ADVERTISEMENT

ಹೈಕಮಾಂಡ್ ಸೂಚಿಸಿದರೆ ಸ್ಪರ್ಧೆ: ಯೋಗೇಶ್ವರ್

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2019, 11:36 IST
Last Updated 15 ಮಾರ್ಚ್ 2019, 11:36 IST
ಸಿ.ಪಿ. ಯೋಗೇಶ್ವರ್
ಸಿ.ಪಿ. ಯೋಗೇಶ್ವರ್   

ರಾಮನಗರ: ‘ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಲು ನನಗೆ ವೈಯಕ್ತಿಕವಾಗಿ ಆಸಕ್ತಿ ಇಲ್ಲ. ಆದರೆ ಹೈಕಮಾಂಡ್ ಸೂಚಿಸಿದಲ್ಲಿ ಸ್ಪರ್ಧಿಸುತ್ತೇನೆ' ಎಂದು ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್ ಹೇಳಿದರು.

'ನನ್ನನ್ನು ಚನ್ನಪಟ್ಟಣ ಜನತೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಿರಸ್ಕಾರ ಮಾಡಿದ್ದಾರೆ. ಹೀಗಾಗಿ ಮುಂದಿನ ಐದು ವರ್ಷ ಚುನಾವಣೆಗೆ ನಿಲ್ಲಬಾರದು ಎಂದು ನಿರ್ಧರಿಸಿದ್ದೆ. ಮೇಲಾಗಿ ನನಗೆ ರಾಜ್ಯ ರಾಜಕಾರಣದಲ್ಲೇ ಇರುವ ಆಸೆ ಇದ್ದು, ದೆಹಲಿಗೆ ಹೋಗುವ ಕನಸು ಇಲ್ಲ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಯಾರೇ ಬಿಜೆಪಿ ಅಭ್ಯರ್ಥಿಯಾದರೂ ಬಿಜೆಪಿ ಗೆಲುವು ಖಚಿತ. ಇಲ್ಲಿ ಅಭ್ಯರ್ಥಿ ಗೌಣ. ಮೋದಿಯೇ ನಮ್ಮೆಲ್ಲರ ಅಭ್ಯರ್ಥಿ. ಡಿ.ಕೆ. ಸಹೋದರರ ಉದ್ದಟತನ, ಅಂಹಕಾರಕ್ಕೆ ಕ್ಷೇತ್ರದ ಜನರೇ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಿಜೆಪಿ ಜೊತೆ ಉತ್ತಮ ಬಾಂಧವ್ಯ: ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಈಗಲೂ ಬಿಜೆಪಿ ರಾಷ್ಟ್ರೀಯ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಯೋಗೇಶ್ವರ್ ಹೇಳಿದರು.

ADVERTISEMENT

‘ಚುನಾವಣೆ ಘೋಷಣೆಯಾಗುವ ಹಿಂದಿನ ದಿನವಷ್ಟೇ ಕುಮಾರಸ್ವಾಮಿ ದೆಹಲಿಯಲ್ಲಿ ಪ್ರಧಾನಿಯನ್ನು ಭೇಟಿ ಮಾಡಿ ಒಂದು ಗಂಟೆ ಮಾತನಾಡಿದ್ದಾರೆ. ನೀತಿಸಂಹಿತೆ ಜಾರಿಯಾಗುವ ಸಂದರ್ಭದಲ್ಲಿ ಕೇವಲ ಅನುದಾನ ಕೇಳಲು ಅವರು ಹೋಗಿದ್ದರೆ?’ ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ ಮೋದಿಯನ್ನು ಬಯ್ಯುವ ಅವರು ಅದೇ ಪ್ರಧಾನಿ ಭೇಟಿಗೆ ಪದೇ ಪದೇ ಸಮಯ ಕೇಳುತ್ತಾರೆ’ ಎಂದು ಅಣಕಿಸಿದರು.

‘ನನ್ನನ್ನೂ ಒಳಗೊಂಡು ಬಿಜೆಪಿಯ ಯಾವ ನಾಯಕರು ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿಲ್ಲ. ಮನಸ್ಸು ಮಾಡಿದರೆ ಒಂದೇ ದಿನದಲ್ಲಿ ಆ ಕೆಲಸ ಸಾಧ್ಯವಿದೆ. ಲೋಕಸಭಾ ಚುನಾವಣೆಯ ನಂತರ ತಾನಾಗಿಯೇ ಸರ್ಕಾರ ಬೀಳಲಿದೆ. ಆಗ ಕುಮಾರಸ್ವಾಮಿ ಬಿಜೆಪಿ ಬೆಂಬಲ ಕೋರಿದರೆ ಅಚ್ಚರಿ ಪಡಬೇಕಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.