ADVERTISEMENT

ರಾಜಕೀಯ ಕಾರಣಕ್ಕೆ ರಾಮನಗರ ಜಿಲ್ಲೆ ಹೆಸರು ಬದಲಾವಣೆ: ನಿಖಿಲ್ ಕುಮಾರಸ್ವಾಮಿ

ರಾಮನಗರ ಹೆಸರು ಬದಲಾವಣೆ ವಿರುದ್ಧ ದೊಡ್ಡ ಹೋರಾಟ: ನಿಖಿಲ್

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 14:19 IST
Last Updated 27 ಜುಲೈ 2024, 14:19 IST
ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ   

ರಾಮನಗರ: ‘ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣಕ್ಕೆ ಮುಂದಾಗಿರುವ ಸರ್ಕಾರದ ನಿರ್ಧಾರದ ವಿರುದ್ಧ ದೊಡ್ಡಮಟ್ಟದ ಹೋರಾಟ ಮಾಡಲಾಗುವುದು. ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರ ಜೊತೆ ಈ ಕುರಿತು ಚರ್ಚಿಸಿ ಹೋರಾಟದ ರೂಪುರೇಷೆ ತಯಾರಿಸಲಾಗುವುದು’ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಜಿಲ್ಲೆ ಹೆಸರು ಬದಲಾವಣೆ ಕುರಿತು ನಗರದಲ್ಲಿ ಶನಿವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ರಾಮನ ಹೆಸರಿನಲ್ಲಿರುವ ರಾಮನಗರ ಜಿಲ್ಲೆಯ ಹೆಸರನ್ನು ರಾಜಕೀಯ ಕಾರಣಕ್ಕಾಗಿ ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ. ರಾಮನಗರ ಜಿಲ್ಲೆ ರಚನೆ ಮಾಡಿದಾಗ ಯಾರೂ ವಿರೋಧಿಸಿರಲಿಲ್ಲ. ಈಗ ರಾಜಕೀಯ ಕಾರಣಕ್ಕೆ ಹೆಸರು ಬದಲಾವಣೆ ಮಾಡಿದ್ದಾರೆ’  ಎಂದು ಕಿಡಿಕಾರಿದರು.

‘ಬ್ರಾಂಡ್ ಬೆಂಗಳೂರು ಹೆಸರಲ್ಲಿ ರಾಮನಗರದ ಇತಿಹಾಸ ಅಳಿಸುವ ಕೆಲಸ ಮಾಡಲಾಗುತ್ತಿದೆ. ರಾಮನಗರ ಅಂದಾಗ ರಾಮನ ಪಾದಸ್ಪರ್ಶದ ಪುಣ್ಯಕ್ಷೇತ್ರ ನೆನಪಾಗುತ್ತದೆ. ಸರ್ಕಾರದ ಈ ನಿರ್ಧಾರಕ್ಕೆ ಜಿಲ್ಲೆಯ ಜನರ ವಿರೋಧವಿದೆ. ಜಿಲ್ಲೆ ಹೆಸರು ಬದಲಾವಣೆಯಿಂದ ಸ್ಥಳೀಯರಿಗೆ ಸಾಕಷ್ಟು ಸಮಸ್ಯೆಯಾಗಲಿದೆ. ಆಧಾರ್ ಕಾರ್ಡ್, ರೇಷನ್ ಕಾರ್ಡ್, ಕಂದಾಯ ದಾಖಲಾತಿ ಸೇರಿದಂತೆ ಹಲವು ದಾಖಲೆಗಳಲ್ಲಿ ಜಿಲ್ಲೆ ಹೆಸರು ಬದಲಾವಣೆ ಮಾಡಬೇಕು. ಅದಕ್ಕಾಗಿ ಜನರು ನಿತ್ಯ ತಾಲ್ಲೂಕು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಲಿದೆ’ ಎಂದು ಹೇಳಿದರು.

ADVERTISEMENT

‘ಹೆಸರು ಬದಲಾವಣೆ ಕುರಿತು ರಾಮನಗರದ ಟೋಕನ್ ಶಾಸಕರು ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಅವರು ಗಾಳಿಯಲ್ಲಿ ಗುಂಡು ಹಾರಿಸೋದು ಬಿಟ್ಟು, ಮೊದಲು ಜನರ ಕೆಲಸ ಮಾಡಲಿ’ ಎಂದು ಪ್ರಶ್ನೆಯೊಂದಕ್ಕೆ ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.