ADVERTISEMENT

ಹೈಕಮಾಂಡ್ ಸೂಚಿಸಿದರೆ ಲೋಕಸಭೆಗೆ ಸ್ಪರ್ಧೆ: ಯೋಗೇಶ್ವರ್

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2019, 9:32 IST
Last Updated 15 ಮಾರ್ಚ್ 2019, 9:32 IST
   

ರಾಮನಗರ: 'ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ವೈಯಕ್ತಿಕವಾಗಿ ಆಸಕ್ತಿ ಇಲ್ಲ. ಹೈಕಮಾಂಡ್ ಸೂಚಿಸಿದರೆ ಮಾತ್ರ ಸ್ಪರ್ಧಿಸುತ್ತೇನೆ' ಎಂದು ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್ ಹೇಳಿದರು.

'ನನ್ನನ್ನು ಚನ್ನಪಟ್ಟಣ ಜನತೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಿರಸ್ಕಾರ ಮಾಡಿದ್ದಾರೆ. ಹೀಗಾಗಿ ಮುಂದಿನ ಐದು ವರ್ಷ ಚುನಾವಣೆಗೆ ನಿಲ್ಲಬಾರದು ಎಂದು ನಿರ್ಧರಿಸಿದ್ದೆ. ಮೇಲಾಗಿ ನನಗೆ ರಾಜ್ಯ ರಾಜಕಾರಣದಲ್ಲೇ ಆಸಕ್ತಿ ಹೆಚ್ಚು. ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಪಕ್ಷ ಯಾರನ್ನೇ ಅಭ್ಯರ್ಥಿ ಆಗಿಸಿದರೂ ಬಿಜೆಪಿ ಗೆಲುವು‌ ನಿಶ್ಚಿತ. ಇಲ್ಲಿ ಅಭ್ಯರ್ಥಿ ಗೌಣ.‌ ಮೋದಿಯೇ ನಮ್ಮೆಲ್ಲರ ಅಭ್ಯರ್ಥಿ' ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಿಜೆಪಿ ಜೊತೆ ಸಂಪರ್ಕ

ADVERTISEMENT

ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಈಗಲೂ ಬಿಜೆಪಿ ಸಂಪರ್ಕದಲ್ಲಿ ಇದ್ದಾರೆ ಎಂದು ಯೋಗೇಶ್ವರ್ ಹೇಳಿದರು.

ಚುನಾವಣೆ ಘೋಷಣೆಗೆ ಹಿಂದಿನ ದಿನವಷ್ಟೇ ಕುಮಾರಸ್ವಾಮಿ ದೆಹಲಿಯಲ್ಲಿ ಪ್ರಧಾನಿಯನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ರಾಜ್ಯದಲ್ಲಿ‌ ಮೋದಿಯನ್ನು ಬಯ್ಯುವ ಅವರು ಅದೇ ಪ್ರಧಾನಿ ಭೇಟಿಗೆ‌ ಸಮಯ ಕೇಳುತ್ತಾರೆ ಎಂದು ಅಣಕಿಸಿದರು.

ನನ್ನನ್ನೂ ಒಳಗೊಂಡು ಬಿಜೆಪಿಯ ಯಾವ ನಾಯಕರು ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿಲ್ಲ. ಮನಸ್ಸು ಮಾಡಿದರೆ ಒಂದೇ ದಿನದಲ್ಲಿ ಆ ಕೆಲಸ ಮಾಡಬಹುದು. ಲೋಕಸಭಾ ಚುನಾವಣೆಯ ನಂತರ ತಾನಾಗಿಯೇ ಸರ್ಕಾರ ಬೀಳಲಿದೆ. ಕುಮಾರಸ್ವಾಮಿ ಬಿಜೆಪಿ ಬೆಂಬಲ ಕೋರಿದರೆ ಅಚ್ಚರಿ ಪಡಬೇಕಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.