ADVERTISEMENT

ದೇವೇಗೌಡರ ಸೋಲು ಕನ್ನಡಿಗರ ಸೋಲು: ಅನಿತಾ

​ಪ್ರಜಾವಾಣಿ ವಾರ್ತೆ
Published 24 ಮೇ 2019, 15:31 IST
Last Updated 24 ಮೇ 2019, 15:31 IST
ಅನಿತಾ ಕುಮಾರಸ್ವಾಮಿ
ಅನಿತಾ ಕುಮಾರಸ್ವಾಮಿ   

ರಾಮನಗರ: ಚುನಾವಣೆಯ ಸೋಲಿನ ಬಳಿಕ ಕೆಲವರು ಜೆಡಿಎಸ್ ಮತ್ತು ದೇವೇಗೌಡರ ಕುಟಂಬದ ಬಗ್ಗೆ ವಿಕೃತ ಭಾವನೆ ವ್ಯಕ್ತಪಡಿಸುತ್ತಿರುವುದಕ್ಕೆ ಶಾಸಕಿ ಅನಿತಾ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ‘ತುಮಕೂರಿನಲ್ಲಿ ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡರ ಸೋಲು ಕರ್ನಾಟಕದ ಸೋಲು, ಸ್ವಾಭಿಮಾನದ ಸೋಲಾಗಿದೆ. ಹೋರಾಟದ ಬದುಕಿನ ಮೂಲಕ ರಾಜಕಾರಣದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ ದೇವೇಗೌಡರು ಕಾವೇರಿ ಹೋರಾಟ ಸೇರಿದಂತೆ ಹಲವು ಹೋರಾಟಗಳಿಗೆ ಜೀವ ತುಂಬಿ ಅಜೇಯರಾಗಿ ಉಳಿದಿದ್ದಾರೆ. ಸ್ತ್ರೀ ಸಬಲೀಕರಣಕ್ಕೆ ಮಹಿಳಾ ಮೀಸಲಾತಿಗೆ ಮುನ್ನುಡಿ ಬರೆದ ಸಮಾಜಮುಖಿ ಅವರು. ಎಲ್ಲ ಕನ್ನಡಿಗರ ಹೆಮ್ಮೆಯ ಪ್ರತೀಕವಾಗಿರವ ಅವರ ಹೋರಾಟ ಮರೆತು, ಇಳಿ ವಯಸ್ಸಿನಲ್ಲಿ ಅವರಿಗೆ ಸೋಲಿನ ಆಘಾತ ನೀಡಿರುವುದು ದುರದೃಷ್ಟಕರ’ ಎಂದಿದ್ದಾರೆ.

‘ರೈತರ ಬದುಕು ಹಸನಾಗುವಂತೆ ಮಾಡಲು ಎಚ್‌.ಡಿ. ಕುಮಾರಸ್ವಾಮಿ ಶ್ರಮಿಸುತ್ತಿದ್ದಾರೆ. ಜಾತ್ಯತೀತವಾಗಿ ಪಕ್ಷಾತೀತವಾಗಿ ರೈತರ ಸಾಲವನ್ನ ಮನ್ನಾ ಮಾಡಿ, ಅಭಿವೃದ್ಧಿ ಪರ ಕೆಲಸ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ನಿಖಿಲ್‌ರನ್ನು ಸೋಲಿಸುವ ಮೂಲಕ ಜನರು ಅಭಿವೃದ್ಧಿಯನ್ನೂ ತಿರಸ್ಕರಿಸಿದ್ದಾರೆ. ಇದರಿಂದ ಜೆಡಿಎಸ್‌ ಮತ್ತು ದೇವೇಗೌಡರ ಕುಟುಂಬ ಅಧೀರರಾಗಿಲ್ಲ. ಇಂದಿಗೂ ಅಪಾರ ಕಾರ್ಯಕರ್ತರ ಬೆಂಬಲ, ಆಶೀರ್ವಾದ ಇದ್ದೇ ಇದೆ. ರಾಜ್ಯದಲ್ಲಿ ಮತ್ತೆ ಜೆಡಿಎಸ್ ಪ್ರಜ್ವಲಿಸಲಿದೆ’ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.