ಮಾಗಡಿ (ರಾಮನಗರ): ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಜಿಲ್ಲೆಯ ಮಾಗಡಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಗಿರಿರಾಜ್ ಜಿ.ವೈ ಅವರು 2024–25ನೇ ಸಾಲಿನ ಡಿಜಿ ಮತ್ತು ಐಜಿಪಿ ಪ್ರಶಂಸಾ ಪದಕಕ್ಕೆ ಪಾತ್ರರಾಗಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಕಾರ್ಯಕ್ರಮದಲ್ಲಿ ಪೊಲೀಸ್ ಮಹಾನಿರ್ದೇಶಕ ಮತ್ತು ಆರಕ್ಷಕ ಮಹಾನಿರೀಕ್ಷಕ ಡಾ. ಅಲೋಕ್ ಮೋಹನ್ ಅವರು ಪದಕ ಪ್ರದಾನ ಮಾಡಿದರು.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸುರಹೊನ್ನೆ ಗ್ರಾಮದ ಗಿರಿರಾಜ್ ಅವರು, ಕೃಷಿಯಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿ ಮುಗಿಸಿದ್ದಾರೆ. 2003ರಲ್ಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಆಗಿ ಪೊಲೀಸ್ ಇಲಾಖೆ ಸೇರಿದ ಅವರು, 2005ರಿಂದ 2012ರವರೆಗೆ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಎಸ್‌ಐ ಆಗಿ ಸೇವೆ ಸಲ್ಲಿಸಿದ್ದಾರೆ.
2012ರಲ್ಲಿ ಇನ್‌ಸ್ಪೆಕ್ಟರ್ ಆಗಿ ಬಡ್ತಿ ಹೊಂದಿದ ಅವರು ಬೆಂಗಳೂರಿನ ಕೆಂಪೇಗೌಡನಗರ, ಕೆಂಗೇರಿ, ಜ್ಞಾನಭಾರತಿ, ಬ್ಯಾಟರಾಯನಪುರ, ವಿಜಯನಗರ, ರಾಮನಗರ ಜಿಲ್ಲೆಯ ರಾಮನಗರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದಾರೆ. 2023ರಿಂದ ಮಾಗಡಿಯಲ್ಲಿ ಇನ್‌ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅತ್ಯಂತ ಸವಾಲಿನ ಪ್ರಕರಣಗಳನ್ನು ಬೇಧಿಸಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಿರುವ ಗಿರಿರಾಜ್, ತಾವು ಕಾರ್ಯನಿರ್ವಹಿಸಿದ ಠಾಣೆಗಳ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಜೊತೆಗೆ ಕೋಮು ಸೌಹಾರ್ದ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಚಾಣಾಕ್ಷತನದಿಂದ ಪ್ರಕರಣಗಳನ್ನು ಬೇಧಿಸುವ ಅವರ ಕಾರ್ಯವೈಖರಿಗೆ 2019ರಲ್ಲಿ ಮುಖ್ಯಮಂತ್ರಿ ಪದಕದ ಗೌರವ ಸಿಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.