ADVERTISEMENT

ರಾಮನಗರ | ದೇಶೀಯ ರಾಸುಗಳಿಗೆ ಪ್ರೋತ್ಸಾಹ: ಭರವಸೆ

ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ: ಆನೇಕಲ್‌ನ ಶ್ರೀನಿವಾಸ್‌ಗೆ ಪ್ರಥಮ ಬಹುಮಾನ

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 6:48 IST
Last Updated 10 ಜನವರಿ 2022, 6:48 IST
ಮಾಗಡಿಯಲ್ಲಿ ನಡೆದ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಪಿ.ಶ್ರೀನಿವಾಸ್‌ ಅವರನ್ನು ಶಾಸಕ ಎ.ಮಂಜುನಾಥ್‌ ಸನ್ಮಾನಿಸಿದರು. ಆಯೋಜಕ ಜುಟ್ಟನಹಳ್ಳಿ ಜಯರಾಮ್‌ ಇದ್ದರು
ಮಾಗಡಿಯಲ್ಲಿ ನಡೆದ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಪಿ.ಶ್ರೀನಿವಾಸ್‌ ಅವರನ್ನು ಶಾಸಕ ಎ.ಮಂಜುನಾಥ್‌ ಸನ್ಮಾನಿಸಿದರು. ಆಯೋಜಕ ಜುಟ್ಟನಹಳ್ಳಿ ಜಯರಾಮ್‌ ಇದ್ದರು   

ಮಾಗಡಿ: ದೇಶೀಯ ರಾಸುಗಳನ್ನು ಸಾಕುವವರಿಗೆ ಪ್ರೋತ್ಸಾಹ ನೀಡಿ ಪಶುಪಾಲನಾ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಲಾಗುವುದು ಎಂದು ಶಾಸಕ ಎ.ಮಂಜುನಾಥ್‌ ತಿಳಿಸಿದರು.

ಪಟ್ಟಣದ ಕೋಟೆ ಬಯಲಿನಲ್ಲಿ ಜುಟ್ಟನಹಳ್ಳಿ ವಿನಾಯಕ ಗೋಪಾಲಕರ ಸಂಘ, ಹೊಸದುರ್ಗತಾಲ್ಲೂಕು ಕಲ್ಲೋಡು ಎಸ್‌.ವಿ.ಡೈರಿ ಫಾರಂ ಮತ್ತು ಪುಡ್ಸ್‌, ಕನಕನಪಾಳ್ಯ ಪಟಾಲಮ್ಮ ಪಶುಪಾಲನೆ ಸಮಿತಿ, ಕೆ.ಎಂ.ನಾಗರಾಜು ಮತ್ತು ಲೋಕೇಶ್‌ ಸಹಯೋಗದಲ್ಲಿ ಸಂಜೆ ನಡೆದ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ತಾಲ್ಲೂಕಿನ ಸುಗ್ಗನಹಳ್ಳಿ ಮತ್ತು ತಿರುಮಲೆ ರಂಗನಾಥ ಸ್ವಾಮಿ ದನಗಳ ಜಾತ್ರೆಯಲ್ಲಿ ಭಾಗವಹಿಸುವ ರಾಸುಗಳಿಗೆ ಹಿಂದೆ ಮಾಜಿ ಸಚಿವ ಎಚ್‌.ಎಂ.ರೇವಣ್ಣ ನೀಡುತ್ತಿದ್ದಂತೆ, ವಿಶೇಷ ಬಹುಮಾನ ನೀಡಲಾಗುವುದು. ರಾಸುಗಳ ಜಾತ್ರೆಗಳು ಕೆಂಪೇಗೌಡರ ನಾಡಿನ ಜನಪದ ಜೀವವೈವಿಧ್ಯವನ್ನು ಪರಿಚಯಿಸಿ, ದೇಶೀಯರಾಸುಗಳನ್ನು ಸಾಕುವ ಗೋಪಾಲಕರ ಪರಂಪರೆಯನ್ನು ಮುಂದುವರೆಸಲಾಗುವುದು ಎಂದರು.

ADVERTISEMENT

ತಾಲ್ಲೂಕಿನಲ್ಲಿ 28 ಕಾಡುಗೊಲ್ಲರ ಹಟ್ಟಿಗಳಿದ್ದು, ಇಂದಿಗೂ ದೇಶೀಯ ಹಳ್ಳಿಕಾರ್‌ ತಳಿಯ ಹಸು ಕರುಗಳನ್ನು ಸಾಕುತ್ತಿದ್ದಾರೆ. ಮೊದಲಬಾರಿಗೆ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ ಮಕರ ಸಂಕ್ರಾಂತಿಗೆ ಮುನ್ನ ನಡೆದಿರುವುದು ಸಂತಸ ತಂದಿದೆ ಎಂದರು.

ಹಾಲು ಕರೆಯುವ ಸ್ಪರ್ಧೆಯಆಯೋಜಕ ಜುಟ್ಟನಹಳ್ಳಿ ಜಯರಾಮ್‌ ಮಾತನಾಡಿ ‘ನಿಮ್ಮೆಲ್ಲರ ಸಹಕಾರದೊಂದಿಗೆ ಪ್ರತಿವರ್ಷವೂ ಹಾಲು ಕರೆಯುವ ಸ್ಪರ್ಧೆ ನಡೆಸಿ, ಹಳ್ಳೀಕಾರ್‌ ತಳಿಯ ಸಂತತಿ ಉಳಿಸಲು ನಮ್ಮ ಕುಟುಂಬ ಶ್ರಮಿಸಲಿದೆ’ ಎಂದರು.

ರಾಜ್ಯ ಬಿಜೆಪಿ ಒಬಿಸಿ ಉಪಾಧ್ಯಕ್ಷ ಎ.ಎಚ್‌.ಬಸವರಾಜು, ಎಪಿಎಂಸಿ ನಿರ್ಧೇಶಕ ಮಂಜುನಾಥ್‌, ಪುರಸಭೆ ಅಧ್ಯಕ್ಷೆ ವಿಜಯರೂಪೇಶ್‌, ಉಪಾಧ್ಯಕ್ಷ ರಮಮತ್‌, ಸದಸ್ಯರಾದ ಭಾಗ್ಯಮ್ಮ, ಎಂ.ಎನ್‌.ಮಂಜುನಾಥ್‌, ಕೆ.ವಿ.ಬಾಲು, ರೇಖಾನವಿನ್‌, ಹೇಮಲತಾ, ಜೆಡಿಎಸ್‌ ಮುಖಂಡ ಧವಳಗಿರಿ ಚಂದ್ರಣ್ಣ, ಮರೂರು ವೆಂಕಟೇಶ್‌, ಭರತ್‌ ಜೈನ್‌, ತಾಲ್ಲೂಕು ಬಿಜೆಪಿ ಅಧ್ಯಕ್ಷ ಧನಂಜಯ, ಬಿಜೆಪಿ ಮುಖಂಡರಾದ ಮಾರಯ್ಯ ದೊಂಬಿದಾಸ, ರಾಘವೇಂದ್ರ, ಜುಟ್ಟನಹಳ್ಳಿ ಮಾರೇಗೌಡ, ದಿನೇಶ್‌, ಮಂಜುನಾಥ್‌ ರಾಜ್ಯ ಪ್ರಶಸ್ತಿ ಪುರಸ್ಕೃತ ಮಲ್ಲೇಶಯ್ಯ, ಗಂಗರಾಜು, ಮಾನಗಲ್‌ ಪರಮಶಿವಯ್ಯ, ಮಾರುತಿಗೌಡ, ರಘು, ಎಂ.ಸಿ.ಗೋವಿಂದರಾಜು ವೇದಿಕೆಯಲ್ಲಿದ್ದರು. ಪಶುಪಾಲನಾ ಇಲಾಖೆಯ ವೈದ್ಯರಾದ ಡಾ.ಲಕ್ಷ್ಮೀಕಾಂತ್‌, ಡಾ.ಲೋಕೇಶ್‌, ಡಾ.ಶಿವಕುಮಾರ್‌, ಡಾ.ಮುನಿರಾಜು ವೇದಿಕೆಯಲ್ಲಿದ್ದರು.

ಪ್ರಗತಿಪರ ರೈತ ಮಹಿಳೆ ಶಾರದಮ್ಮ ಜಯರಾಮ್‌ ಕ್ಯಾನಿಗೆ ಹಾಲು ಸುರಿಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಬಹುಮಾನ
ಆನೇಕಲ್‌ ತಾಲ್ಲೂಕಿನ ಹೊಂಚಲಘಟ್ಟದ ಪಿ.ಶ್ರೀನಿವಾಸ್‌ ಸಾಕಿರುವ ರಾಸು 48.920 ಕೆ.ಜಿ ಹಾಲು ನೀಡಿ ಪ್ರಥಮ ಬಹುಮಾನ ₹1 ಲಕ್ಷ, ಪ್ರಶಸ್ತಿ ಫಲಕ, ಶೀಲ್ಡ್‌ ಪಡೆದರು. ರಾಜಾಜಿನಗರದ ಜಗನ್ನಾಥ್‌ ದ್ವಿತೀಯ ಬಹುಮಾನ, ನೆಲಮಂಗಲದ ಭಕ್ತನಪಾಳ್ಯದ ಮಂಜುಳ ಮುನಿರಾಜು ಮೂರನೆ ಬಹುಮಾನ, ಬೆಂಗಳೂರು ಉತ್ತರ ತಾಲ್ಲೂಕಿನ ಕೆಂಗನಹಳ್ಳಿ ಗಣತಪಿ ಸೌತಡ್ಕ ಡೇರಿ ಪಾರಂ 4ನೇ ಬಹುಮಾನ, ದೊಡ್ಡನಾಗಮಂಗಲದ ಸಂಜಿತ್‌ 5ನೇ ಮತ್ತು ಬಿಡದಿಯ ಅಶ್ವಿನಿ ಅಂಬರೀಶ್‌ 6 ನೇ ಬಹುಮಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.