ADVERTISEMENT

ವೀರಾಪುರದಲ್ಲಿ ವಸತಿ ಶಾಲೆ–ಶಾಸಕ

ಶ್ರದ್ಧಾಭಕ್ತಿಯಿಂದ ಡಾ.ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2019, 14:46 IST
Last Updated 16 ಮಾರ್ಚ್ 2019, 14:46 IST
ಮಾಗಡಿ ತಾಲ್ಲೂಕಿನ ವೀರಾಪುರದಲ್ಲಿ ನಡೆದ ಪುಣ್ಯಸ್ಮರಣೆಯಲ್ಲಿ ಡಾ.ಶಿವಕುಮಾರಸ್ವಾಮೀಜಿ ಅವರ ಭಾವಚಿತ್ರದ ಮೆರವಣಿಗೆ ಸಿದ್ದಲಿಂಗಸ್ವಾಮಿ ನೇತೃತ್ವದಲ್ಲಿ ನಡೆಯಿತು.
ಮಾಗಡಿ ತಾಲ್ಲೂಕಿನ ವೀರಾಪುರದಲ್ಲಿ ನಡೆದ ಪುಣ್ಯಸ್ಮರಣೆಯಲ್ಲಿ ಡಾ.ಶಿವಕುಮಾರಸ್ವಾಮೀಜಿ ಅವರ ಭಾವಚಿತ್ರದ ಮೆರವಣಿಗೆ ಸಿದ್ದಲಿಂಗಸ್ವಾಮಿ ನೇತೃತ್ವದಲ್ಲಿ ನಡೆಯಿತು.   

ಕುದೂರು(ಮಾಗಡಿ): ಬುದ್ಧ, ಬಸವಣ್ಣ ಅವರ ನಂತರ ಮನುಕುಲಕ್ಕೆ ಮಾನವೀಯತೆಯ ಕರುಣೆಯನ್ನು ತೋರಿಸಿಕೊಟ್ಟ ಮಹಾನ್‌ ದಾರ್ಶನಿಕರು ಡಾ.ಶಿವಕುಮಾರ ಸ್ವಾಮೀಜಿ ಎಂದು ಶಾಸಕ ಎ.ಮಂಜುನಾಥ ತಿಳಿಸಿದರು.

ವೀರಾಪುರದಲ್ಲಿ ಶನಿವಾರ ನಡೆದ ಡಾ.ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಚುನಾವಣೆಗೆ ಮುನ್ನ ಶ್ರೀಗಳ ಆಶೀರ್ವಾದ ಪಡೆಯಲು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದಾಗ ಮಾಗಡಿ ತಾಲ್ಲೂಕಿಗೆ ನೀರಾವರಿ ಅನುಕೂಲ ಮಾಡಿಕೊಡಬೇಕು ಎಂದು ಸೂಚಿಸಿದ್ದರು. ವೀರಾಪುರದಲ್ಲಿ ಶ್ರೀಗಳ ಸವಿನೆನಪಿಗಾಗಿ ₹5 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್‌ ವಸತಿ ಶಾಲೆ, ಭಾಷ್‌ ಕಂಪನಿಯಿಂದ ಸುಸಜ್ಜಿತ ಗ್ರಂಥಾಲಯ ಆರಂಭಿಸಲಾಗುವುದು. ಶ್ರೀಗಳು ಲಿಂಗೈಕ್ಯರಾದ ಜನವರಿ 21ರಂದು ಸರ್ಕಾರದ ವತಿಯಿಂದ ದಾಸೋಹ ದಿನವನ್ನಾಗಿ ಆಚರಿಸಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಂಕಲ್ಪ ಮಾಡಿದ್ದಾರೆ ಎಂದರು.

ADVERTISEMENT

ಬಡತನ, ಅನಕ್ಷರತೆಯ ಕುಟುಂಬದಿಂದ ಬಂದ ಮಕ್ಕಳಿಗೆ ಮಾತೃ ಹೃದಯಿಯಾಗಿದ್ದ ಮಹಾನ್‌ ಮಾನವತಾವಾದಿ ಸ್ವಾಮೀಜಿ ಜನ್ಮಸ್ಥಳವನ್ನು ನಾಡಿನ ಪ್ರಜ್ಞಾವಂತಿಕೆಯ, ಸೌಹಾರ್ದದ ಕೇಂದ್ರವನ್ನಾಗಿಸಲು ಶ್ರಮಿಸುವುದಾಗಿ ತಿಳಿಸಿದರು.

ಸಿದ್ಧಗಂಗಾಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮಿ ಮಾತನಾಡಿ, ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ನಂಬಿದ್ದ ಡಾ.ಶಿವಕುಮಾರ ಸ್ವಾಮೀಜಿ ಅವರು ವೈಯಕ್ತಿಕ ಬದುಕನ್ನು ತ್ಯಾಗಮಾಡಿ ಬಡಮಕ್ಕಳ ಸೇವೆಗೆ ಬದುಕನ್ನು ಮುಡಿಪಾಗಿಟ್ಟಿದ್ದರು. ತಾಯಿಹಾಲು ಅಮೃತಸಮಾನ ಎಂದು ನಂಬಿದ್ದರು. ಲಿಂಗದೀಕ್ಷೆ, ಪ್ರಸಾದನಿಷ್ಠೆಯಿಂದ ಬದುಕಿದ್ದೆ ಅವರ ಆರೋಗ್ಯದ ಗುಟ್ಟು ಎಂದರು.

ಕಾಂಗ್ರೆಸ್‌ ಮುಖಂಡ ಎಚ್‌.ಸಿ.ಬಾಲಕೃಷ್ಣ ಮಾತನಾಡಿ, ಮಠದ ಶ್ರೀಗಳ ಮಾರ್ಗದರ್ಶನದಿಂದ ನಮಗೆ ಮುಕ್ತಿ ದೊರೆಯಲಿದೆ ಎಂದರು.

ಶಿವಗಂಗೆ ಮೇಲಣಗವಿಮಠದ ಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶಿಸ್ತು ಮತ್ತು ಸಮಯಪ್ರಜ್ಞೆಗೆ ಮತ್ತೊಂದು ಹೆಸರೇ ಡಾ.ಶಿವಕುಮಾರ ಸ್ವಾಮೀಜಿ. ಅಶಿಸ್ತನ್ನು ಎಂದಿಗೂ ಸಹಿಸಲಿಲ್ಲ. ಸಭೆಗಳಿಗೆ ಗಡಿಯಾರದ ಮುಳ್ಳಿನಂತೆ ಅಲ್ಲಿ ಇದ್ದುಬಿಡುತ್ತಿದ್ದರು. ಮಠದ ಪ್ರತಿ ಕಟ್ಟಡಗಳ ಒಂದೊಂದು ಕಲ್ಲುಗಳು ಇಟ್ಟಿಗೆಗಳು ಶ್ರೀಗಳಿಂದ ಮಾತನಾಡಿಸಲ್ಪಟ್ಟಿವೆ ಎಂದರು.

‘ಭಕ್ತರ ನಡುವೆಯೇ ನಾನು ಬಾಳಬೇಕು. ನನಗಾಗಿ ಅವರು ಕಾಯಬಾರದು ಎಂಬುದನ್ನು ಸದಾ ಪಾಲಿಸಿಕೊಂಡು ಬಂದಿದ್ದರು. ನಡೆದಾಡುವ ದೇವರು ಎಂದು ನಾಡಿನ ಎಲ್ಲರ ಮನದಲ್ಲಿ ಉಳಿದಿರುವ ಕಾಯಕಯೋಗಿಯ ಆದರ್ಶಗಳು ನಮಗೆಲ್ಲರಿಗೂ ಮಾರ್ಗದರ್ಶಿ ಸೂತ್ರಗಳಾಗಿವೆ’ ಎಂದರು.

ವಿಧಾನ ಪರಿಷತ್‌ ಸದಸ್ಯ ಅ.ದೇವೇಗೌಡ, ರುದ್ರಮುನಿ ಶಿವಾಚಾರ್ಯ, ಕಂಚುಗಲ್‌ ಬಂಡೇಮಠದ ಬಸವಲಿಂಗಸ್ವಾಮಿ, ಗುಡೇಮಾರನಹಳ್ಳಿಯ ಚನ್ನಬಸವಸ್ವಾಮಿ, ಚಿಕ್ಕಮಸ್ಕಲ್‌ನ ಬಸವಲಿಂಗಸ್ವಾಮಿ, ಬಿಜೆಪಿ ಮುಖಂಡ ರುದ್ರೇಶ್‌, ಕಾಂಗ್ರೆಸ್‌ ಮುಖಂಡ ಬಿ.ಎಸ್‌.ಪುಟ್ಟರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ಗಂಗಮ್ಮ ನಾಗರಾಜು, ದಯಾನಂದ್‌, ಉಡುಕುಂಟೆ ಪ್ರಕಾಶ್‌ ವೇದಿಕೆಯಲ್ಲಿದ್ದರು.

ಶ್ರೀಗಳ ತಾಯಿತಂದೆ ಗದ್ದುಗೆಯಿಂದ ಬೆಳ್ಳಿರಥದಲ್ಲಿ ಶಿವಕುಮಾರಸ್ವಾಮೀಜಿ ಅವರ ಭಾವಚಿತ್ರವಿಟ್ಟು, ಮಹಿಳೆಯರು ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ವೇದಿಕೆ ಬರಲಾಯಿತು. ವೀರಾಪುರ, ದಲಿತ ಕಾಲೊನಿ, ಗೊಲ್ಲರಹಟ್ಟಿ, ಸುತ್ತಲಿನ ಭಕ್ತರು ಇದ್ದರು. ಸಾಮೂಹಿಕ ಅನ್ನದಾನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.