ADVERTISEMENT

ಮಾಗಡಿ: ಋಣಮುಕ್ತ ಕಾಯ್ದೆ ಜಾರಿಗೆ ಒತ್ತಾಯ

ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ, ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 14:04 IST
Last Updated 8 ಜನವರಿ 2020, 14:04 IST
ಮಾಗಡಿ ಗ್ರಾಮಯಿತಿ ನೌಕರರು ಮತ್ತು ಎಐಕೆಎಸ್‌ಸಿಸಿ ಪದಾಧಿಕಾರಿಗಳು ತಾ.ಪಂ.ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು
ಮಾಗಡಿ ಗ್ರಾಮಯಿತಿ ನೌಕರರು ಮತ್ತು ಎಐಕೆಎಸ್‌ಸಿಸಿ ಪದಾಧಿಕಾರಿಗಳು ತಾ.ಪಂ.ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು   

ಮಾಗಡಿ: ರೈತರು, ಕೃಷಿ ಕೂಲಿಕಾರರನ್ನು ಸಾಲದಿಂದ ಸಂಪೂರ್ಣ ಮುಕ್ತಿಗೊಳಿಸುವ ಋಣಮುಕ್ತ ಕಾಯ್ದೆ ಜಾರಿಗೊಳಿಸಬೇಕೆಂದು ಎಐಕೆಎಸ್‌ಸಿಸಿ ರಾಜ್ಯ ಸಮಿತಿ ಸದಸ್ಯೆ ಎಸ್.ಜಿ.ವನಜಾ ಒತ್ತಾಯಿಸಿದರು.

ಗ್ರಾಮೀಣ ಕರ್ನಾಟಕ ಬಂದ್ ಅಂಗವಾಗಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಹಾಗೂ ಸಿಐಟಿಯು ಸಂಯೋಜಿತ ಗ್ರಾಮ ಪಂಚಾಯಿತಿ ನೌಕರರ ಸಂಘದ ಸಹಯೋಗದಲ್ಲಿ ಬುಧವಾರ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ರೈತ ವಿರೋಧಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಬೇಕು. ಪ್ರವಾಹ ಪೀಡಿತರಿಗೆ ಸೂಕ್ತ ಪರಿಹಾರ ನೀಡಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿ ಸಕ್ರಮಗೊಳಿಸಬೇಕು. ಗ್ರಾಮ ಪಂಚಾಯಿತಿ ನೌಕರರಿಗೆ ಸೇವಾ ಭದ್ರತೆ ಒದಗಿಸಿ, ಮಾಸಿಕ ₹15ಸಾವಿರ ವೇತನ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಸಿಐಟಿಯು ಸಂಯೋಜಿತ ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ನಾಗರಾಜಯ್ಯ ಮಾತನಾಡಿ, ಎಲ್ಲ ಸರ್ಕಾರಿ ನೌಕರರಂತೆ ಗ್ರಾಮ ಪಂಚಾಯಿತಿ ನೌಕರರಿಗೂ ವೈದ್ಯಕೀಯ ವೆಚ್ಚ ಮತ್ತು ಪ್ರತಿ ತಿಂಗಳು ಕನಿಷ್ಠ ವೇತನ ನೀಡುವ ತನಕ ಪಂಚಾಯಿತಿ ನೌಕರರಿಗೆ ಬಿಪಿಎಲ್ ಚೀಟಿ ನೀಡಬೇಕು. ಮಾಸಿಕ ವೇತನ ಕನಿಷ್ಠ ₹21ಸಾವಿರ ನಿಗದಿಪಡಿಸಿ ಸೇವಾಪುಸ್ತಕದಲ್ಲಿ ನಮೂದಿಸಬೇಕು. ಬಾಕಿ ಇರುವ ವೇತನ ಬಿಡುಗಡೆಗೊಳಿಸಬೇಕು. ಕ್ಲರ್ಕ ಕಂ.ಡಟಾ ಎಂಟ್ರಿ ಆಪರೇಟರ್‌ಗಳಿಗೆ ಪ್ರತ್ಯೇಕ ಜೇಷ್ಠತಾ ಪಟ್ಟಿ ತಯಾರಿಸಿ, ಜೇಷ್ಠತೆ ಆಧಾರದಲ್ಲಿ ಗ್ರೇಡ್ 2 ಕಾರ್ಯದರ್ಶಿ ಹುದ್ದೆ, ಉಳಿದ ನೇರ ನೇಮಕಾತಿ ಕೋಟಾದಲ್ಲಿ ಶೇ20ರಷ್ಟು ಹಾಗೂ ಲೆಕ್ಕ ಸಹಾಯಕರ ಹುದ್ದೆಗೆ ಶೇ30ರಷ್ಟು ಪ್ರತ್ಯೇಕ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಪ್ರಗತಿಪರ ಹೋರಾಟಗಾರ ದೊಡ್ಡಿಲಕ್ಷ್ಮಣ್ ಮಾತನಾಡಿ, ಸರ್ಕಾರ ಜನ ಸಾಮಾನ್ಯರು ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದು ಖಂಡನೀಯ. ದೇಶದಲ್ಲಿ ಇರುವ ಜ್ವಲಂತ ಸಮಸ್ಯೆಗಳತ್ತ ಗಮನ ನೀಡದ ಸರ್ಕಾರ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳನ್ನು ಖಾಸಗಿ ಉದ್ಯಮಿಗಳಿಗೆ ಮಾರಾಟ ಮಾಡಿ ಕಾರ್ಮಿಕರನ್ನು ಬೀದಿಪಾಲು ಮಾಡಲು ಹೊರಟಿದೆ ಎಂದು ಆರೋಪಿಸಿದರು.

ಜೀತ ವಿಮುಕ್ತಿ ಕರ್ನಾಟಕ ತಾಲ್ಲೂಕು ಘಟಕದ ಸಂಚಾಲಕ ಜುಟ್ಟನಹಳ್ಳಿ ಗಂಗಹನುಮಯ್ಯ ಮಾತನಾಡಿ, ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ. ದೇಶದಲ್ಲಿ ಆರ್ಥಿಕ ಕುಸಿತದಿಂದಾಗಿ ಉದ್ಯೋಗ ವಂಚಿತರು ಪರದಾಡುತ್ತಿದ್ದಾರೆ. ಕೂಲಿ ಕಾರ್ಮಿಕರು, ಜೀತಗಾರರು, ಆದಿವಾಸಿಗಳಿಗೆ ಸವಲತ್ತು ನೀಡದೆ ವಂಚಿಸಲಾಗುತ್ತಿದೆ. ತೋಟಿ, ತಳವಾರ, ನೀರಗಂಟಿಗಳ ಕುಟುಂಬಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ದೂರಿದರು.

ಗ್ರಾಮ ಪಂಚಾಯಿತಿ ನೌಕರರ ಸಂಘದ ಉಪಾಧ್ಯಕ್ಷ ದೇವರಾಜು, ಪದಾಧಿಕಾರಿಗಳಾದ ರವಿ, ಶಿವಣ್ಣ, ಕಮಲೇಶ್, ಬೋರೇಗೌಡ, ನಾಗರಾಜುಕಲ್ಯ, ಜಯರಾಮು ನೇತೇನಹಳ್ಳಿ ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಾಧ್ಯಕ್ಷ ಹುಲಿಕಟ್ಟೆ ಗಂಗಾಧರಯ್ಯ, ಗೌರವಾಧ್ಯಕ್ಷ ಬಿ.ನಂಜುಂಡಯ್ಯ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಇಒ ಟಿ.ಪ್ರದೀಪ್‌ಗೆ ಮನವಿ ಸಲ್ಲಿಸಲಾಯಿತು. ಸರ್ಕಲ್ ಇನ್‌ಸ್ಪೆಕ್ಟರ್‌ ರವಿಕುಮಾರ್, ಸಬ್ಇನ್‌ಸ್ಪೆಕ್ಟರ್‌ ಟಿ.ವೆಂಕಟೇಶ್ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನ ಸಂಚಾರ ವಿರಳವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.