ADVERTISEMENT

ಎಸ್ಸೆಸ್ಸೆಲ್ಸಿ; ಗೊಂದಲ ನಿವಾರಣೆಗೆ ಸಹಾಯವಾಣಿ

ವಿದ್ಯಾರ್ಥಿಗಳು, ಪೋಷಕರಿಗೆ ಅನುಕೂಲ: ದೂರುಗಳಿಗೆ ಅಧಿಕಾರಿಗಳ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 14:44 IST
Last Updated 9 ಜೂನ್ 2020, 14:44 IST

ರಾಮನಗರ: ಈ ತಿಂಗಳಾಂತ್ಯಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಸಹಾಯವಾಣಿ ಆರಂಭಿಸಿದೆ.

ಇದೇ 25ರಿಂದ ಜುಲೈ 4ರವರೆಗೆ ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಜರುಗಲಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಪರೀಕ್ಷೆ ಬಗ್ಗೆ ಹಲವು ಗೊಂದಲಗಳು ಇವೆ. ಪರೀಕ್ಷೆಗೆ ಯಾವುದೇ ರೀತಿಯ ಅಡತಡೆ ಬಾರದಂತೆ ನೋಡಿಕೊಳ್ಳಲು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡುವ ಸಲುವಾಗಿ ಈ ಸಹಾಯವಾಣಿ ಆರಂಭಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಎಲ್ಲೆಲ್ಲಿ ಸಹಾಯವಾಣಿ: ಈ ಸಹಾಯವಾಣಿಯು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಚೇರಿ ಹಾಗೂ ಜಿಲ್ಲೆಯ ನಾಲ್ಕು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಅವರ ಸಂಖ್ಯೆಗಳನ್ನು ಒಳಗೊಂಡಿದೆ. ಕಳೆದ ಶುಕ್ರವಾರದಿಂದಲೇ ಇದು ಕಾರ್ಯ ನಿರ್ವಹಿಸುತ್ತಿದೆ. ಪರೀಕ್ಷೆ ಮುಗಿಯುವವರೆಗೂ ಇದು ಕಾರ್ಯ ನಿರ್ವಹಿಸಲಿದೆ. ಆದರೆ ಪ್ರಚಾರದ ಕೊರತೆಯಿಂದಾಗಿ ಹೆಚ್ಚಿನ ಕರೆಗಳು ಬರುತ್ತಿಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷೆ ಗೊಂದಲಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಪೋಷಕರು ಕರೆ ಮಾಡುತ್ತಿದ್ದಾರೆ.

ADVERTISEMENT

ಬರುವ ಕರೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಬರುವ ಪ್ರಶ್ನೆಗಳೇ ಹೆಚ್ಚಿವೆ. ಪರೀಕ್ಷಾ ದಿನ ಸಮೀಪಿಸುತ್ತಿದೆ. ಯಾವತ್ತು ಮಾಸ್ಕ್ ವಿತರಣೆ ಮಾಡುತ್ತೀರಿ? ದಯವಿಟ್ಟು ನಮತೆ ಎನ್-95 ಮಾಸ್ಕ್‌ಗಳನ್ನ ಕೊಡಿ. ಜ್ವರ, ಕೆಮ್ಮು, ನೆಗಡಿ ಯಂತಹ ಲಕ್ಷಣಗಳು ಕಂಡು ಬಂದರೇ, ನಾವು ಹೇಗೆ ಪರೀಕ್ಷೆ ಬರೆಯುವುದು ಎಂದೆಲ್ಲಾ ವಿದ್ಯಾರ್ಥಿಗಳು ಸಹಾಯವಾಣಿಗೆ ಕರೆ ಮಾಡಿ ವಿಚಾರಿಸಿದ್ದಾರೆ.

ಸಹಾಯವಾಣಿ ಆರಂಭಿಸಿರುವುದರಿಂದ ವಿದ್ಯಾರ್ಥಿಗಳಲ್ಲಿನ ಗೊಂದಲಕ್ಕೆ ತೆರೆ ಎಳೆಯಲು ಸಹಾವಾಗಲಿದೆ. ಗ್ರಾಮೀಣ ಭಾಗದ ಹಲವು ಕಡೆ ಕೆಎಸ್‍ಆರ್‌ಟಿಸಿ ಬಸ್ ಸಂಚಾರ ನಡೆಸುವುದಿಲ್ಲ. ಇಂತಹ ತೊಂದರೆಗಳ ಕುರಿತು ಮಾಹಿತಿ ನೀಡಿದರೇ, ಅಂತಹ ಸಮಸ್ಯೆಗಳಿಗೆ ಪರಿಹಾರ ಕೊಡಿಸಲು ಸಾಧ್ಯವಾಗುತ್ತದೆ. ಇಂತಹ ಅನೇಕ ಗೊಂದಲಗಳಿಗೆ ಉತ್ತರ ನೀಡಲು ಸಹಾಯವಾಗುತ್ತಿದೆ. ಬರುವ ಪ್ರಶ್ನೆಗಳನ್ನು ದಾಖಲಿಸಿಕೊಂಡು, ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.

ಸಂಪರ್ಕ ಹೇಗೆ: ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ – 080-27276615, ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಯ ಸಹಾಯವಾಣಿ ಕೇಂದ್ರ ಸಂಖ್ಯೆ 8277517672. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಸಹಾಯವಾಣಿ ಸಂಖ್ಯೆ 9449874399 ಗೆ ಕರೆ ಮಾಡಬಹುದಾಗಿದೆ.

ತಾಲ್ಲೂಕು ಮಟ್ಟದಲ್ಲಿ ಚನ್ನಪಟ್ಟಣ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಹಾಯವಾಣಿ ಸಂಖ್ಯೆ 9480695320. ಕನಕಪುರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಾಯವಾಣಿ ಸಂಖ್ಯೆ 9480695321. ಮಾಗಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಾಯಕೇಂದ್ರದ 9480695322. ರಾಮನಗರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಾಯವಾಣಿ ಕೇಂದ್ರದ ಸಂಖ್ಯೆ 9480695323 ಸಂಪರ್ಕಿಸಬಹುದಾಗಿದೆ.

*
ಈ ಸಹಾಯವಾಣಿಯು ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳು, ಪೋಷಕರಲ್ಲಿ ಇರುವ ಗೊಂದಲ ನಿವಾರಿಸಲಿದೆ. ಪರೀಕ್ಷೆ ಅಂತ್ಯದವರೆಗೂ ಇದು ಕಾರ್ಯ ನಿರ್ವಹಿಸಲಿದೆ.
-ಸೋಮಲಿಂಗಯ್ಯ, ಇಒ, ಶಿಕ್ಷಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.