ADVERTISEMENT

ನಗರದಲ್ಲಿ ಹೆಚ್ಚಿದ ಕಸದ ಸಮಸ್ಯೆ

ನಗರಸಭೆಯ ಕಾಂಗ್ರೆಸ್ ಸದಸ್ಯರ ಆರೋಪ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 6:19 IST
Last Updated 8 ಫೆಬ್ರುವರಿ 2023, 6:19 IST

ಚನ್ನಪಟ್ಟಣ: ‘ನಗರದಲ್ಲಿ ಕಳೆದ ಹದಿನೈದು ದಿನಗಳಿಂದ ಸಮರ್ಪಕವಾಗಿ ಕಸದ ವಿಲೇವಾರಿ ಮಾಡದಿರುವ ಕಾರಣ, ನಗರ ವ್ಯಾಪ್ತಿಯಲ್ಲೆಡೆ ಕಸದ ರಾಶಿಗಳು ಬಿದ್ದಿದ್ದರೂ, ನಗರಸಭೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ’ ಎಂದು ಕಾಂಗ್ರೆಸ್ ಆರೋಪಿಸಿದೆ.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ನಗರಸಭೆಯ ಕಾಂಗ್ರೆಸ್ ಸದಸ್ಯರಾದ ವಾಸಿಲ್ ಆಲಿಖಾನ್, ಸೈಯದ್ ಸಾಬೀರ್ ಉಲ್ಲಾ ಮತ್ತು ಮಿತನ್ ಮಾತನಾಡಿ, ‘ನಗರದಲ್ಲಿ ವಿಲೇವಾರಿ ಮಾಡದಿರುವ ಕಸವು ರಸ್ತೆಯಲ್ಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಇದರಿಂದ ವಾಹನ ಸವಾರರು, ಶಾಲಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ನಡೆದಾಡಲು ಸಾಧ್ಯವಾಗದಂಥ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಪೌರಾಯುಕ್ತ, ನಗರಸಭೆ ಅಧ್ಯಕ್ಷರ ಗಮನಕ್ಕೆ ತಂದರೂ, ಯಾವುದೇ ಪ್ರಯೋಜನವಾಗಿಲ್ಲ’ ಎಂದು ಆರೋಪಿಸಿದರು.

ಕೆಲವೆಡೆ ಕಸದ ರಾಶಿಗೆ ಬೆಂಕಿ ಹಾಕುತ್ತಿರುವ ಕಾರಣ ನಗರದಲ್ಲೆಡೆ ಹೊಗೆ ಮುಚ್ಚುತ್ತಿದೆ. ಇದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ನಗರ ಸಭೆಯಲ್ಲಿ ಅಧ್ಯಕ್ಷ, ಸದಸ್ಯರು ಮತ್ತು ಪೌರಾಯುಕ್ತರಲ್ಲಿ ಸಮನ್ವಯತೆ ಇಲ್ಲದಿರುವುದರಿಂದ ನಗರದಲ್ಲಿನ ಕಸದ ಸಮಸ್ಯೆಗೆ ಸರಿಯಾದ ಪರಿಹಾರ ಸಿಗುತ್ತಿಲ್ಲ. ನಗರ ಸಭೆಯಲ್ಲಿ ಅಧಿಕಾರಿಗಳ ಕೊರತೆ ಇದೆ. ಆರೋಗ್ಯ ಶಾಖೆಯಿಂದ ಆರೋಗ್ಯ ನಿರೀಕ್ಷಕ ವರ್ಗಾವಣೆಯಾಗಿದೆ. ಈಗ ಒಬ್ಬರೇ ಆರೋಗ್ಯ
ನಿರೀಕ್ಷಕರಿದ್ದಾರೆ. ಇದು ಕೂಡ ನಗರದಲ್ಲಿ ಸೂಕ್ತ ಕಸ ವಿಲೇವಾರಿ ಮೇಲೆ ಪರಿಣಾಮ ಬೀರಿದೆ ಎಂದು ದೂರಿದರು.

ADVERTISEMENT

ಶಾಸಕ ಎಚ್.ಡಿ. ಕುಮಾರಸ್ವಾಮಿ ಅವರು ನಗರದ ಕಸ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ನಗರಸಭೆಯ ಮೊದಲ ಸಾಮಾನ್ಯ ಸಭೆಗೆ ಬಂದು ಸಭೆ ಮಾಡಿ ಹೋಗಿದ್ದು ಹೊರತುಪಡಿಸಿದರೆ, ಇಲ್ಲಿಯವರೆಗೆ ನಗರಸಭೆಯ ಯಾವುದೇ ಸಭೆಗೆ ಹಾಜರಾಗಿಲ್ಲ. ನಗರದ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದರು.

ಲೋಕೇಶ್, ಬಾವಸ, ಕೀಜರ್ ಅಹಮ್ಮದ್, ಖಲೀಲ್, ಸೌಪಿಸಾಜ್, ಸೈಯದ್ ವಾಸಿಂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.