ADVERTISEMENT

ಕಬ್ಬಾಳಿನಲ್ಲಿ ಕಬ್ಬಾಳಮ್ಮನ ಎಡಗೊಂಡ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2018, 13:52 IST
Last Updated 4 ಡಿಸೆಂಬರ್ 2018, 13:52 IST
ಕಬ್ಬಾಳಮ್ಮನ ಎಡಗೊಂಡದಲ್ಲಿ ಅರ್ಚಕ ಸುನಿಲ್‌ ಅವರು ಕೊಂಡದಲ್ಲಿನ ಅಗ್ನಿಯ ಮೇಲೆ ನಡೆದುಕೊಂಡು ಬರುತ್ತಿರುವುದನ್ನು ಭಕ್ತರು ನೋಡುತ್ತಿರುವುದು
ಕಬ್ಬಾಳಮ್ಮನ ಎಡಗೊಂಡದಲ್ಲಿ ಅರ್ಚಕ ಸುನಿಲ್‌ ಅವರು ಕೊಂಡದಲ್ಲಿನ ಅಗ್ನಿಯ ಮೇಲೆ ನಡೆದುಕೊಂಡು ಬರುತ್ತಿರುವುದನ್ನು ಭಕ್ತರು ನೋಡುತ್ತಿರುವುದು   

ಸಾತನೂರು (ಕನಕಪುರ): ತಾಲ್ಲೂಕಿನ ಧಾರ್ಮಿಕ ಪ್ರಸಿದ್ಧ ಹಾಗೂ ಶಕ್ತಿ ದೇವತೆಯಾದ ಕಬ್ಬಾಳಿನ ಕಬ್ಬಾಳಮ್ಮನ ದೇವಾಲಯದಲ್ಲಿ ಎಡಗೊಂಡ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ನೆರವೇರಿತು.

ವರ್ಷದಲ್ಲಿ ಎರಡು ಬಾರಿ ಕೊಂಡ ಆಗುತ್ತದೆ. ಒಂದು ಶಿವರಾತ್ರಿ ಕೊಂಡ, ಮತ್ತೊಂದು ಎಡಗೊಂಡ. ಕಾರ್ತಿಕ ಕಡೆ ಸೋಮವಾರ ಈ ಎಡಗೊಂಡ ನಡೆಯುತ್ತದೆ. ಸುತ್ತಲಿನ ಗ್ರಾಮದ ಭಕ್ತರು ಎಳವಾರವನ್ನು ಕಟ್ಟಿ ದೇವಿಗೆ ಹರಕೆಯಾಗಿ ಸೌಧೆಯನ್ನು ಕೊಂಡಕ್ಕೆ ಹಾಕುತ್ತಾರೆ.

ಸೋಮವಾರ ಬೆಳಿಗ್ಗೆ ಪುರೋಹಿತರು ಕೊಂಡಕ್ಕೆ ಹೋಮ ಹವನ ಮಾಡಿ ಶುದ್ಧೀಕರೀಸುತ್ತಾರೆ. ಕೊಂಡವನ್ನು ಆಯುವ ಅರ್ಚಕ ಅವರು ಸಹ ಸೋಮವಾರ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ನೇಮ ನಿಷ್ಠೆಯಿಂದ ಇರುತ್ತಾರೆ.

ADVERTISEMENT

ಭಕ್ತರು ತಂದು ಹಾಕಿರುವಂತ ಸೌದೆಗೆ ಸೋಮವಾರ ರಾತ್ರಿ ಪೂಜೆಯನ್ನು ನೆರವೇರಿಸಿ ಅಗ್ನಿ ಸ್ಪರ್ಶ ಮಾಡಲಾಗುತ್ತದೆ. ಕೊಂಡದಲ್ಲಿದ್ದ ಸೌದೆಯು ಹೊತ್ತಿ ಬೆಳಿಗ್ಗೆ ವೇಳೆಗೆ ಕೆಂಡವಾಗಿರುತ್ತದೆ. ಕಬ್ಬಾಳಮ್ಮನ ಗಿಂಡಿಯನ್ನು ಹೊತ್ತ ಅರ್ಚಕ ಸುನಿಲ್‌ ಅವರನ್ನು ಕಲ್ಯಾಣಿಯ ಬಳಿ ಗಂಗಾ ಪೂಜೆ ನೆರವೇರಿಸಿಕೊಂಡು ಕೊಂಡದ ಬಳಿಗೆ ಕರೆತರಲಾಯಿತು.

ಕಬ್ಬಾಳಮ್ಮನನ್ನು ಮೈದುಂಬಿಸಿಕೊಂಡ ಅರ್ಚಕ ಸುನಿಲ್‌ ಕೊಂಡದಲ್ಲಿನ ಅಗ್ನಿಯ ಮೇಲೆ ನಡೆದುಕೊಂಡು ದೇವಾಸ್ಥಾನವನ್ನು ಪ್ರವೇಶಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ನೆರದಿದ್ದ ಭಕ್ತರು ಕೊಂಡ ಆಯುವುದನ್ನು ನೋಡಿ ಕಣ್ತುಂಬಿಕೊಂಡರು.

ಪ್ರತಿವರ್ಷ ಅನ್ನದಾಸೋಹ ನಡೆಸಿಕೊಡುವ ಭಕ್ತರು ತಮ್ಮ ಹರಕೆಯಂತೆ ಅನ್ನದಾಸೋಹವನ್ನು ಏರ್ಪಡಿಸಿ ಬಂದಿದ್ದ ಎಲ್ಲ ಜನತೆಗೂ ದಾಸೋಹ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.