ADVERTISEMENT

ಸಂಭ್ರಮದ ಶಿವಯೋಗಿಗಳ ಜಾತ್ರಾ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 14:19 IST
Last Updated 9 ಫೆಬ್ರುವರಿ 2020, 14:19 IST
ದೇಗುಲಮಠದಲ್ಲಿ ನಡೆದ ಜಾತ್ರಾ ಮಹಾರಥೋತ್ಸವದಲ್ಲಿ ಪಾಲ್ಗೊಂಡಿದ್ದ ಜನಸಾಗರ
ದೇಗುಲಮಠದಲ್ಲಿ ನಡೆದ ಜಾತ್ರಾ ಮಹಾರಥೋತ್ಸವದಲ್ಲಿ ಪಾಲ್ಗೊಂಡಿದ್ದ ಜನಸಾಗರ   

ಕನಕಪುರ: ಇಲ್ಲಿನ ದೇಗುಲಮಠದಲ್ಲಿ ನೂತನವಾಗಿ ಪ್ರಾರಂಭಿಸಿರುವ ಆದಿ‌ನಿರ್ವಾಣ ಶಿವಯೋಗಿಗಳ ಜಾತ್ರಾ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು. ಸಚಿವ ವಿ.ಸೋಮಣ್ಣ ಮಹಾರಥೋತ್ಸವ ಹಾಗೂ ಕಲಾ ತಂಡಗಳಿಗೆ ಚಾಲನೆ ನೀಡಿದರು.

ಆವರಣದಿಂದ ಪ್ರಾರಂಭಗೊಂಡ ತೇರು ಕಲಾತಂಡಗಳೊಂದಿಗೆ ಚಿಕ್ಕಮಠದ ಆವರಣದವರೆಗೂ ಸಾಗಿತು. ನೆರೆದಿದ್ದ ಸಾವಿರಾರು ಭಕ್ತರು ಮಹಾತೇರು ಎಳೆದರು.

ಪಟದ ಕುಣಿತ, ಡೊಳ್ಳುಕುಣಿತ, ಗಾರುಡಿ ಗೊಂಬೆಗಳ ಪ್ರದರ್ಶನ ಜನರನ್ನು ಆಕರ್ಷಿಸಿತು. ಪೂಜಾ ಕುಣಿತ, ವೀರಭದ್ರ ವೇಷ ಮತ್ತಿತರ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

ADVERTISEMENT

ಮಠದ ವತಿಯಿಂದ ತಿಂಡಿ ಮತ್ತು ಊಟದ ವ್ಯವಸ್ಥೆ ವಿಶೇಷವಾಗಿ ಮಾಡಲಾಗಿತ್ತು. ಸಂಗೀತ ನಿರ್ದೇಶಕ ಕೆ.ಎಂ.ಇಂದ್ರ ಸಾರಥ್ಯದಲ್ಲಿ ಕಡಬಗೆರೆ ಮುನಿರಾಜು ಮತ್ತು ತಂಡದವರು ಭಕ್ತಿಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಸಂಸದ ಡಿ.ಕೆ.ಸುರೇಶ್‌, ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ಜೆಡಿಎಸ್‌ ಹಿರಿಯ ನಾಯಕ ಪಿ.ಜಿ.ಆರ್‌.ಸಿಂಧ್ಯ, ಬಿಜೆಪಿ ಮುಖಂಡ ನೆ.ಲ ನರೇಂದ್ರಬಾಬು, ಜಿಲ್ಲಾ ಘಟಕದ ಅಧ್ಯಕ್ಷ ಎಂ.ರುದ್ರೇಶ್‌, ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ನಾಗರಾಜು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗಾಮಠದ ಸಿದ್ದಲಿಂಗಸ್ವಾಮೀಜಿ, ಮುರುಘಾಮಠದ ಶಿವಮೂರ್ತಿ ಮುರುಘಾಶರಣರು, ದೇಗುಲಮಠದ ಮುಮ್ಮಡಿ ನಿರ್ವಾಣಸ್ವಾಮೀಜಿ, ಬೇಲಿಮಠದ ಶಿವರುದ್ರಸ್ವಾಮೀಜಿ, ದೇಗುಲಮಠದ ಚನ್ನಬಸವಸ್ವಾಮೀಜಿ, ಮರಳೇಗವಿಮಠದ ಮುಮ್ಮಡಿ ಶಿವರುದ್ರಸ್ವಾಮಿ, ಶಿವಗಿರಿ ಕ್ಷೇತ್ರದ ಅನ್ನದಾನೇಶ್ವರನಾಥಸ್ವಾಮಿ ಸಾನ್ನಿಧ್ಯ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.