ಬಿಡದಿ (ರಾಮನಗರ): ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆಗೆ ಒಂದಿಂಚೂ ಭೂಮಿ ಸ್ವಾಧೀನಕ್ಕೆ ಬಿಡುವುದಿಲ್ಲ. ಯೋಜನೆ ಕೈ ಬಿಡದಿದ್ದರೆ ವಿಧಾನಸೌಧ ಮತ್ತು ಮುಖ್ಯಮಂತ್ರಿ ನಿವಾಸದವರೆಗೆ ಪಾದಯಾತ್ರೆ ನಡೆಸಿ ಮುತ್ತಿಗೆ ಹಾಕಲಾಗುವುದು...
ಜಿಬಿಐಟಿ ವಿರೋಧಿಸಿ ಹೋಬಳಿಯ ಭೈರಮಂಗಲದಲ್ಲಿ ನಡೆಯುತ್ತಿರುವ ರೈತರ ಅನಿರ್ದಿಷ್ಟಾವಧಿ ಧರಣಿ ಬೆಂಬಲಿಸಿ ಜೆಡಿಎಸ್ ಭಾನುವಾರ ಹಮ್ಮಿಕೊಂಡಿದ್ದ ‘ಬಿಡದಿ ಉಳಿಸಿ, ಜಿಬಿಐಟಿ ನಿಲ್ಲಿಸಿ’ ಪ್ರತಿಭಟನಾ ಸಭೆಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಈ ಎಚ್ಚರಿಕೆ ನೀಡಿದರು.
ನಾಯಕರೊಂದಿಗೆ ಭೈರಮಂಗಲ ಕ್ರಾಸ್‌ನಿಂದ ನಿಖಿಲ್ ಎತ್ತಿನಗಾಡಿಯಲ್ಲಿ ಪ್ರತಿಭಟನಾ ಸ್ಥಳಕ್ಕೆ ಬಂದರು. ಕಾರ್ಯಕರ್ತರು ಬೈಕ್, ಇತರ ವಾಹನಗಳಲ್ಲಿ ಹಿಂಬಾಲಿಸಿದರು. ಮಾರ್ಗದುದ್ದಕ್ಕೂ ಜಿಬಿಐಟಿ ಯೋಜನೆ, ಸರ್ಕಾರ, ಡಿಸಿಎಂ, ಶಾಸಕ ಎಚ್.ಸಿ. ಬಾಲಕೃಷ್ಣ ವಿರುದ್ಧ ಘೋಷಣೆ ಮೊಳಗಿದವು. ಪ್ರತಿಭಟನಾ ಫಲಕ ಗಮನ ಸೆಳೆದವು.
ರೈತರನ್ನು ಉದ್ದೇಶಿಸಿ ದೆಹಲಿಯಿಂದ ನೇರಪ್ರಸಾರದಲ್ಲಿ ಮಾತನಾಡಿದ ಕುಮಾರಸ್ವಾಮಿ, ‘ರೈತರ ಮೇಲಿನ ದಬ್ಬಾಳಿಕೆ, ಸರ್ವೆ ನಿಲ್ಲಿಸಬೇಕು. ರೈತರಿಗೆ ತೊಂದರೆಯಾದರೆ ನನ್ನ ಆರೋಗ್ಯವನ್ನೂ ಲೆಕ್ಕಿಸದೆ ಖುದ್ದು ಸ್ಥಳಕ್ಕೆ ಬಂದು ಹೋರಾಟದಲ್ಲಿ ಭಾಗವಹಿಸುವೆ. ರೈತರು ಎದೆಗುಂದಬಾರದು. ನಿಮ್ಮೊಂದಿಗೆ ನಾನಿದ್ದೇನೆ’ ಎಂದು ಧೈರ್ಯ ತುಂಬಿದರು.
‘ಇದು ಅಭಿವೃದ್ಧಿ ಯೋಜನೆ ಆಗಿದ್ದರೆ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿ ನಾಲ್ಕು ತಿಂಗಳಾದರೂ ಸಾಧಕ,ಬಾಧಕ ಕುರಿತು ಸ್ಥಳೀಯ ಶಾಸಕ, ಡಿಸಿಎಂ ಹಾಗೂ ಅಧಿಕಾರಿಗಳು ರೈತರ ಜೊತೆ ಏಕೆ ಸಭೆ ನಡೆಸಿಲ್ಲ. ರೈತರ ಭೂಮಿ ಲಪಟಾಯಿಸುತ್ತಿರುವುದು ರಿಯಲ್ ಎಸ್ಟೇಟ್ ದಂಧೆಗೆ ಎಂಬುದು ಇದರಲ್ಲೇ ಗೊತ್ತಾಗುತ್ತದೆ’ ಎಂದು ನಿಖಿಲ್ ಕಿಡಿಕಾರಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಜವರಾಯಿ ಗೌಡ, ಮಾಜಿ ಶಾಸಕರಾದ ಎ. ಮಂಜುನಾಥ್, ಡಾ. ಕೆ. ಅನ್ನದಾನಿ, ರಮೇಶ್ ಗೌಡ ಹಾಗೂ ಇತರರು ಇದ್ದರು.
Quote - ಭೂಮಿ ಕೊಡುವುದಿಲ್ಲ ಎನ್ನುವ ರೈತರ ವಿರುದ್ಧ ಡಿಸಿಎಂ ದಬ್ಬಾಬಳಿಕೆ ಮಾಡಿ ಅವರ ವಿರುದ್ಧ ತೊಡೆ ತಟ್ಟಿದ್ದಾರೆ. ರೈತರಿಗೆ ಅಧಿಕಾರ ಕೊಡುವುದೂ ಗೊತ್ತು. ತೊಡೆ ಮುರಿಯುವುದೂ ಗೊತ್ತು ನಿಖಿಲ್ ಕುಮಾರಸ್ವಾಮಿ ಅಧ್ಯಕ್ಷ ಜೆಡಿಎಸ್ ಯುವ ಘಟಕ
‘ಯೋಜನೆ ಕುರಿತು ರೈತರ ಜೊತೆ ಮೂರ್ನಾಲ್ಕು ಸಭೆ ನಡೆಸಿದ್ದೆ. ರೈತರು ವಿರೋಧಿಸಿದ್ದರಿಂದ ಭೂ ಸ್ವಾಧೀನಕ್ಕೆ ಮುಂದಾಗಲಿಲ್ಲ. ಯೋಜನೆ ಹೆಸರಲ್ಲಿ ಡಿ.ಕೆ. ಶಿವಕುಮಾರ್ ಆಡುತ್ತಿರುವ ಆಟ ಗೊತ್ತಿದೆ.ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.