ADVERTISEMENT

ಪತಿ ಕೊಲೆ: ಗ್ರಾ.ಪಂ. ಸದಸ್ಯೆ, ಪ್ರಿಯಕರ ಸೇರಿ 6 ಮಂದಿ ಬಂಧನ

ಜೆಡಿಎಸ್ ಮುಖಂಡನ ಸಾವಿಗೆ ತಿರುವು: ಕೊಲೆಗೈದು ಆತ್ಮಹತ್ಯೆಯಲ್ಲ ಎಂದು ಶಂಕಿಸಿ ನಾಟಕವಾಡಿದ್ದ ಪತ್ನಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 18:34 IST
Last Updated 25 ಜುಲೈ 2025, 18:34 IST
ಕೊಲೆಯಾದ ಲೋಕೇಶ್
ಕೊಲೆಯಾದ ಲೋಕೇಶ್   

ಚನ್ನಪಟ್ಟಣ (ರಾಮನಗರ): ತನ್ನ ಪ್ರಿಯಕರನ ಜೊತೆಗೂಡಿ ಪತಿಗೆ ವಿಷ ಕುಡಿಸಿ ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಿದ್ದ ಪತ್ನಿಯೊಬ್ಬಳು, ಪತಿ ಸಾವಿನ ಬಗ್ಗೆ ಅನುಮಾನವಿದ್ದು ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ದೂರಿ ಇದೀಗ ಅದೇ ಪೊಲೀಸರಿಗೆ ತನ್ನ ಸುಪಾರಿ ತಂಡದೊಂದಿಗೆ ಅತಿಥಿಯಾಗಿದ್ದಾಳೆ!

ತಾಲ್ಲೂಕಿನ ಮಾಕಳಿಯ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಲೋಕೇಶ್ ಕೊಲೆಯಾದವರು. ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ.ಕೆ. ದೊಡ್ಡಿ ಪೊಲೀಸರು ಲೋಕೇಶ್ ಪತ್ನಿ ಗ್ರಾ.ಪಂ. ಹಾಲಿ ಸದಸ್ಯೆ ಚಂದ್ರಕಲಾ, ಆಕೆಯ ಪ್ರಿಯಕರ ಮಂಡ್ಯ ಜಿಲ್ಲೆಯ ನವಿಲೆ ಗ್ರಾಮದ ಯೋಗೇಶ್, ಸುಪಾರಿ ಹಂತಕರಾದ ನವಿಲೆಯ ಶಾಂತರಾಜು, ಮದ್ದೂರಿನ ಅರಕನಹಳ್ಳಿಯ ಶಿವಲಿಂಗ ಅಲಿಯಾಸ್ ಶಿವ, ಮಂಡ್ಯ ತಾಲ್ಲೂಕಿನ ಕಾಗಹಳ್ಳಿಯ ಚಂದನ್ ಅಲಿಯಾಸ್ ಚಂದನ್ ಕುಮಾರ್ ಹಾಗೂ ಬೆಂಗಳೂರಿನ ಆನೇಕಲ್‌ನ ಸೂರ್ಯಕುಮಾರ್‌ನನ್ನು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ಮತ್ತೊಬ್ಬನಿಗಾಗಿ ಬಲೆ ಬೀಸಿದ್ದಾರೆ.

ನಿರ್ಜನ ಪ್ರದೇಶದಲ್ಲಿ ಶವ: ಜೆಡಿಎಸ್ ಮುಖಂಡರೂ ಆಗಿದ್ದ ಲೋಕೇಶ್ ಅವರ ಶವ ಜೂನ್ 24ರಂದು ಕಣ್ವ ಜಲಾಶಯ ಬಳಿಯ ಕ್ಯಾಸಾಪುರ ರಸ್ತೆ ಪಕ್ಕದ ನಿರ್ಜನ ಪ್ರದೇಶದಲ್ಲಿ ಅವರ ಕಾರಿನೊಂದಿಗೆ ಪತ್ತೆಯಾಗಿತ್ತು. ಶವದ ಪಕ್ಕ ವಿಷಯ ಬಾಟಲಿ ಇತ್ತಲ್ಲದೆ, ಕಾರು ಜಖಂಗೊಂಡಿತ್ತು.

ADVERTISEMENT

ಹೊರಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋಗಿದ್ದ ಪತಿ ಸಾವಿನ ಬಗ್ಗೆ ಅನುಮಾನವಿದೆ ಎಂದು ಚಂದ್ರಕಲಾ ನೀಡಿದ್ದ ದೂರಿನ ಮೇರೆಗೆ, ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಮೇಲ್ನೋಟಕ್ಕೆ ಎಲ್ಲರೂ ಆತ್ಮಹತ್ಯೆ ಎಂದೇ ನಂಬಿದ್ದರು.

ಇದಾದ ಒಂದೇ ವಾರದಲ್ಲಿ ಚಂದ್ರಕಲಾ ತನ್ನ ತಂದೆ ರಾಮಣ್ಣ ಹಾಗೂ ಸಹೋದರ ಮನು ಜೊತೆ ಚನ್ನಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ, ‘ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಅವರದ್ದು ಕೊಲೆ. ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ದೊರಕಿಸಬೇಕು’ ಎಂದು ಒತ್ತಾಯಿಸಿದ್ದಳು ಎಂದು ಪೊಲೀಸರು ತಿಳಿಸಿದರು.

ತನಿಖಾ ತಂಡಕ್ಕೆ ಬಹುಮಾನ: ಮೇಲ್ನೋಟಕ್ಕೆ ಆತ್ಮಹತ್ಯೆ ಎಂದೇ ಬಿಂಬಿತವಾಗಿದ್ದ ಪ್ರಕರಣದಲ್ಲಿ ಸಿಕ್ಕ ಸಣ್ಣ ಸುಳಿವಿನ ಜಾಡು ಹಿಡಿದು ಹಂತಕರನ್ನು ಬಂಧಿಸಿದ ಪ್ರಕರಣ ತನಿಖಾಧಿಕಾರಿ ಚನ್ನಪಟ್ಟಣ ಗ್ರಾಮಾಂತರ ವೃತ್ತದ ಇನ್‌ಸ್ಪೆಕ್ಟರ್ ಬಿ.ಕೆ. ಪ್ರಕಾಶ್, ಎಂ.ಕೆ. ದೊಡ್ಡಿ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಸಹನಾ ಪಾಟೀಲ ಹಾಗೂ ತಂಡದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಅವರು, ತಂಡಕ್ಕೆ ₹10 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.

ಚಂದ್ರಕಲಾ
ಯೋಗೇಶ್
ಶಾಂತರಾಜು
ಶಿವಲಿಂಗ
ಚಂದನ್
ಸೂರ್ಯ‌ಕುಮಾರ್

ಸೊಸೆ ಮೇಲೆ ದೂರು ಕೊಟ್ಟಿದ್ದ ಮಾವ

ಲೋಕೇಶ್ ಮೃತಪಟ್ಟಾಗಿನಿಂದ ಸೊಸೆ ಚಂದ್ರಕಲಾ ನಡವಳಿಕೆಯಲ್ಲಿ ಬದಲಾವಣೆಯಾಗಿದ್ದನ್ನು ಮಾವ ಮೋಟೇಗೌಡ ಗಮನಿಸಿದ್ದರು. ಪುತ್ರನ ಸಾವಿನಲ್ಲಿ ಸೊಸೆ ಪಾತ್ರದ ಬಗ್ಗೆ ಶಂಕೆ ವ್ಯಕ್ತಪಡಿಸಿದರು. ಆಕೆಯೇ ಸಂಚು ರೂಪಿಸಿ ಕೊಲೆ ಮಾಡಿಸಿದ್ದಾಳೆ ಎಂದು ಜುಲೈ 24ರಂದು ಠಾಣೆಗೆ ದೂರು ಕೊಟ್ಟಿದ್ದರು. ಬೆಂಗಳೂರಿನ ಕನ್ನಹೊಸಹಳ್ಳಿಯಲ್ಲಿ ಪುತ್ರನ ಹೆಸರಿನಲ್ಲಿದ್ದ ನಿವೇಶನ ಮಾರಾಟಕ್ಕೆ ಸಂಬಂಧಿಸಿದಂತೆ ಪುತ್ರ ಮತ್ತು ಸೊಸೆ ನಡುವೆ ಗಲಾಟೆಯಾಗಿತ್ತು. ಅಲ್ಲದೆ ಯೋಗೇಶ್ ಎಂಬಾತನ ಜೊತೆ ಸೊಸೆ ಅಕ್ರಮ ಸಂಬಂಧ ಹೊಂದಿದ್ದಳು. ಪುತ್ರನಿಗೆ ವಿಷಯ ಗೊತ್ತಾಗಿ ಇಬ್ಬರ ನಡುವೆ ಜಗಳವಾಗಿತ್ತು. ಇದೇ ಕಾರಣಕ್ಕೆ ಸೊಸೆ ಯೋಗೇಶ್ ಮತ್ತು ಇತರರೊಂದಿಗೆ ಸೇರಿ ಪುತ್ರನನ್ನು ಕೊಲೆ ಮಾಡಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಆ ಮೇರೆಗೆ ಮತ್ತೆ ಚಂದ್ರಕಲಾ ಮತ್ತು ಯೋಗೇಶ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ಸಂಚು ಮಾಡಿ ತಾವೇ ವಿಷ ಕುಡಿಸಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡರು. ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ಚಪ್ಪಲಿ, ಮುಚ್ಚಳ, ಕರೆ ವಿವರದ ಸುಳಿವು

ಲೋಕೇಶ್ ಶವ ಸಿಕ್ಕ ಸ್ಥಳದಲ್ಲಿ ಒಂದೇ ಚಪ್ಪಲಿ ಮತ್ತು ಮುಚ್ಚಳವಿಲ್ಲದ ವಿಷದ ಬಾಟಲಿ ಸಿಕ್ಕಿತ್ತು. ಆಗಲೇ ನಮಗೆ ಇದೊಂದು ಪೂರ್ವಯೋಜಿತ ಕೊಲೆ ಎಂಬ ಅನುಮಾನ ಬಂದಿತ್ತು. ಘಟನೆ ನಡೆದ ವಾರದಲ್ಲೇ ಚಂದ್ರಕಲಾ ಸುದ್ದಿಗೋಷ್ಠಿ ನಡೆಸಿ ಪೊಲೀಸ್ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮೊಸಳೆ ಕಣ್ಣೀರು ಹಾಕಿದ್ದಳು. ತನ್ನ ಕುಟುಂಬದವರನ್ನೇ ಪ್ರಕರಣದಲ್ಲಿ ಸಿಲುಕಿಸಲು ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಳು. ಪತಿ ಸಾವಿನ ಬಳಿಕ ಆಕೆಯ ವರ್ತನೆಯಲ್ಲಾದ ಬದಲಾವಣೆ ಗಮನಿಸಿದ್ದ ಅವರ ಮಾವ ಸಹ, ಆಕೆ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಆಗ ಆಕೆ ಯೋಗೇಶ್ ಜೊತೆ ಸಂಬಂಧ ಹೊಂದಿರುವುದು ಗೊತ್ತಾಯಿತು. ಆಕೆಯ ಕರೆ ವಿವರಗಳನ್ನು ಪರಿಶೀಲಿಸಿದಾಗ ಆತನೊಂದಿಗೆ ಘಟನೆ ನಡೆದಾಗಿನಿಂದ ನಿತ್ಯವೂ ಮಾತನಾಡಿರುವುದು ಗೊತ್ತಾಯಿತು. ನಂತರ ಇಬ್ಬರನ್ನೂ ವಿಚಾರಣೆ ನಡೆಸಲಾಯಿತು. ಮತ್ತೊಮ್ಮೆ ವಿಚಾರಣೆಗೆ ಕರೆದಾಗ ಯೋಗೇಶ್ ಬಾರದೆ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಮಂಗಳೂರು ಕಡೆ ತಲೆಮರೆಸಿಕೊಂಡಿದ್ದ ಆತನನ್ನು ಪತ್ತೆಹಚ್ಚಿ ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಬಾಯ್ಬಿಟ್ಟ ಎಂದು ಪೊಲೀಸರು ತಿಳಿಸಿದರು.

₹3.50 ಲಕ್ಷಕ್ಕೆ ಸುಪಾರಿ

ತನ್ನ ಅಕ್ರಮ ಸಂಬಂಧದ ಬಗ್ಗೆ ಪತಿಗೆ ಗೊತ್ತಾಗಿ ಮನೆಯಲ್ಲಿ ಜಗಳ ನಡೆದಿದ್ದನ್ನು ಯೋಗೇಶ್‌ನೊಂದಿಗೆ ಚಂದ್ರಕಲಾ ಹಂಚಿಕೊಂಡಿದ್ದಳು. ಬಳಿಕ ಇಬ್ಬರೂ ಸೇರಿ ಲೋಕೇಶ್ ಕೊಲೆಗೆ ಸಂಚು ರೂಪಿಸಿದ್ದರು. ಅದಕ್ಕಾಗಿ, ಯೋಗೇಶ್ ತನ್ನ ಊರಿನ ನವಿಲೆಯ ಶಾಂತರಾಜುಗೆ ₹3.50 ಲಕ್ಷಕ್ಕೆ ಸುಪಾರಿ ನೀಡಿದ್ದ. ಅದಕ್ಕಾಗಿ, ಚಂದ್ರಕಲಾ ಸ್ತ್ರೀ ಶಕ್ತಿ ಸಂಘದಲ್ಲಿ ಸಾಲ ಪಡೆದು ಯೋಗೇಶ್‌ಗೆ ನೀಡಿದ್ದಳು. ಜೂನ್ 23ರಂದು ಕೊಲೆಗೆ ಸಂಚು ರೂಪಿಸಲಾಗಿತ್ತು. ಅಂದು ಸಂಜೆ ಲೋಕೇಶ್ ಬೆಂಗಳೂರಿನಿಂದ ಮಾಕಳಿಗೆ ಕಾರಿನಲ್ಲಿ ಬರುತ್ತಿದ್ದರು. ಈ ಕುರಿತು ಚಂದ್ರಕಲಾ ಹಂತಕರಿಗೆ ಮಾಹಿತಿ ನೀಡಿದ್ದಳು. ಲೋಕೇಶ್ ಹಿಂಬಾಲಿಕೊಂಡು ಕಾರಿನಲ್ಲಿ ಬಂದ ಹಂತಕರು ಸಂಜೆ 7ರ ಸುಮಾರಿಗೆ ಕ್ಯಾಸಾಪುರ ರಸ್ತೆಯಲ್ಲಿ ಲೋಕೇಶ್ ಕಾರಿಗೆ ಡಿಕ್ಕಿ ಹೊಡೆದರು. ಕಾರು ನಿಲ್ಲಿಸಿದ ಲೋಕೇಶ್ ಮೇಲೆ ಹಲ್ಲೆ ನಡೆಸಿ ರಸ್ತೆಯಿಂದ ಒಳಕ್ಕೆ ಎಳೆದೊಯ್ದಿರು. ನಂತರ ಕುತ್ತಿಗೆ ಹಿಚುಕಿ ಬಲವಂತವಾಗಿ ವಿಷ ಕುಡಿಸಿದ್ದರು. ಮೃತಪಟ್ಟಿರುವುದು ಖಚಿತವಾದ ಬಳಿಕ ಶವ ಮತ್ತು ವಿಷದ ಬಾಟಲಿಯನ್ನು ಕಾರಿನ ಬಳಿ ಎಸೆದು ಹೋಗಿದ್ದರು. ಹಂತಕರ ಪೈಕಿ ಶಾಂತರಾಜು, ಸೂರ್ಯಕುಮಾರ ಹಾಗೂ ಚಂದನ್ ನವಿಲೆಯಲ್ಲಿ ನಡೆದಿದ್ದ ವಕೀಲರೊಬ್ಬರ ಕೊಲೆ ಪ್ರಕರಣದಲ್ಲೂ ಭಾಗಿಯಾಗಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

ಶಾಲೆಯಲ್ಲಿ ಪರಿಚಿತನಾಗಿದ್ದ ಯೋಗೇಶ್

ಬೆಂಗಳೂರಿನ ಕನ್ನಹೊಸಹಳ್ಳಿಯ ಚಂದ್ರಕಲಾಗಳನ್ನು 2008ರಲ್ಲಿ ಲೋಕೇಶ್ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮದುವೆ ಬಳಿಕ ದಂಪತಿ ಬೆಂಗಳೂರಿನ ಕೆ.ಜಿ. ನಗರದಲ್ಲಿ ನೆಲೆಸಿದ್ದರು. ಲೋಕೇಶ್ ಸ್ಥಳೀಯವಾಗಿ ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದರಿಂದ ಊರಿಗೆ ಬಂದು ಹೋಗುತ್ತಿದ್ದರು. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ನವಿಲೆ ಗ್ರಾಮದ ಯೋಗೇಶ್ ಬೆಂಗಳೂರಿನಲ್ಲಿ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ. ದಂಪತಿ ಮಕ್ಕಳು ಓದುತ್ತಿದ್ದ ಶಾಲೆಯಲ್ಲೇ, ಆತನ ಮಕ್ಕಳು ಸಹ ಓದುತ್ತಿದ್ದರು. ಚಂದ್ರಕಲಾ ಮಕ್ಕಳನ್ನು ಬಿಡಲು ಹೋದಾಗ ಯೋಗೇಶ್ ಪರಿಚಯವಾಗಿತ್ತು. ನಂತರ ಅದು ಪ್ರೇಮಕ್ಕೆ ತಿರುಗಿತ್ತು ಎಂದು ಪೊಲೀಸರು ತಿಳಿಸಿದರು.

ಪ್ರಕರಣದ ದೂರುದಾರಳೂ ಆಗಿದ್ದ ಚಂದ್ರಕಲಾ ವರ್ತನೆಯಲ್ಲಾದ ಬದಲಾವಣೆ, ಪತಿ ಸಾವಿನ ಕುರಿತ ಮಾತುಗಳು ಆಕೆಯ ಪಾತ್ರವಿರುವುದರ ಕುರಿತು ಅನುಮಾನ ಮೂಡಿಸಿದ್ದವು. ಅದರ ಜಾಡು ಹಿಡಿದು ತನಿಖೆ ನಡೆಸಿದಾಗ ಆಕೆ ಮತ್ತು ಇಡೀ ತಂಡ ಸಿಕ್ಕಿಬಿದ್ದಿತು ಆರ್. ಶ್ರೀನಿವಾಸ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬೆಂಗಳೂರು ದಕ್ಷಿಣ ಜಿಲ್ಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.