ADVERTISEMENT

‘ಜಲ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ’

ಜಲಾಮೃತ ಯೋಜನೆ ಅಡಿ ಕೆರೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 13:43 IST
Last Updated 11 ಜೂನ್ 2019, 13:43 IST
ಹರಿಹರ ಕೆರೆಯಲ್ಲಿ ಮಂಗಳವಾರ ಜಲಾಮೃತ ಯೋಜನೆಗೆ ಜಿ.ಪಂ. ಸಿಇಒ ಮುಲ್ಲೈ ಮುಹಿಲನ್‌ ಚಾಲನೆ ನೀಡಿದರು
ಹರಿಹರ ಕೆರೆಯಲ್ಲಿ ಮಂಗಳವಾರ ಜಲಾಮೃತ ಯೋಜನೆಗೆ ಜಿ.ಪಂ. ಸಿಇಒ ಮುಲ್ಲೈ ಮುಹಿಲನ್‌ ಚಾಲನೆ ನೀಡಿದರು   

ಕನಕಪುರ: ‘ಹಿರಿಯರು ನಮಗೆ ನೀರು ಉಳಿಸಿದಂತೆ ನಾವು ಮುಂದಿನ ತಲೆಮಾರಿಗೆ ನೀರನ್ನು ಉಳಿಸಬೇಕಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪಿ. ಮುಲ್ಲೈ ಮುಹಿಲನ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನಕಪುರ ತಾಲ್ಲೂಕು ಪಂಚಾಯತಿ, ಹೊನ್ನಿಗಾನಹಳ್ಳಿ ಗ್ರಾಮ ಪಂಚಾಯತಿ ಹಾಗೂ ಸದ್ಭವ್ ಎಂಜಿನಿಯರ್ ಲಿಮಿಟೆಡ್ ಸಹಯೋಗದಲ್ಲಿ ಹೊನ್ನಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಿಹರ ಕೆರೆಯಲ್ಲಿ ನಡೆದ ಜಲಾಮೃತ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸರ್ಕಾರ 2019ನ್ನು ಜಲ ವರ್ಷವೆಂದು ಘೋಷಣೆ ಮಾಡಿದೆ. ಈ ನಿಟ್ಟಿನಲ್ಲಿ ಇರುವ ನೀರನ್ನು ಸದುಪಯೋಗಪಡಿಸಿಕೊಳ್ಳಲು ಬರುವ ನೀರನ್ನು ಕ್ರೂಢೀಕರಿಸಿಕೊಳ್ಳುವುದು. ನೀರಿನ ಮಹತ್ವದ ಅರಿವನ್ನು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು. ಎಲ್ಲಾ ಕಡೆ ಹಸರೀಕರಣ ಮಾಡುವ ಉದ್ದೇಶದಿಂದ ಸರ್ಕಾರವು ಜಲಾಮೃತ ಕಾರ್ಯಕ್ರಮವನ್ನು ಮಾಡಲಾಗಿದೆ. ಜಿಲ್ಲೆಯ ಕೆರೆಗಳನ್ನು ಗುರುತಿಸಿ ಜಲಾಮೃತ ಯೋಜನೆಯಡಿಯಲ್ಲಿ ಕೆರೆಗಳ ಹೂಳು ತೆಗೆಯುವ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಎಂದರು.

ADVERTISEMENT

ನಿಮ್ಮ ಊರಿನ ಕೆರೆ, ಕಟ್ಟೆಗಳ ರಕ್ಷಣೆಯ ಜವಾಬ್ದಾರಿ ನಿಮ್ಮ ಮೇಲಿದೆ. ಹೆಚ್ಚಿನ ರೈತರು ಹೂಳು ತೆಗೆಯುವ ಕಾರ್ಯಕ್ರಮಕ್ಕೆ ಟ್ರಾಕ್ಟರ್ ಗಳನ್ನು ನೀಡುವ ಮೂಲಕ ಜವಾಬ್ದಾರಿ ವಹಿಸಬೇಕಿದೆ. ಇದರಿಂದ ರೈತನ ಬಾಳು ಹಸನಾಗಲಿದೆ. ಊರಿನ ಜನರು ಸೇರಿ ಕೆರೆಯ ಹೂಳು ತೆಗೆಯುವ ಕೆಲಸಗಳನ್ನು ಹಿಂದಿನ ತಲೆಮಾರುಗಳಿಂದಲೂ ಮಾಡಲಾಗುತ್ತಿತ್ತು. ಆದರೆ ಕೆರೆ ಆಧಾರಿತ ವ್ಯವಸ್ಥೆಗಳು ಬದಲಾಗಿ ಪ್ರಸ್ತುತ ಕೊಳವೆಬಾವಿ ವ್ಯವಸ್ಥೆಗಳು ಬಂದ ಮೇಲೆ ಕೆರೆಗಳ ವ್ಯವಸ್ಥೆಗಳನ್ನು ಮರೆಯಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಎನ್. ನಾಗರಾಜು ಮಾತನಾಡಿ ಸರ್ಕಾರ ಈ ಕಾರ್ಯಕ್ರಮಗಳನ್ನು ರೂಪಿಸುವ ಮೊದಲೇ ಸಂಸದರಾದ ಡಿ.ಕೆ ಸುರೇಶ್ ಜಿಲ್ಲೆಯಲ್ಲಿ ಹಲವು ಚೆಕ್ ಡ್ಯಾಂಗಳನ್ನು ನಿರ್ಮಿಸಿ ನೀರನ್ನು ಸಂಗ್ರಹಿಸುವ ಕೆಲಸಗಳನ್ನು ಮಾಡಿದ್ದಾರೆ. ಇದರಲ್ಲಿ ಯಾವುದೇ ದುರುದ್ದೇಶಗಳಿಲ್ಲ. ರೈತರ ಕೊಳವೆಬಾವಿಗಳಿಗೆ ನೀರು ತರುವ ಹಾಗೂ ಕೆರೆಗಳಿಂದ ನೀರು ಹೊರಹರಿಯದಂತೆ ಸಂರಕ್ಷಿಸುವ ಉದ್ದೇಶವಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸಮಿತಿ ಅಧ್ಯಕ್ಷ ಶಂಕರ್, ಕನಕಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಸ್. ಧನಂಜಯ್, ಹೊನ್ನಿಗಾನಹಳ್ಳಿ ಗ್ರಾಮಪಂಚಾಯತಿ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಶಿವರಾಜು, ಕನಕಪುರ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಸುಮಂಗಲಾ ಸುರೇಶ್, ಸದಸ್ಯ ಎಚ್. ಎಲ್.ಚಂದ್ರಶೇಖರ್, ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್‌ ದೇವರಾಜು, ತಾಲ್ಲೂಕು ಪಂಚಾಯಿತಿಯ ಶಿವರಾಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.