ADVERTISEMENT

ಲಿಂಕ್ ಕೆನಾಲ್ | ಶಾಸಕ ಬಾಲಕೃಷ್ಣ ಪೊಲೀಸ್ ವಶಕ್ಕೆ; ಇತ್ಯರ್ಥಕ್ಕೆ ವಾರದ ಗಡುವು

ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ; ತುಮಕೂರು ವಿರೋಧಕ್ಕೆ ಖಂಡನೆ; ಪಾದಯಾತ್ರೆಗೆ ತಿರುಗಿದ ಹೆದ್ದಾರಿ ತಡೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 16:06 IST
Last Updated 5 ಜೂನ್ 2025, 16:06 IST
ಮಾಗಡಿ ತಾಲ್ಲೂಕಿನ ಮರೂರು ಹ್ಯಾಂಡ್ ಪೋಸ್ಟ್ ಬಳಿ ಹೇಮಾವತಿ ನೀರಿಗಾಗಿ ಹೆದ್ದಾರಿ ತಡೆ ನಡೆಸಿದ ಶಾಸಕ ಎಚ್‌.ಸಿ. ಬಾಲಕೃಷ್ಣ ಸೇರಿದಂತೆ ಹಲವು ಮುಖಂಡರು ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು
ಮಾಗಡಿ ತಾಲ್ಲೂಕಿನ ಮರೂರು ಹ್ಯಾಂಡ್ ಪೋಸ್ಟ್ ಬಳಿ ಹೇಮಾವತಿ ನೀರಿಗಾಗಿ ಹೆದ್ದಾರಿ ತಡೆ ನಡೆಸಿದ ಶಾಸಕ ಎಚ್‌.ಸಿ. ಬಾಲಕೃಷ್ಣ ಸೇರಿದಂತೆ ಹಲವು ಮುಖಂಡರು ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು   

ಮಾಗಡಿ: ತಾಲ್ಲೂಕಿಗೆ ನೀರು ಹರಿಸುವ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಪರವಾಗಿ ತಾಲ್ಲೂಕಿನ ಮರೂರು ಹ್ಯಾಂಡ್‌ ಪೋಸ್ಟ್ ಬಳಿ ಗುರುವಾರ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ –75 ತಡೆದು ಪಾದಯಾತ್ರೆ ನಡೆಸಿದ ಶಾಸಕ ಎಚ್‌.ಸಿ. ಬಾಲಕೃಷ್ಣ ಸೇರಿದಂತೆ ರೈತಪರ ಮತ್ತು ಕನ್ನಡಪರ ಸಂಘಟನೆಗಳ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಟ್ಟರು.

ಯೋಜನೆ ವಿರೋಧಿಸಿ ತುಮಕೂರಿನಲ್ಲಿ ಕಾಮಗಾರಿಗೆ ಅಡ್ಡಿಪಡಿಸಿ ಪ್ರತಿಭಟಿಸಿದ್ದನ್ನು ಖಂಡಿಸಿ, ‘ನಮ್ಮ ನೀರು, ನಮ್ಮ ಹಕ್ಕು’ ಘೋಷವಾಕ್ಯದೊಂದಿಗೆ ಬಾಲಕೃಷ್ಣ ನೇತೃತ್ವದಲ್ಲಿ ಪಕ್ಷಾತೀತವಾಗಿ ಹೆದ್ದಾರಿ ತಡೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನಾಕಾರರು ತುಮಕೂರಿನ ಜನಪ್ರತಿನಿಧಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ನಮ್ಮ ಪಾಲಿನ ನೀರನ್ನು ಬಿಡಲೇಬೇಕು ಎಂದು ಆಗ್ರಹಿಸಿದರು.

10 ನಿಮಿಷ ಅವಕಾಶ: 

ADVERTISEMENT

ಈ ವೇಳೆ ಪೊಲೀಸರು, ‘ಹತ್ತು ನಿಮಿಷದಲ್ಲಿ ರಸ್ತೆ ತಡೆ ಮುಗಿಸಿ’ ಎಂದು ಬಾಲಕೃಷ್ಣ ಅವರಿಗೆ ಕೋರಿ, ಹೆದ್ದಾರಿಯ ಮತ್ತೊಂದು ಕಡೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇದರಿಂದ ಕೆರಳಿದ ಬಾಲಕೃಷ್ಣ, ‘ಈ ರೀತಿ ಪ್ರತಿಭಟಿಸಿದರೆ ಪ್ರಯೋಜನವಾಗದು. ನಾವು ತಾಳೆಕೆರೆ ಹ್ಯಾಂಡ್‌ ಪೋಸ್ಟ್‌ವರೆಗೆ ಪಾದಯಾತ್ರೆ ಮಾಡುತ್ತೇವೆ’ ಎಂದು ಬೆಂಬಲಿಗರೊಂದಿಗೆ ಹೆದ್ದಾರಿ ಮುಂದಕ್ಕೆ ಹೆಜ್ಜೆ ಹಾಕಿದರು.

ಸ್ಥಳದಲ್ಲಿದ್ದ ಡಿವೈಎಸ್ಪಿ ಕೆ.ಎಂ. ಪ್ರವೀಣ್‌ ಕುಮಾರ್, ಇನ್‌ಸ್ಪೆಕ್ಟರ್‌ಗಳ ಮನವೊಲಿಕೆಗೂ ಜಗ್ಗದೆ ಬಾಲಕೃಷ್ಣ ಪಾದಯಾತ್ರೆ ಮುಂದುವರಿಸಿದರು. ವಾಹನಗಳ ಸಂಚಾರ ಅಸ್ತವ್ಯಸ್ಥವಾಗಿದ್ದನ್ನು ಗಮನಿಸಿದ ಪೊಲಿಸರು, ಮುಂಜಾಗ್ರತಾ ಕ್ರಮವಾಗಿ ಶಾಸಕರು ಸೇರಿದಂತೆ ಜೊತೆಗಿದ್ದವರನ್ನು ವಶಕ್ಕೆ ಪಡೆದು ಕುದೂರು ಪೊಲೀಸ್ ಠಾಣೆಗೆ ವಾಹನದಲ್ಲಿ ಕರೆದೊಯ್ದುರು.

ವಿಷಯ ತಿಳಿದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ ಠಾಣೆಗೆ ಬಂದರು. ಡಿವೈಎಸ್ಪಿ ಪ್ರವೀಣ್ ಅವರು ಠಾಣೆಯಲ್ಲೇ ಬಾಲಕೃಷ್ಣ, ರೇವಣ್ಣ ಸೇರಿದಂತೆ ವಿವಿಧ ಮುಖಂಡರೊಂದಿಗೆ ಮಾತನಾಡಿ ಮನವೊಲಿಸಿದರು. ವಶಕ್ಕೆ ಪಡೆದಿದ್ದ ಎಲ್ಲರನ್ನೂ ಬಿಟ್ಟು ಕಳಿಸಿದರು. ಸ್ಥಳಕ್ಕೆ ಬಂದ ತಹಶೀಲ್ದಾರ್ ಶರತ್‌ ಕುಮಾರ್ ಅವರು ಬಾಲಕೃಷ್ಣ ಅವರಿಂದ ಮನವಿ ಸ್ವೀಕರಿಸಿದರು.

ವಾರದ ಗಡುವು:

ಠಾಣೆ ಬಳಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಾಲಕೃಷ್ಣ, ‘ನಮ್ಮ ಪಾಲಿನ ಮುಕ್ಕಾಲು ಟಿಎಂಸಿ ನೀರನ್ನು ನಾವು ಕೇಳುತ್ತಿದ್ದೇವೆಯೇ ಹೊರತು ತುಮಕೂರು ಪಾಲಿನ ನೀರನ್ನಲ್ಲ. ಪ್ರಾಣ ಕೊಟ್ಟಾದರೂ ಹೇಮಾವತಿ ನೀರು ಪಡೆದೇ ತೀರುತ್ತೇವೆ. ಅದನ್ನು ತುಮಕೂರಿನ ಜನಪ್ರತಿನಿಧಿಗಳು ತಡೆಯಲು ಸಾಧ್ಯವಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಾವೀಗ ಸಾಂಕೇತಿಕ ಪ್ರತಿಭಟನೆ ನಡೆಸಿದ್ದು, ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ಒಂದು ವಾರ ಗಡುವು ನೀಡುತ್ತೇವೆ. ಅಷ್ಟರೊಳಗೆ ನೀರು ನಿರ್ವಹಣಾ ಸಮಿತಿ ರಚಿಸಬೇಕು. ಇಲ್ಲವಾದರೆ, ಕಾಮಗಾರಿ ನಡೆಯುತ್ತಿರುವ ಸ್ಥಳದಿಂದ ಬೆಂಗಳೂರಿನವರೆಗೂ ಪಾದಯಾತ್ರೆ ನಡೆಸಿ, ಮುಖ್ಯಮಂತ್ರಿ ಮನವಿ ಕೊಡುತ್ತೇವೆ. ಉಡಾಫೆ ಮಾಡಿದರೆ ನಮ್ಮ ಪ್ರತಿಭಟನೆ ಉಗ್ರ ಸ್ವರೂಪಕ್ಕೆ ತಿರುಗಲಿದೆ. ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಬಮೂಲ್ ನಿರ್ದೇಶಕ ಎಚ್.ಎನ್. ಅಶೋಕ್ (ತಮ್ಮಾಜಿ), ಮುಖಂಡರಾದ ಕಲ್ಕೆರೆ ಶಿವಣ್ಣ, ಶಶಾಂಕ್ ರೇವಣ್ಣ, ಎಂ.ಕೆ. ಧನಂಜಯ್ಯ, ಜೆ.ಪಿ. ಚಂದ್ರೇಗೌಡ, ಶಿವರಾಜು, ಆಗ್ರೋ ಪುರುಷೋತ್ತಮ್, ವನಜ, ಶ್ರೀಪತಿಹಳ್ಳಿ ರಾಜಣ್ಣ, ಮಹಾಂತೇಶ್, ಚಂದ್ರಶೇಖರ್, ತಟವಾಳ್ ನಾಗರಾಜು, ಕುಮಾರ್ ಹೊಂಬಾಳಮ್ಮನಪೇಟೆ ರವಿಕುಮಾರ್, ರಾಮು, ವಿನಯ್‌, ಪತ್ರಕರ್ತ ಸಂಘದ ಅಧ್ಯಕ್ಷ ರಾಮು‌ ಸೇರಿದಂತೆ ರೈತಪರ ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ಇದ್ದರು.

ಮಾಗಡಿ ಪಾಲಿನ ನೀರನ್ನು ಬಿಡುವುದಿಲ್ಲ ಎಂದು ತುಮಕೂರಿನವರು ಹೇಳುವುದು ಸರಿಯಲ್ಲ. ಅಲ್ಲಿಗೆ ನೀರು ಬರದಂತೆ ಹೊಳೆನರಸಿಪುರದವರು ತಡೆದರೆ ಅವರ ಪರಿಸ್ಥಿತಿ ಏನಾಗಬಹುದು? ಮೇಲ್ಭಾಗದಿಂದ ಬರುವ ನೀರನ್ನು ತಡೆಯಲು ಸಾಧ್ಯವಿಲ್ಲ.
– ಎಚ್.ಎಂ. ರೇವಣ್ಣ ರಾಜ್ಯಾಧ್ಯಕ್ಷ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ

‘ಹೇಮಾವತಿ ನ್ಯಾಯಮಂಡಳಿ ರಚಿಸಲಿ’

‘ಹೇಮಾವತಿ ನೀರಿನ ವಿಷಯದಲ್ಲಿ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಬೇಕು. ಕಾವೇರಿ ನ್ಯಾಯಮಂಡಳಿ ಮಾದರಿಯಲ್ಲಿ ಹೇಮಾವತಿ ನ್ಯಾಯಮಂಡಳಿ ರಚಿಸಿ ಮಾಗಡಿ ಪಾಲಿನ ನೀರನ್ನು ಹರಿಸಬೇಕು. ಅದಕ್ಕಾಗಿ ನೀರು ನಿರ್ವಹಣಾ ಸಮಿತಿ ರಚಿಸಬೇಕು. ಅಧಿಕಾರಿಗಳಿಂದಲೇ ಹೇಮಾವತಿ ಜಲಾಶಯದಲ್ಲಿ ಎಷ್ಟು ನೀರು ಸಂಗ್ರಹವಾಗಿದೆ? ಎಷ್ಟು ನೀರು ಹರಿಸಲಾಗಿದೆ ಎಂಬುದನ್ನು ಸಮಿತಿಯೇ ಅಧಿಕೃತವಾಗಿ ತಿಳಿಸುವ ವ್ಯವಸ್ಥೆಯಾಗಬೇಕು. ಇಲ್ಲದಿದ್ದರೆ ನಮ್ಮ ಪ್ರತಿಭಟನೆ ಉಗ್ರ ಸ್ವರೂಪ ತಾಳುತ್ತದೆ’ ಎಂದು ಬಾಲಕೃಷ್ಣ ಎಚ್ಚರಿಕೆ ನೀಡಿದರು.

ವಿಜಯೇಂದ್ರ, ರವಿ ವಿರುದ್ಧ ಆಕ್ರೋಶ

‘ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮೆಚ್ಯೂರಿಟಿ ಇಲ್ಲದ ನಾಯಕ. ಲೋಕಸಭಾ ಚುನಾವಣೆಯಲ್ಲಿ ಮಾಗಡಿ ತಾಲ್ಲೂಕಿನ ಜನ ಬಿಜೆಪಿಗೆ ಮತ ನೀಡಿದ್ದಾರೆ. ಆದರೂ ತುಮಕೂರು ನಾಯಕರನ್ನು ಮೆಚ್ಚಿಸಲು ಮಾಗಡಿಗೆ ನೀರು ಕೊಡಲ್ಲ ಎನ್ನುತ್ತಿರುವ ಅವರಿಗೆ ನಾಚಿಕೆಯಾಗಬೇಕು. ಇಲ್ಲಿ ಬಿಜೆಪಿಗೆ ಮತ ಕೊಟ್ಟ ಜನರಿಗೆ ವಿಜಯೇಂದ್ರ ಏನು ಉತ್ತರ ಕೊಡುತ್ತಾರೆ? ಮನಬಂದಂತೆ ಮಾತನಾಡುವ ವಿಧಾನ ಪರಿಷತ್ ಸಿ.ಟಿ. ರವಿ ನಾಲಿಗೆಗೆ ಬರೆ ಹಾಕಬೇಕು. ಇಬ್ಬರೂ ನಮ್ಮ ತಾಲ್ಲೂಕಿಗೆ ಬಂದು ಮಾಗಡಿಗೆ ಹೇಮಾವತಿ ನೀರು ಬರುತ್ತದೆ ಎಂಬ ಭರವಸೆ ಕೊಡಬೇಕು. ಇಲ್ಲವಾದರೆ ತಾಲ್ಲೂಕಿನಲ್ಲಿ ಬಿಜೆಪಿಗೆ ಮತ ಹಾಕಲು ಬಿಡುವುದಿಲ್ಲ’ ಎಂದು ಬಾಲಕೃಷ್ಣ ಹೇಳಿದರು.

ರಾಮನಗರ ಮತ್ತು ಮಾಗಡಿ ನನಗೆ ಎರಡು ಕಣ್ಣುಗಳಿದ್ದಂತೆ ಎನ್ನುತ್ತಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಹೇಮಾವತಿ ನೀರಿನ ವಿಷಯದಲ್ಲಿ ಮಾಗಡಿಗೆ ಅನ್ಯಾಯವಾಗುತ್ತಿದ್ದರೂ ಯಾಕೆ ಇದುವರೆಗೆ ಒಂದೇ ಒಂದು ಹೇಳಿಕೆ ಕೊಟ್ಟಿಲ್ಲ?
– ಎಚ್.ಸಿ. ಬಾಲಕೃಷ್ಣ ಶಾಸಕ

‘ಹೋರಾಟದಿಂದಲೇ ಹಕ್ಕು ಪಡೆಯಬೇಕು’

‘ಧೀರ್ಘ ಹೋರಾಟದ ಫಲವಾಗಿ ಹೇಮಾವತಿ ನೀರು ನಮಗೆ ಹಂಚಿಕೆಯಾಗಿದೆ. ವೀರಪ್ಪ ಮೊಯಿಲಿ ಮತ್ತು ಎಸ್.ಎಂ. ಕೃಷ್ಣ ಮುಖ್ಯಮಂತ್ರಿಗಳಾಗಿದ್ದಾಗ ನಮ್ಮ ಪಾಲಿನ ನೀರಿಗಾಗಿ ಹೋರಾಟಗಾರರಾದ ಟಿ.ಎ. ರಂಗಯ್ಯ ಮಾದೇಗೌಡ ಮಾಜಿ ಸಚಿವರಾದ ವೈ.ಕೆ. ರಾಮಯ್ಯ ಸಮ್ಮುಖದಲ್ಲಿ ಸಭೆ ನಡೆದು ಅಂತಿಮವಾಗಿ ನೀರು ಮಂಜೂರಾಗಿತ್ತು. ಆದರೀಗ ಹೋರಾಟದ ಮೂಲಕವೇ ನಮ್ಮ ಹಕ್ಕು ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ’ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.

ಬೆಂಬಲಿಸದ ವಿರೋಧ ಪಕ್ಷಗಳು ರಸ್ತೆ ತಡೆ ಪ್ರತಿಭಟನೆಗೆ ಪಕ್ಷಾತೀತವಾಗಿ ಬೆಂಬಲಿಸುವಂತೆ ಕಾಂಗ್ರೆಸ್ ನೀಡಿದ್ದ ಕರೆಗೆ ವಿರೋಧ ಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ ಸೊಪ್ಪು ಹಾಕಲಿಲ್ಲ. ಪ್ರತಿಭಟನೆಯಲ್ಲೂ ಭಾಗವಹಿಸಲಿಲ್ಲ. ಈ ಕುರಿತು ರೈತ ಮುಖಂಡರೊಂದಿಗೆ ಶಾಸಕ ಬಾಲಕೃಷ್ಣ ಅಸಮಾಧಾನ ವ್ಯಕ್ತಪಡಿಸಿದರು.

‘ಮುಂದೆ ಕಾಂಗ್ರೆಸ್ ಪಕ್ಷದಿಂದಲೇ ಈ ಹೋರಾಟ ಮುಂದುವರಿಸುತ್ತೇವೆ. ಒಂದು ವಾರದ ನಂತರ ಯಾವ ರೀತಿ ಪ್ರತಿಭಟನೆ ಮಾಡಬೇಕೆಂಬುದರ ಕುರಿತು ರೂಪರೇಷಗಳನ್ನು ಸಿದ್ಧಪಡಿಸಿಕೊಳ್ಳುತ್ತೇವೆ’ ಎಂದರು. ‘ನೀರು ಬರುವವರೆಗೂ ಹೋರಾಟ ನಿರಂತರವಾಗಿರಬೇಕು’ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಬೈರೇಗೌಡ ತಾಲ್ಲೂಕು ಅಧ್ಯಕ್ಷರಾ ಹೊಸಪಾಳ್ಯ ಲೋಕೇಶ್ ಗೋವಿಂದರಾಜು ಸಲಹೆ ನೀಡಿದರು.

ಮಾಗಡಿ ತಾಲ್ಲೂಕಿಗೆ ಹೇಮಾವತಿ ನೀರು ಹರಿಸುವ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ತುಮಕೂರಿನ ವಿರೋಧ ಖಂಡಿಸಿ ಶಾಸಕ ಎಚ್‌.ಸಿ. ಬಾಲಕೃಷ್ಣ ನೇತೃತ್ವದಲ್ಲಿ ಗುರುವಾರ ತಾಲ್ಲೂಕಿನ ಮರೂರು ಹ್ಯಾಂಡ್‌ ಪೋಸ್ಟ್ ಬಳಿಯ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ –75ರಲ್ಲಿ ಪಾದಯಾತ್ರೆ ನಡೆಯಿತು
ಮಾಗಡಿ ತಾಲ್ಲೂಕಿಗೆ ಹೇಮಾವತಿ ನೀರು ಹರಿಸುವಂತೆ ಒತ್ತಾಯಿಸಿ ಕುದೂರು ಪೊಲೀಸ್ ಠಾಣೆ ಮುಂಭಾಗ ತಹಶೀಲ್ದಾರ್ ಶರತ್ ಕುಮಾರ್ ಅವರಿಗೆ ಶಾಸಕ ಎಚ್‌.ಸಿ. ಬಾಲಕೃಷ್ಣ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ ಹಾಗೂ ಮುಖಂಡರು ಮನವಿ ಸಲ್ಲಿಸಿದರು
ಹೆದ್ದಾರಿ ತಡೆ ಪ್ರತಿಭಟನೆ ಹಿನ್ನೆಲೆಯಲ್ಲಿ ಮರೂರು ಹ್ಯಾಂಡ್‌ ಪೋಸ್ಟ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.