ರಾಮನಗರದಲ್ಲಿ ಬುಧವಾರ ಜೆಡಿಎಸ್ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ, ನಗರದ ಹಳೇ ಬಸ್ ನಿಲ್ದಾಣದಲ್ಲಿ ಕಾರ್ಯಕರ್ತರು ಬೃಹತ್ ಸೇಬಿನಹಾರ ಹಾಕಿ ಅಭಿಮಾನ ಮೆರೆದರು.
ರಾಮನಗರ: ‘ರಾಮನಗರದಲ್ಲಿಯೇ ನನ್ನ ಮುಂದಿನ ಚುನಾವಣೆ. ಇದು ನಮ್ಮ ಸ್ವ ಕ್ಷೇತ್ರ. ನೀವು ಬೆಳೆಸಿದ ಮನೆ ಮಕ್ಕಳು ನಾವು. ನಮ್ಮನ್ನು ಪ್ರೀತಿಯಿಂದ ಅರಸಿ ಬೆಳೆಸಿದ್ದೀರಿ. ಯಾವುದೇ ಕಾರಣಕ್ಕೂ ನಾವು ಜಿಲ್ಲೆಯಿಂದ ಪಲಾಯನ ಮಾಡುವುದಿಲ್ಲ’ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಗರದ ಖಾಸಗಿ ಕಲ್ಯಾಣಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜೆಡಿಎಸ್ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ರಾಜಕೀಯದಲ್ಲಿ ಸೋಲು– ಗೆಲುವು ಸಾಮಾನ್ಯ. ಮೂರು ಚುನಾವಣೆಗಳಲ್ಲಿನ ಸೋಲು ನನಗೆ ರಾಜಕೀಯವಾಗಿ ಪರಿಪಕ್ವತೆ ಕಲಿಸಿದೆ. ಸೋಲುಗಳಿಂದ ಕುಗ್ಗುವುದಿಲ್ಲ. ಮತ್ತೆ ಅವಕಾಶ ಸಿಕ್ಕರೆ ರಾಮನಗರದಿಂದಲೇ ಸ್ವರ್ಧಿಸುವೆ’ ಎಂದರು.
‘ಪಕ್ಷವು ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಲಿದ್ದು, ಯಾವ ಸಂದರ್ಭದಲ್ಲೂ ಅವರನ್ನು ಕೈ ಬಿಡುವುದಿಲ್ಲ. ಜನರೊಂದಿಗೆ ಜನತಾದಳ ಎಂಬ ಅಭಿಯಾನದ ಭಾಗವಾಗಿ, ನಾನು ರಾಜ್ಯದಾದ್ಯಂತ ಪ್ರವಾಸ ಹಮ್ಮಿಕೊಂಡಿದ್ದೇನೆ. ಪ್ರತಿ ಕಾರ್ಯಕರ್ತರನ್ನು ಭೇಟಿಯಾಗಿ ಪಕ್ಷ ಬಲಪಡಿಸುವ ಗುರಿಗೆ ಕೈ ಜೋಡಿಸುವಂತೆ ಹುರಿದುಂಬಿಸುತ್ತಿದ್ದೇನೆ’ ಎಂದು ಹೇಳಿದರು.
‘ರಾಮನಗರ ಜಿಲ್ಲೆ ಹೆಸರು ಬದಲಾವಣೆ ಮಾಡಿದ ಮಾತ್ರಕ್ಕೆ ಅಭಿವೃದ್ಧಿ ಆಗುವುದಿಲ್ಲ. ಕೆಂಗಲ್ ಹನುಮಂತಯ್ಯ ಅವರ ಕಟ್ಟಿದ ರಾಮನಗರದ ಹೆಸರನ್ನು ಕಾಂಗ್ರೆಸ್ ಅಳಿಸಿದೆ. ಆದರೆ, ಜನರ ಹೃದಯದಲ್ಲಿ ರಾಮನಗರ ಶಾಶ್ವತವಾಗಿ ಉಳಿದಿದೆ ಮಿಸ್ಟರ್ ಡಿ.ಕೆ. ಶಿವಕುಮಾರ್’ ಎಂದು ವಾಗ್ದಾಳಿ ನಡೆಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಎ. ಮಂಜುನಾಥ್ ಮಾತನಾಡಿ, ‘ಕಾಂಗ್ರೆಸ್ ನಾಯಕರು ಜಿಲ್ಲೆಯಲ್ಲಿ ಅಧಿಕಾರಿಗಳನ್ನು ಬಳಸಿಕೊಂಡು ದುರಾಡಳಿತ ನಡೆಸುತ್ತಿದ್ದಾರೆ. ಕಾರ್ಯಕರ್ತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ಅಭಿವೃದ್ಧಿ ಕೆಲಸ ಮಾಡಿಲ್ಲ. ಕುಮಾರಸ್ವಾಮಿ ಅವರು ಮಾಡಿದ ಕೆಲಸವನ್ನು ನಾವು ಎದೆ ತಟ್ಟಿ ಹೇಳುತ್ತೇವೆ. ನೀವು ಮಾಡಿದ್ದು ಏನು?’ ಎಂದು ಪ್ರಶ್ನಿಸಿದರು.
ಕಾರ್ಯಕ್ರಮಕ್ಕೆ ಮುಂಚೆ ನಿಖಿಲ್ ನೇತೃತ್ವದಲ್ಲಿ ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿದರು. ರಾಯರದೊಡ್ಡಿ ವೃತ್ತದಿಂದ ಶುರುವಾದ ರ‍್ಯಾಲಿ ಕೆಂಪೇಗೌಡ ವೃತ್ತ, ಐಜೂರು ವೃತ್ತ, ಎಂ.ಜಿ. ರಸ್ತೆ, ಮುಖ್ಯರಸ್ತೆ ಮಾರ್ಗವಾಗಿ ಕೃಷ್ಣ ಸ್ಮೃತಿ ಕಲ್ಯಾಣ ಮಂಟಪ ತಲುಪಿತು. ಕಾರ್ಯಕರ್ತೆಯರು ಪೂರ್ಣಕುಂಭ ಹೊತ್ತು ಹೆಜ್ಜೆ ಹಾಕಿದರು. ಹಳೆ ಬಸ್ ನಿಲ್ದಾಣ ವೃತ್ತದಲ್ಲಿ ಕಾರ್ಯಕರ್ತರು ನಿಖಿಲ್ ಅವರಿಗೆ ಬೃಹತ್ ಸೇಬಿನಹಾರ ಹಾಕಿ ಅಭಿಮಾನ ಮೆರೆದರು. ಪಟ್ಟಣದ ಚಾಮುಂಡೇಶ್ವರಿ ದೇವಾಲಯಕ್ಕೆ ನಿಖಿಲ್ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಪಕ್ಷದ ರಾಜ್ಯ ವಕ್ತಾರ ಬಿ. ಉಮೇಶ್, ತಾಲ್ಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ, ನಗರಸಭೆ ಸದಸ್ಯರಾದ ಮಂಜುನಾಥ್, ಮಹಾಲಕ್ಷ್ಮಿ ಗೂಳಿಗೌಡ, ಮಂಜುಳಾ, ಶಿವಸ್ವಾಮಿ, ಗ್ಯಾಬ್ರಿಯಲ್, ದಿಶಾ ಸಮಿತಿ ಸದಸ್ಯ ವಿ. ನರಸಿಂಹಮೂರ್ತಿ, ಮುಖಂಡರಾದ ಹೋಟೆಲ್ ಉಮೇಶ್, ರವಿ, ಪ್ರಕಾಶ್, ಎಸ್.ಸಿ. ರಾಜಣ್ಣ, ಹಾರೋಹಳ್ಳಿ ರಾಮಣ್ಣ, ಕೆಂಪಣ್ಣ, ವಾಸು, ದೊರೆ, ಶಿವಕುಮಾರ್, ಕೃಷ್ಣಮೂರ್ತಿ, ಶೇಷಪ್ಪ ಹಾಗೂ ಇತರರು ಇದ್ದರು.
ರಾಮನಗರದಲ್ಲಿ ಕಾಂಗ್ರೆಸ್‌ನವರ ಮೋಸದಿಂದಾಗಿ ನಿಖಿಲ್ ಕುಮಾರಸ್ವಾಮಿ ಅವರು ಸೋತಿದ್ದಾರೆ. ಕ್ಷೇತ್ರದಾದ್ಯಂತ ಆಡಳಿತ ವಿರೋಧಿ ಅಲೆ ಎದ್ದಿದೆ. ಈಗ ಚುನಾವಣೆ ನಡೆದರೆ ಜನ ನಿಖಿಲ್ ಅವರನ್ನು ಗೆಲ್ಲಿಸುತ್ತಾರೆಎ. ಮಂಜುನಾಥ್ ಜೆಡಿಎಸ್ ಜಿಲ್ಲಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.