ADVERTISEMENT

ರೈತ ಸಿರಿ ಯೋಜನೆ ಅಳವಡಿಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 14:28 IST
Last Updated 27 ಡಿಸೆಂಬರ್ 2019, 14:28 IST
ಸಂವಾದದಲ್ಲಿ ಜಂಟಿ ಕೃಷಿ ನಿರ್ದೇಶಕ ರವಿ ಮಾತನಾಡಿದರು
ಸಂವಾದದಲ್ಲಿ ಜಂಟಿ ಕೃಷಿ ನಿರ್ದೇಶಕ ರವಿ ಮಾತನಾಡಿದರು   

ರಾಮನಗರ: ಸಿರಿ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ರೈತ ಸಿರಿ ಯೋಜನೆಯನ್ನು ಜಾರಿಗೆ ತಂದಿದ್ದು, ರೈತರು ಹೆಚ್ಚಾಗಿ ಈ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕೃಷಿ ಇಲಾಖೆಯ ಜಂಟಿನಿರ್ದೇಶಕ ಕೆ.ಎಚ್. ರವಿ ಹೇಳಿದರು.

ಇಲ್ಲಿನ ಕೃಷಿ ಇಲಾಖೆಯ ಆವರಣದಲ್ಲಿ ಶುಕ್ರವಾರ 2019-20ನೇ ಸಾಲಿನ ಆತ್ಮಯೋಜನೆಯಡಿ ಸಿರಿ ಧಾನ್ಯಗಳ ಉತ್ಪಾದನೆ ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ವ್ಯವಸ್ಥೆಗಳ ಕುರಿತು ರೈತರ ಮತ್ತು ವಿಜ್ಞಾನಿಗಳ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಿರಿಧಾನ್ಯಗಳನ್ನು ರೈತ ಉತ್ಪಾದಕ ಸಂಸ್ಥೆಗಳ ಮೂಲಕ ನೇರ ಮಾರುಕಟ್ಟೆ ಮಾಡಬಹುದು ಎಂದು ತಿಳಿಸಿದರು.

ಜಿಲ್ಲಾ ಆತ್ಮ ಯೋಜನೆಯ ಉಪ ಯೋಜನೆಯ ಉಪನಿರ್ದೇಶಕ ಅಶೋಕ್ ಮಾತನಾಡಿ, ಸಮಾನ ವಯಸ್ಕರ ರೈತರು ಸೇರಿ, ಗುಂಪು ರಚನೆ ಮಾಡಿಕೊಳ್ಳಬಹುದು. ಆತ್ಮ ಯೋಜನೆಯಡಿ ಸಿರಿಧಾನ್ಯ ಬೆಳೆಗಾರರು ಗುಂಪು ರಚನೆ ಮಾಡಿ ಬಿತ್ತನೆಯಿಂದ ಕಠಾವಿನವರೆಗೆ, ರೈತರಿಗೆ ತರಬೇತಿ ನೀಡಲಾಗುತ್ತದೆ. ಉತ್ಪಾದನೆಯಾದ ನಂತರವು ರೈತರಿಗೆ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತದೆ. ಸಿರಿಧಾನ್ಯ ಉತ್ಪಾದನೆಯ ಜತೆಗೆ ಹಾಗೆಯೆ ಮಾರುಕಟ್ಟೆಯ ಬಗ್ಗೆ ರೈತರು ಎಚ್ಚರವಹಿಸಬೇಕು ಎಂದು ತಿಳಿಸಿದರು.

ADVERTISEMENT

ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ವಿಭಾಗದ ವಿಜ್ಞಾನಿ ಡಾ. ದಿನೇಶ್ ಮಾತನಾಡಿ, ಪ್ರಸ್ತುತ ಇರುವ ನೀರಿನ ಅಭಾವದಲ್ಲಿ ರೈತರು ಸಿರಿಧಾನ್ಯ ಬೆಳೆಯುವುದಕ್ಕೆ ಹೆಚ್ಚಿನ ಒತ್ತು ನೀಡಬೇಕು. ಇದನ್ನು ಮಾರಾಟ ಮಾಡುವುದರ ಜತೆಗೆ, ಸ್ವಂತಕ್ಕೂ ಬಳಕೆ ಮಾಡಿಕೊಳ್ಳಬಹುದಾಗಿದೆ. ಸಿರಿಧಾನ್ಯದಲ್ಲಿ ಗ್ಲೆಸಿಮಿಕ್ಸ್ ಇಂಡೆಕ್ಸ್ ಮತ್ತು ಹೆಚ್ಚಿನ ನಾರಿನಾಂಶ ಹಾಗೂ ಗ್ಲುಟಿನ್ ಅಂಶ ಇಲ್ಲದ ಕಾರಣ, ಮಧುಮೇಹಿಗಳಿಗೆ ಉತ್ತಮ ಆಹಾರವಾಗಿದೆ. ಇವುಗಳನ್ನು ಬೆಳೆಯಲು ಹೆಚ್ಚಿನ ರಸಗೊಬ್ಬರದ ಅವಶ್ಯಕತೆ ಇಲ್ಲ ಎಂದರು.

ಕೃಷಿ ವಿಜ್ಞಾನಿ ಲತಾ ಕುಲಕರ್ಣಿ ಮಾತನಾಡಿ, ರೈತರು ಸಿರಿಧಾನ್ಯಗಳನ್ನು ಮಾರಾಟ ಮಾಡಲು ಸರ್ಕಾರದಿಂದ ಅನುಮತಿ ಪಡೆದು, ಉತ್ತಮ ರೀತಿಯಲ್ಲಿ ಪ್ಯಾಕಿಂಗ್ ಮಾಡಿದರೇ ಗ್ರಾಹಕರನ್ನು ಆಕರ್ಷಿಸುವುದರ ಜತೆಗೆ, ಹೆಚ್ಚಿನ ಬೆಲೆಗೆ ಮಾರಾಟ ಮಾಡಿ, ಲಾಭಗಳಿಸಬಹುದು ಎಂದು ತಿಳಿಸಿದರು.

ಉಪಯೋಜನೆಯ ಅಧಿಕಾರಿ ಕಿರಣ್, ಸಹಾಯಕ ಕೃಷಿ ನಿರ್ದೇಶಕಿ ರೇಷ್ಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.