ADVERTISEMENT

ರಾಮನಗರ| ‘ಹುಕ್ಕಾ ಬಾರ್’ ಮೇಲೆ ಪೊಲೀಸ್ ದಾಳಿ: ಮಾಲೀಕ ಸೇರಿ ಮೂವರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 18:30 IST
Last Updated 10 ಆಗಸ್ಟ್ 2025, 18:30 IST
ಅನಧಿಕೃತವಾಗಿ ಹುಕ್ಕಾ ಬಾರ್ ತೆರೆದಿದ್ದ ರಾಮನಗರ ಹೊರವಲಯದ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಫಿಲ್ಟರ್ ಕೆಫೆ ಆ್ಯಂಡ್ ಕಿಚನ್‌ ರೆಸ್ಟೋರೆಂಟ್‌ ಮೇಲೆ ಸಿಇಎನ್ ಠಾಣೆ ಡಿವೈಎಸ್ಪಿ ಕೆಂಚೇಗೌಡ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದರು
ಅನಧಿಕೃತವಾಗಿ ಹುಕ್ಕಾ ಬಾರ್ ತೆರೆದಿದ್ದ ರಾಮನಗರ ಹೊರವಲಯದ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಫಿಲ್ಟರ್ ಕೆಫೆ ಆ್ಯಂಡ್ ಕಿಚನ್‌ ರೆಸ್ಟೋರೆಂಟ್‌ ಮೇಲೆ ಸಿಇಎನ್ ಠಾಣೆ ಡಿವೈಎಸ್ಪಿ ಕೆಂಚೇಗೌಡ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದರು   

ರಾಮನಗರ: ಅನಧಿಕೃತವಾಗಿ ಹುಕ್ಕಾ ಬಾರ್ ತೆರೆದಿದ್ದ ನಗರದ ಹೊರವಲಯದ ಎಸ್‌.ಬಿ. ದೊಡ್ಡಿಯ ಮಾದಾಪುರ ಗೇಟ್ ಬಳಿಯ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಫಿಲ್ಟರ್ ಕೆಫೆ ಆ್ಯಂಡ್ ಕಿಚನ್‌ ರೆಸ್ಟೋರೆಂಟ್‌ ಮೇಲೆ ಸಿಇಎನ್ ಠಾಣೆ ಡಿವೈಎಸ್ಪಿ ಕೆಂಚೇಗೌಡ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ, ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರೆಸ್ಟೋರೆಂಟ್‌ನ ವ್ಯವಸ್ಥಾಪಕ ವಡೇರಹಳ್ಳಿಯ ಅರುಣ್ ಕುಮಾರ್, ಹುಕ್ಕಾ ಮೇಕರ್ ಅರುಣಾಚಲ ಪ್ರದೇಶ ಮೂಲದ ಅನಿಲ್ ನಜರಿ ಹಾಗೂ ಮಾಲೀಕ ಬೆಂಗಳೂರಿನ ನಾಗರಬಾವಿಯ ಹೇಮಂತ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೈಕಿ, ಅರುಣ್ ಮತ್ತು ಅನಿಲ್‌ನನ್ನು ವಶಕ್ಕೆ ಪಡೆದಿದ್ದಾರೆ. ಹುಕ್ಕಾ ಸೇವನೆಯ 11 ಪಾಟ್‌ ಹಾಗೂ ತಯಾರಿಸಲು ಬಳಸುವ ಫ್ಲೇವರ್‌ ಡಬ್ಬಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಗ್ರಾಹಕರ ಸೋಗಿನಲ್ಲಿ ತೆರಳಿದ ಪೊಲೀಸ್ ಸಿಬ್ಬಂದಿ, ರೆಸ್ಟೊರೆಂಟ್‌ನಲ್ಲಿ ಹುಕ್ಕಾ ಬಾರ್ ತೆರೆದಿರುವುದನ್ನು ಖಚಿತಪಡಿಸಿಕೊಂಡರು. ನಂತರ, ಹೆಚ್ಚುವರಿ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಯಿಕೊಂಡು ದಾಳಿ ನಡೆಸಿದರು.

ADVERTISEMENT

ಅನುಮತಿ ಇಲ್ಲದೆ ಹುಕ್ಕಾ ಲಾಂಜ್ ತೆರೆದು, ಅಕ್ರಮ ಲಾಭಕ್ಕಾಗಿ ಈಗಾಗಲೇ ನಿಷೇಧಿಸಿರುವ ತಂಬಾಕು ಮತ್ತು ಮೊಲಾಶಿಸ್ ಅಂಶಗಳ ಉತ್ಪನ್ನಗಳ ಹುಕ್ಕಾ ಸೇವನೆಗೆ ಗ್ರಾಹಕರಿಗೆ ಅವಕಾಶ ಮಾಡಿ ಕೊಟ್ಟಿರುವುದು ದಾಳಿಯಲ್ಲಿ ಕಂಡುಬಂತು ಎಂದು ಪೊಲೀಸರು ಹೇಳಿದರು.

‘ಹುಕ್ಕಾ ಸೇವನೆ ಕುರಿತು ರೆಸ್ಟೊರೆಂಟ್‌ಗೆ ಬರುವವರು ತಮ್ಮ ಮೊಬೈಲ್‌ನಲ್ಲಿ ವಿಡಿಯೊ ಮಾಡದಂತೆ ನಿಗಾ ಇಟ್ಟಿದ್ದ ಮಾಲೀಕ, ಅದಕ್ಕಾಗಿ 15ಕ್ಕೂ ಹೆಚ್ಚು ಬೌನ್ಸರ್‌ಗಳನ್ನು ನೇಮಿಸಿಕೊಂಡಿದ್ದಾನೆ. ಪೊಲೀಸರು ದಾಳಿಗೆ ಬರುವುದನ್ನು ಮುಂಚೆಯೇ ತಿಳಿದುಕೊಳ್ಳುವುದಕ್ಕಾಗಿ ರೆಸ್ಟೊರೆಂಟ್‌ನ ಅಕ್ಕಪಕ್ಕ ಕೆಲವರನ್ನು ನಿಯೋಜಿಸಿ ನಿಗಾ ಇಡಲಾಗಿತ್ತು’ ಎಂದು  ಡಿವೈಎಸ್ಪಿ ಕೆಂಚೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ರೆಸ್ಟೋರೆಂಟ್ ಮಾಲೀಕ ಸೇರಿದಂತೆ ಮೂವರ ವಿರುದ್ಧ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆಯಡಿ (ಕೊಟ್ಪಾ) ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ. ಹುಕ್ಕಾ ಉತ್ಪನ್ನಗಳ ಜೊತೆಗೆ ಮಾದಕವಸ್ತುಗಳನ್ನು ಸಹ ಬಳಸುತ್ತಿದ್ದ ಅನುಮಾನವಿದೆ. ಹಾಗಾಗಿ ವಶಪಡಿಸಿಕೊಂಡಿರುವ ಉತ್ಪನ್ನಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.