ರಾಮನಗರ: ಚಿನ್ನಾಭರಣ ಮಳಿಗೆಗೆ ಗ್ರಾಹಕರ ಸೋಗಿನಲ್ಲಿ ಬಂದ ವ್ಯಕ್ತಿಗಳಿಬ್ಬರು, ಅಂಗಡಿ ಮಾಲೀಕನ ಗಮನವನ್ನು ಬೇರೆಡೆಗೆ ಸೆಳೆದು ಎರಡು ಚಿನ್ನದ ನೆಕ್ಲೇಸ್‌ಗಳನ್ನು ಕದ್ದಿರುವ ಘಟನೆ, ತಾತಗುಣಿಯಲ್ಲಿ ನಡೆದಿದೆ.
ಭಗವಾನ್ ರಾಮ್ ಎಂಬುವರಿಗೆ ಸೇರಿದ ಶಿವಶಕ್ತಿ ಜ್ಯುವೆಲ್ಲರ್ಸ್ ಮಳಿಗೆಯಲ್ಲಿ ಕೃತ್ಯ ನಡೆದಿದ್ದು, ಈ ಕುರಿತು ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಗವಾನ್ ಅವರು ಮಳಿಗೆಯಲ್ಲಿದ್ದಾಗ ಬೆಳಿಗ್ಗೆ 11ರ ಸುಮಾರಿಗೆ ಬಂದ ವ್ಯಕ್ತಿಯೊಬ್ಬ ಎರಡು ಬೆಳ್ಳಿ ಕಾಯಿನ್‌ಗಳನ್ನು ಕೇಳಿದ. ಆಗ ಭಗವಾನ್ ಅವರು ತೋರಿಸಿದ 5 ಗ್ರಾಂ ಬೆಳ್ಳಿ ಕಾಯಿನ್ ಅನ್ನು ₹700 ಪಾವತಿಸಿ ಖರೀದಿಸಿಕೊಂಡು ಹೋದ. ಅದಾದ ಕೆಲ ಹೊತ್ತಿನಲ್ಲಿ, ಮಳಿಗೆಗೆ ಬಂದ ಟೋಪಿ ಧರಿಸಿದ್ದ ವ್ಯಕ್ತಿಯೊಬ್ಬ, ದೇವರಿಗೆ ಕೊಡಲು 2 ಚಿನ್ನದ ನಾಣ್ಯಗಳು ಬೇಕು. ಒಳಗಿದ್ದರೆ ತೆಗೆದುಕೊಂಡು ಬಂದು ತೋರಿಸಿ ಎಂದು ಕೇಳಿದ.
ಆಗ ಭಗವಾನ್ ಅವರು ತೋರಿಸಿದ ನಾಣ್ಯಗಳನ್ನು ನೋಡಿ ವಾಪಸ್ಸು ಕೊಟ್ಟ. ನಂತರ, ಗಾಜಿನ ಒಳಭಾಗದಲ್ಲಿ ಇರಿಸಿದ್ದ ಎರಡು ನೆಕ್ಲೇಸ್‌ಗಳನ್ನು ತೋರಿಸುವಂತೆ ಕೇಳಿದ. ನೆಕ್ಲೇಸ್ ನೋಡಲು ಆತ ಒಳಭಾಗಕ್ಕೆ ಬರಲು ಯತ್ನಿಸಿದಾಗ ಭಗವಾನ್ ತಡೆದರು. ಆಗ ಆತ, ಮುಂಗಡವಾಗಿ ₹ 2 ಸಾವಿರ ಕೊಟ್ಟಾಗ, ಭಗವಾನ್ ನೆಕ್ಲೇಸ್‌ಗಳಿದ್ದ ಬಾಕ್ಸ್‌ಗಳನ್ನು ಹೊರತೆಗೆದು ತೋರಿಸಿದರು.
ಭಗವಾನ್ ಅವರ ವಿಶ್ವಾಸ ಗಳಿಸಿದ ವ್ಯಕ್ತಿ, ನೆಕ್ಲೇಸ್ ಖರೀದಿಸಲು ಸ್ವಾಮೀಜಿಯನ್ನು ಕರೆದುಕೊಂಡು ಬರುವೆ ಎಂದು ಹೇಳಿ ಭಗವಾನ್ ಗಮನವನ್ನು ಬೇರೆಡೆಗೆ ಸೆಳೆದು ಸುಮಾರು 45 ಗ್ರಾಂನ ಎರಡು ನೆಕ್ಲೇಸ್ ಬಾಕ್ಸ್‌ಗಳನ್ನು ತೆಗೆದುಕೊಂಡು ಹೋಗಿದ್ದಾನೆ. ಆತ ಹೋದ ಬಳಿಕ ನೆಕ್ಲೇಸ್‌ಗಳು ಇಲ್ಲದಿರುವುದು ಭಗವಾನ್ ಅವರಿಗೆ ಗೊತ್ತಾಗಿದೆ.
ಬಳಿಕ ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸಿದಾಗ, ಬೆಳ್ಳಿ ನಾಣ್ಯ ಖರೀದಿಸಿದ ಹಾಗೂ ಚಿನ್ನದ ನಾಣ್ಯ ಕೇಳಿದ ವ್ಯಕ್ತಿಗಳಿಬ್ಬರೂ ಒಂದೇ ಗುಂಪಿನವರಾಗಿರುವುದು ಗೊತ್ತಾಗಿದೆ. ನೆಕ್ಲೇಸ್ ಕದ್ದ ಬಳಿಕ, ಇಬ್ಬರೂ ಸ್ಕೂಟರ್‌ನಲ್ಲಿ ಹೋಗುವುದು ಗೊತ್ತಾಗಿದೆ. ಭಗವಾನ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಕಗ್ಗಲಿಪುರ ಠಾಣೆ ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.