
ಪ್ರಜಾವಾಣಿ ವಾರ್ತೆ
ರಾಮನಗರ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2004–2007ರವರೆಗಿನ ರಾಜ್ಯಶಾಸ್ತ್ರ ವಿಭಾಗದ ಪದವಿ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ತಾಲ್ಲೂಕಿನ ಅವ್ವೇರಹಳ್ಳಿಯಲ್ಲಿರುವ ರೆಸಾರ್ಟ್‌ನಲ್ಲಿ ನಡೆಯಿತು. ಕಾರ್ಯಕ್ರಮವು ಹಳೆ ವಿದ್ಯಾರ್ಥಿಗಳು ಹಾಗೂ ಗುರುಗಳ ಸಂಗಮಕ್ಕೆ ಸಾಕ್ಷಿಯಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಪ್ರೊ. ರಂಗಸ್ವಾಮಿ ಡಿ., ‘ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಣ ಬಾಂಧವ್ಯ ಇತ್ತೀಚೆಗೆ ಕ್ಷೀಣಿಸುತ್ತಿದೆ. ಇಂತಹ ಸಂದರ್ಭದಲ್ಲಿ 20 ವರ್ಷಗಳ ಹಿಂದೆ ತಮಗೆ ಕಲಿಸಿದ ಗುರುಗಳನ್ನು ನೆನಪಿಸಿಕೊಂಡು ಗುರುವಂದನೆ ಸಲ್ಲಿಸುತ್ತಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಶಿಷ್ಯರ ಉತ್ತಮವಾದ ಬದುಕು ರೂಪಿಸಿಕೊಂಡು ಸಮಾಜದಲ್ಲಿ ಸ್ಥಾನಮಾನ ಗಳಿಸಿದಾಗ ಗುರುವಿನ ಶ್ರಮ ಸಾರ್ಥಕವೆನಿಸುತ್ತದೆ. ಅದರಲ್ಲೂ ಈ ರೀತಿ ಎಲ್ಲರೂ ಸೇರಿ ಗುರುವಂದನೆ ಮಾಡಿದಾಗ, ಸಿಗುವ ತೃಪ್ತಿಗೆ ಬೆಲೆ ಕಟ್ಟಲಾಗದು. ನಮ್ಮ ನೆಲದ ಗುರು–ಶಿಷ್ಯರ ಸಂಬಂಧ ಎಷ್ಟು ಗಟ್ಟಿಯಾದುದು ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ’ ಎಂದರು.
ಪ್ರಾಧ್ಯಾಪಕರಾದ ಪ್ರೊ.ಎಂ. ಶಿವನಂಜಯ್ಯ, ಡಾ. ವಿ. ವೆಂಕಟೇಶ್, ಡಾ. ರಮೇಶ್, ಡಾ. ಎಚ್.ಆರ್. ಅನುರಾಧ, ಡಾ. ಬಿ.ಟಿ. ನೇತ್ರಾವತಿ ಗೌಡ, ಕ್ಯಾಪ್ಟನ್ ರಾಘವೇಂದ್ರ ರಾವ್, ಡಾ. ಎ.ಟಿ. ಮನು ಅವರನ್ನು ವಿದ್ಯಾರ್ಥಿಗಳು ಸನ್ಮಾನಿಸಿ ಗುರು ಕಾಣಿಕೆ ಅರ್ಪಿಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ವೇತ, ಸ್ವಾಗತವನ್ನು ರೂಪಾ, ಅತಿಥಿಗಳ ಪರಿಚಯವನ್ನು ಭಾಸ್ಕರ್ ಮಾಡಿದರು. ಕೃಷ್ಣಪ್ಪ, ಧನಂಜಯ ಬಿ., ದೇವು ಆರ್. ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.