ADVERTISEMENT

ನಗರಸಭೆ: ಕಡೇ ದಿನ ನಾಮಪತ್ರ ಸಲ್ಲಿಕೆ ಅಬ್ಬರ!

ರಾತ್ರಿವರೆಗೂ ನಡೆದ ಪ್ರಕ್ರಿಯೆ; ರಾಮನಗರದಲ್ಲಿ 145 ಮಂದಿಯಿಂದ ಉಮೇದುವಾರಿಕೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 4:33 IST
Last Updated 16 ಏಪ್ರಿಲ್ 2021, 4:33 IST
27ನೇ ವಾರ್ಡಿನಿಂದ ಜೆಡಿಎಸ್ ಅಭ್ಯರ್ಥಿಯಾಗಿ ವಿ. ಕಲಾ ಗುರುವಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು
27ನೇ ವಾರ್ಡಿನಿಂದ ಜೆಡಿಎಸ್ ಅಭ್ಯರ್ಥಿಯಾಗಿ ವಿ. ಕಲಾ ಗುರುವಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು   

ರಾಮನಗರ: ಜಿಲ್ಲೆಯ ರಾಮನಗರ ಹಾಗೂ ಚನ್ನಪಟ್ಟಣ ನಗರಸಭೆಗಳಿಗೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಗುರುವಾರ ಅಭ್ಯರ್ಥಿಗಳು ಮುಗಿಬಿದ್ದರು. ರಾತ್ರಿವರೆಗೂ ಉಮೇದುವಾರಿಕೆ ಪ್ರಕ್ರಿಯೆ ನಡೆಯಿತು.

ಎರಡೂ ನಗರಸಭೆಗಳ ತಲಾ 31 ವಾರ್ಡುಗಳಿಗೆ ಚುನಾವಣೆ ನಡೆದಿದ್ದು, ರಾಮನಗರದಲ್ಲಿ ಗುರುವಾರ ಒಂದೇ ದಿನ 130 ನಾಮಪತ್ರಗಳು ಸಲ್ಲಿಕೆ ಆಗಿವೆ. ಒಟ್ಟಾರೆ 145 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುವುದಾಗಿ ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದರು. ಮಧ್ಯಾಹ್ನ 3 ಗಂಟೆ ಒಳಗೆ ಬಂದ ಅಭ್ಯರ್ಥಿಗಳಿಗೆ ಅಧಿಕಾರಿಗಳು ಟೋಕನ್‌ ನೀಡಿ ನಂತರದಲ್ಲಿಯೂ ನಾಮಪತ್ರ ಸ್ವೀಕಾರ ಮಾಡಿದರು.

ರಾಮನಗರದಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಸಂಜೆ 5.30ರ ಸುಮಾರಿಗೆ ಮುಕ್ತಾಯ ಆಯಿತು. ಚನ್ನಪಟ್ಟಣದಲ್ಲಿ ರಾತ್ರಿವರೆಗೂ ನಾಮಪತ್ರ ಸ್ವೀಕಾರ ನಡೆದಿದ್ದು, ಒಟ್ಟು 134 ಮಂದಿ ಉಮೇದುವಾರಿಕೆ ಸಲ್ಲಿಕೆ ಮಾಡಿರುವುದಾಗಿ ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಇದೇ 19 ಕಡೆಯ ದಿನವಾಗಿದೆ.

ADVERTISEMENT

ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್‌ ಹಾಗೂ ಬಿಜೆಪಿ ಈ ಬಾರಿ ಕಾದು ನೋಡುವ ತಂತ್ರ ಅನುಸರಿಸಿದ್ದು, ಕಡೆಯ ದಿನಗಳಲ್ಲಿ ಬಿ ಫಾರಂ ವಿತರಿಸಿದವು. ಮಂಗಳವಾರ ಯುಗಾದಿ ಹಾಗೂ ಬುಧವಾರ ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಇದ್ದು, ನಾಮಪತ್ರ ಸಲ್ಲಿಕೆಗೆ ಅವಕಾಶ ಇರಲಿಲ್ಲ. ಹೀಗಾಗಿ ಕಡೆಯ ದಿನದಂದು ಅಭ್ಯರ್ಥಿಗಳು ಮುಗಿಬಿದ್ದರು.

ಎಲ್ಲ ವಾರ್ಡುಗಳಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಅದರಲ್ಲೂ ಈ ಬಾರಿ ಬಿಜೆಪಿಯಿಂದ ಹೆಚ್ಚು ಮಂದಿ ಸ್ಪರ್ಧೆಗೆ ಉತ್ಸಾಹ ತೋರಿದ್ದಾರೆ. ಜೊತೆಗೆ ಆಮ್‌ ಆದ್ಮಿ ಮೊದಲಾದ ಪಕ್ಷಗಳ ಮೂಲಕವೂ ಕೆಲವರು ಸ್ಪರ್ಧೆಗೆ ಒಲವುತೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.