ADVERTISEMENT

ಶ್ರದ್ಧೆ, ಪರಿಶ್ರಮವೇ ಸಾಧನೆಯ ಮೆಟ್ಟಿಲು: ಜಾನಪದ ವಿದ್ವಾಂಸ ಡಾ.ಚಕ್ಕೆರೆ ಶಿವಶಂಕರ್

ಜ್ಞಾನವಿಕಾಸ ಕಾಲೇಜು ವಾರ್ಷಿಕೋತ್ಸವ ಸಮಾರಂಭ

​ಪ್ರಜಾವಾಣಿ ವಾರ್ತೆ
Published 3 ಮೇ 2019, 12:27 IST
Last Updated 3 ಮೇ 2019, 12:27 IST
ಜ್ಞಾನ ವಿಕಾಸ್ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ ಅಂಡ್‌ ಕಾಮರ್ಸ್ ಕಾಲೇಜಿನಲ್ಲಿ ಶುಕ್ರವಾರ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಜಾನಪದ ವಿದ್ವಾಂಸ ಡಾ. ಚಕ್ಕೆರೆ ಶಿವಶಂಕರ್ ಅವರನ್ನು ಸನ್ಮಾನಿಸಲಾಯಿತು
ಜ್ಞಾನ ವಿಕಾಸ್ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ ಅಂಡ್‌ ಕಾಮರ್ಸ್ ಕಾಲೇಜಿನಲ್ಲಿ ಶುಕ್ರವಾರ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಜಾನಪದ ವಿದ್ವಾಂಸ ಡಾ. ಚಕ್ಕೆರೆ ಶಿವಶಂಕರ್ ಅವರನ್ನು ಸನ್ಮಾನಿಸಲಾಯಿತು   

ರಾಮನಗರ: ‘ಸಾಧನೆ ಮಾಡಲು ಹೊರಟವನಿಗೆ ಯಾವುದೂ ಅಸಾಧ್ಯವಲ್ಲ’ ಎಂದು ಜಾನಪದ ವಿದ್ವಾಂಸ ಡಾ. ಚಕ್ಕೆರೆ ಶಿವಶಂಕರ್ ಹೇಳಿದರು.

ಬಿಡದಿಯ ಜ್ಞಾನ ವಿಕಾಸ್ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ ಅಂಡ್‌ ಕಾಮರ್ಸ್ ಕಾಲೇಜಿನಲ್ಲಿ ಶುಕ್ರವಾರ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಬಲ ಮನೋಬಲ, ಪರಿಶ್ರಮ, ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಸಾಕು, ಸಾಧನೆ ಎಂಬುದು ಕಟ್ಟಿಟ್ಟ ಬುತ್ತಿ. ಯಾವುದೇ ಚಟುವಟಿಕೆ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಪೂರಕವಾಗಬೇಕೇ ಹೊರತು ಮಾರಕವಾಗಬಾರದು ಎಂದು ತಿಳಿಸಿದರು.

ADVERTISEMENT

ಶಿಕ್ಷಣ ಉದ್ಯಮವಲ್ಲ, ಅದು ಮಾರಾಟದ ಸರಕೂ ಅಲ್ಲ. ಅದೊಂದು ಜೀವನ ಕ್ರಮ. ಬದುಕು ರೂಪಿಸಬೇಕೇ ಹೊರತು, ದುಬಾರಿಯಾಗಬಾರದು. ಪಡೆಯುವ ಶಿಕ್ಷಣದಲ್ಲಿ ಉದಾತ್ತ ಮೌಲ್ಯಗಳು, ಅರಿವು ಹೆಚ್ಚಿಸುವ ಅಂಶಗಳು ಇದ್ದು, ಕೌಶಲಕ್ಕೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.

ಅನೇಕ ಯುವಕರು ತಮ್ಮ ಮನಸ್ಸಿಗೆ ವಿರುದ್ಧವಾದ ಉದ್ಯೋಗದಲ್ಲಿ ತೊಡಗಿದ್ದಾರೆ. ಇದರಿಂದ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದಾರೆ. ಯುವಕರು ಸಾಧ್ಯವಾದಷ್ಟು ತಮಗಿಷ್ಟಬಂದ, ಆಸಕ್ತಿಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಬೇಕು. ಒಂದು ಪಕ್ಷ ಸಾಧ್ಯವಾಗದೆ ಇದ್ದರೆ ವೃತ್ತಿ ಗೌರವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ನಿಮ್ಮ ಭವಿಷ್ಯದ ಶಿಲ್ಪಿಗಳು ನೀವೇ. ಸುಂದರ ಜೀವನದ ಕಲ್ಪನೆ, ಅದರ ಮುನ್ನೋಟ, ಪ್ರತಿಯೊಂದು ನಡೆ ನಿಮ್ಮದೇ ಜವಾಬ್ದಾರಿಯಾಗಿದೆ. ಇತರರ ಅವಲಂಬನೆ ಏನೂ ಉಪಯೋಗವಿಲ್ಲ. ಹಿರಿಯರ ಸಲಹೆ ವಿಮರ್ಶಿಸಿ, ಸ್ವಂತ ಆಲೋಚನೆಯ ನಿರ್ಧಾರ ತೆಗೆದುಕೊಳ್ಳಿ. ವೈಯಕ್ತಿಕ ಆದರ್ಶ, ಮೌಲ್ಯಗಳ ಮೇಲೆ ನಂಬಿಕೆ ಇರಿಸಿಕೊಳ್ಳಿ ಎಂದು ತಿಳಿಸಿದರು.

ವಿದ್ಯಾರ್ಥಿ ದಿಸೆಯಲ್ಲಿ ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕು. ಭವಿಷ್ಯಕ್ಕೆ ಈ ಹವ್ಯಾಸಗಳೇ ದಾರಿ ದೀಪವಾಗಬಹುದು. ಮಹಾನ್ ಸಾಧಕರ ಜೀವನ ಚರಿತ್ರೆ ಅವಲೋಕಿಸಿದರೆ, ಹವ್ಯಾಸಗಳೇ ಅವರನ್ನು ಉನ್ನತ ಸ್ಥಾನಕ್ಕೆ ತಲುಪಲು ದಾರಿ ತೋರಿವೆ. ವಿದ್ಯಾರ್ಥಿಗಳು ನಿಶ್ಚಿತ ಗುರಿ ಇಟ್ಟುಕೊಂಡು ಶೈಕ್ಷಣಿಕ ಬದುಕು ಸುಂದರವಾಗಿ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ ಮಾತನಾಡಿ ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಉತ್ತಮ ಅಂಕಗಳನ್ನು ತೆಗೆಯುವ ಜತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಸರ್ವತೋಮುಖ ಬೆಳವಣಿಗೆಯನ್ನು ಹೊಂದಬೇಕು ಎಂದು ತಿಳಿಸಿದರು.

ಜ್ಞಾನ ವಿಕಾಸ ವಿದ್ಯಾಸಂಘದ ಖಜಾಂಚಿ ಬಿ.ಜೆ. ಹೊನ್ನಶೆಟ್ಟಿ, ಕಾರ್ಯದರ್ಶಿ ಬಿ.ಆರ್. ನಾಗರಾಜು, ನಿರ್ದೇಶಕರಾದ ಬಿ.ಎನ್. ಗಂಗಾಧರಯ್ಯ, ಎಲ್. ಸತೀಶ್ ಚಂದ್ರ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ನಿಕಟ ಪೂರ್ವ ಅಧ್ಯಕ್ಷ ಬಿ.ಟಿ. ನಾಗೇಶ್, ಕಾಲೇಜಿನ ಪ್ರಾಚಾರ್ಯೆ ಟಿ. ರೂಪಾ, ಬಸವೇಶ್ವರಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯ ಶಿಕ್ಷಕ ಆರ್.ಎಸ್. ಗೀರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.