ADVERTISEMENT

ಕನಕಪುರ: ಮಾರುಕಟ್ಟೆಗೆ ಹೆಚ್ಚಿನ ರೇಷ್ಮೆಗೂಡು

ಲಾಕ್‌ಡೌನ್‌: ಗೂಡು ಸಾಗಣೆಗೆ ರೈತರಿಗೆ ನೀಡದ ಅವಕಾಶ: ಆರೋಪ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2020, 13:07 IST
Last Updated 10 ಏಪ್ರಿಲ್ 2020, 13:07 IST
ಕನಕಪುರ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ರೈತರಿಗೆ ಆಹಾರ ಪೊಟ್ಟಣಗಳನ್ನು ನೀಡಲಾಯಿತು
ಕನಕಪುರ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ರೈತರಿಗೆ ಆಹಾರ ಪೊಟ್ಟಣಗಳನ್ನು ನೀಡಲಾಯಿತು   

ಕನಕಪುರ:ಕೊಳ್ಳೇಗಾಲ ಮತ್ತು ರಾಮನಗರ ರೇಷ್ಮೆಗೂಡಿನ ಮಾರುಕಟ್ಟೆಗೆ ಹೋಗಲು ರೈತರಿಗೆ ಅವಕಾಶ ನೀಡದ ಪರಿಣಾಮ ಕನಕಪುರದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಗೂಡು ಬಂದಿದೆ. ಇದು ಬೆಲೆ ಕುಸಿತಕ್ಕೆ ಕಾಣವಾಗಿದ್ದು, ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ದಾಡಿ ಶಿವಕುಮಾರ್‌ ಆರೋಪಿಸಿದರು.

ಇಲ್ಲಿನ ರೇಷ್ಮೆಗೂಡು ಮಾರುಕಟ್ಟೆಯಲ್ಲಿಕಾಂಗ್ರೆಸ್‌ ಟಾಸ್ಕ್‌ಪೋರ್ಸ್‌ ಸಮಿತಿ ವತಿಯಿಂದ ರೈತರಿಗೆ ಏರ್ಪಡಿಸಿದ್ದಊಟದ ವ್ಯವಸ್ಥೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ 20ಸಾವಿರ ರೈತ ಕುಟುಂಬಗಳು ರೇಷ್ಮೆ ಬೆಳೆಯನ್ನೇ ನಂಬಿ ಬದುಕುತ್ತಿವೆ. ರೇಷ್ಮೆ ಬೆಳೆ ಬೆಳೆಯಬೇಕಾದರೆ ಕನಿಷ್ಟ 1 ತಿಂಗಳ ಸಮಯ ಬೇಕು. ಒಂದು ತಿಂಗಳ ಹಿಂದೆ ರೇಷ್ಮೆ ಬೆಳೆ ಇಟ್ಟಿದ್ದ ರೈತರು ಇಂದು ಗೂಡನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಿದ್ದಾರೆ.ಈ ಸಂದರ್ಭದಲ್ಲಿ ಅವರಿಗೆ ಮಾರುಕಟ್ಟೆ ದೊರಕಿಸಿಕೊಡಬೇಕಾದ್ದು ಸರ್ಕಾರದ ಕರ್ತವ್ಯ ಎಂದರು.

ಕೊಳ್ಳೇಗಾಲ ಮತ್ತು ರಾಮನಗರ ಮಾರುಕಟ್ಟೆಗೆ ಹೋಗಲು ಪೊಲೀಸರು ಅವಕಾಶ ಕೊಡದ ಕಾರಣ ಇಲ್ಲಿಗೆ 750 ಲಾಟ್‌ ಗೂಡು ಬಂದಿದೆ. ಅಗತ್ಯಕ್ಕಿಂತ ಹೆಚ್ಚು ಗೂಡು ಬಂದಿರುವುದರಿಂದ ₹ 300 ಇದ್ದ ಗೂಡಿನ ಧಾರಣೆ ₹ 200 ಕ್ಕೆ ಕುಸಿದಿದೆ ಎಂದು ಹೇಳಿದರು.

ರೈತರು ಸಾಮಾಜಿಕ ಅಂತರ ಕಾಪಾಡಿಕೊಂಡು ಗೂಡು ಮಾರಾಟ ಮಾಡುತ್ತಿದ್ದಾರೆ. ಅದಕ್ಕೂ ಅವಕಾಶ ಕೊಡದಿದ್ದರೆ ಸರ್ಕಾರವೇ ರೈತರಿಂದ ರೇಷ್ಮೆ ಗೂಡನ್ನು ಖರೀದಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಟಾಸ್ಕ್‌ ಪೋರ್ಸ್‌ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಏಳಗಳ್ಳಿ ರವಿ ಮಾತನಾಡಿ, ಶಾಸಕ ಡಿ.ಕೆ.ಶಿವಕುಮಾರ್‌ ಮತ್ತು ಸಂಸದ ಡಿ.ಕೆ.ಸುರೇಶ್ ಅವರು ರೈತರು ಮಾರುಕಟ್ಟೆಗೆ ಹೋಗಿ ಗೂಡು ಮಾರಾಟ ಮಾಡುವ ವಿಚಾರವಾಗಿ ಈಗಾಗಲೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತನಾಡಿದ್ದಾರೆ. ಆದರೂ ಗುರುವಾರ ಕೊಳ್ಳೇಗಾಲಕ್ಕೆ ಮತ್ತು ರಾಮನಗರಕ್ಕೆ ಹೋಗುತ್ತಿದ್ದ ರೈತರನ್ನು ತಡೆದು ಪೊಲೀಸರು ದೌರ್ಜನ್ಯ ನಡೆಸಿ ಬೈಕ್‌ಗಳನ್ನು ಕಿತ್ತುಕೊಂಡಿದ್ದಾರೆ. ಗೂಡು ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

‘‌ಪೊಲೀಸರು ತೊಂದರೆ ನೀಡುತ್ತಿದ್ದಾರೆ. ಮಾರುಕಟ್ಟೆಗೆ ಹರಸಾಹಸ ಮಾಡಿ ಗೂಡು ತಂದರೆ, ಇಲ್ಲಿ ಅರ್ಧ ಬೆಲೆಯಲ್ಲಿ ಗೂಡನ್ನು ಖರೀದಿಸುತ್ತಿದ್ದಾರೆ’ ಎಂದುದ್ಯಾಪೇಗೌಡನದೊಡ್ಡಿ ರೈತ ವೆಂಕಟೇಶ್‌ ಎಂಬುವರು ಅಳಲು ತೋಡಿಕೊಂಡರು.

‘ರೇಷ್ಮೆ ಹುಳು ಸಿಗುವ ಕಾರಣಕ್ಕೆ ಬೆಳೆ ಮಾಡುತ್ತೇವೆ. ಕೆ.ಜಿ.ಗೆ ₹ 300 ಸಿಕ್ಕರೆ ಅದರಲ್ಲಿ ₹ 200 ಖರ್ಚಾಗುತ್ತದೆ. ಸರ್ಕಾರ ಚಾಕಿ ಮಾರುವುದನ್ನು ನಿಲ್ಲಿಸಬೇಕು, ಇಲ್ಲವೇ ನಾವು ಬೆಳೆಯುವ ಗೂಡನ್ನು ನಮ್ಮ ಮನೆಗಳ ಹತ್ತಿರಕ್ಕೆ ಬಂದು ನಿಗದಿತ ಬೆಲೆಕೊಟ್ಟು ಖರೀದಿ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ಕಾಂಗ್ರೆಸ್‌ ಮುಖಂಡರಾದ ಸಿಲ್ಕ್‌ರವಿ, ಅನಿಲ್‌ಕುಮಾರ್‌, ದೀಪಕ್‌, ಕಿರಣ್‌, ಆನಂದ, ಶಿವಣ್ಣ, ನಗರಸಭೆ ಸದಸ್ಯ ಕೃಷ್ಣಪ್ಪ, ರೇಷ್ಮೆ ಮಾರುಕಟ್ಟೆ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.