ಉರುಳಿದ್ದು, ಇದರಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಿದೆ.

ಮಾಯಗಾನಹಳ್ಳಿ ಸಮೀಪ ಬೆಂಗಳೂರು–ಮೈಸೂರು ಹೆದ್ದಾರಿ ಪಕ್ಕದ ಗುಡ್ಡ ಕುಸಿದಿದ್ದು, ಇದರಿಂದಾಗಿ ಪಕ್ಕದಲ್ಲೇ ಇದ್ದ ಮೂರ್ನಾಲ್ಕು ಕಂಬಗಳಿಗೂ ಹಾನಿಯಾಗಿದೆ. ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿರುವ ಕಾರಣ ಈ ಅನಾಹುತ ಸಂಭವಿಸಿದೆ. ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ದುರಸ್ಥಿ ಕಾಮಗಾರಿ ಕೈಗೊಂಡಿದ್ದರು.

ಹಳ್ಳಿಮಾಳ ಸಮೀಪ ಹಳ್ಳದ ನೀರು ರಸ್ತೆಗೆ ನುಗ್ಗಿದ್ದು, ಭೂಕೊರತ ಹೆಚ್ಚಾದ ಕಾರಣ ರಸ್ತೆ ಪಕ್ಕದಲ್ಲಿದ್ದ ವಿದ್ಯುತ್‌ ಕಂಬಗಳು ನೆಲಕ್ಕೆ ಉರುಳಿ ಹಾನಿಯಾಗಿವೆ. ಕುರುಬರಹಳ್ಳಿ ಸಮೀಪವೂ ವಿದ್ಯುತ್‌ ಕಂಬಗಳು ಬಿದ್ದಿವೆ.

ಮನೆ ಕುಸಿತ: ಮಳೆಯಿಂದಾಗಿ ಬಾಲಗೇರಿಯ ಲತಾ ಎಂಬುವರ ಮನೆ ಭಾಗಶಃ ಕುಸಿದಿದೆ. ಗುರುವಾರ ಮುಂಜಾನೆ 4 ಗಂಟೆ ಸುಮಾರಿಗೆ ಮನೆ ಗೋಡೆಗಳು ಉರುಳಿಬಿದ್ದಿವೆ. ಅದೃಷ್ಟವಶಾತ್ ಯಾರಿಗೂ ಅಪಾಯ ಉಂಟಾಗಿಲ್ಲ.

ಸಣ್ಣಮಕ್ಕಳು ಸೇರಿದಂತೆ ಮನೆಯಲ್ಲಿನ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದ್ದ ಒಂದು ಮನೆಯೂ ಕುಸಿದಿದ್ದು, ನಗರಸಭೆಯಿಂದ ವಾಸಕ್ಕೆ ಅನುಕೂಲ ಮಾಡಿಕೊಡುವಂತೆ ಲತಾ ನಗರಸಭೆಗೆ ಮನವಿ ಸಲ್ಲಿಸಿದ್ದಾರೆ.

ಬೆಳೆ ಹಾನಿ

ಅತಿವೃಷ್ಟಿಯ ಕಾರಣಕ್ಕೆ ಜಿಲ್ಲೆಯ ನೂರಾರು ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ಕೊಚ್ಚಿ ಹೋಗಿದ್ದು, ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆಗೆ ಮುಂದಾಗಿದ್ದಾರೆ. ಸದ್ಯ ಮಳೆ ನಿರಂತರವಾಗಿ ಸುರಿಯುತ್ತಿರುವ ಕಾರಣ ನಷ್ಟದ ನಿಖರ ಪ್ರಮಾಣ ತಿಳಿಯುತ್ತಿಲ್ಲ. ಮಳೆ ನಿಂತ ಮೇಲಷ್ಟೇ ನಷ್ಟದ ಅಂದಾಜು ಕಾರ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.