ADVERTISEMENT

‘ಕೆಂಪಸಾಗರ ಈಶ್ವರ ಗುಡಿ ಜೀರ್ಣೋದ್ಧಾರಕ್ಕೆ ಸಹಕರಿಸಿ’

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 5:06 IST
Last Updated 21 ಸೆಪ್ಟೆಂಬರ್ 2021, 5:06 IST
ಮಾಗಡಿ ತಾಲ್ಲೂಕಿನ ಕೆಂಪಸಾಗರದ ಶಿಥಿಲವಾಗಿರುವ ಈಶ್ವರ ಗುಡಿ ವೀಕ್ಷಿಸಿದ ಎಪಿಎಂಸಿ ಸದಸ್ಯ ಮಂಜುನಾಥ್‌ ಮಾತನಾಡಿದರು. ಲಕ್ಷ್ಮೀಕಾಂತ್‌, ಎಚ್‌.ಎಸ್‌. ಕೆಂಪಣ್ಣ ಇದ್ದರು
ಮಾಗಡಿ ತಾಲ್ಲೂಕಿನ ಕೆಂಪಸಾಗರದ ಶಿಥಿಲವಾಗಿರುವ ಈಶ್ವರ ಗುಡಿ ವೀಕ್ಷಿಸಿದ ಎಪಿಎಂಸಿ ಸದಸ್ಯ ಮಂಜುನಾಥ್‌ ಮಾತನಾಡಿದರು. ಲಕ್ಷ್ಮೀಕಾಂತ್‌, ಎಚ್‌.ಎಸ್‌. ಕೆಂಪಣ್ಣ ಇದ್ದರು   

ಮಾಗಡಿ: ತಾಲ್ಲೂಕಿನ ಕೆಂಪಸಾಗರದಲ್ಲಿ ಶಿಥಿಲವಾಗಿರುವ ಐತಿಹಾಸಿಕ ಈಶ್ವರ ದೇವಾಲಯದ ಗರ್ಭಗೃಹವನ್ನು ಭಕ್ತರ ಸಹಕಾರದೊಂದಿಗೆ ಜೀರ್ಣೋದ್ಧಾರ ಮಾಡಿಸಲಾಗುವುದು ಎಂದು ಎಪಿಎಂಸಿ ಸದಸ್ಯ ಮಂಜುನಾಥ್ ತಿಳಿಸಿದರು.

ಶಿಥಿಲವಾಗಿರುವ ದೇವಾಲಯವನ್ನು ಸೋಮವಾರ ವೀಕ್ಷಿಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮೊದಲು ಗರ್ಭಗೃಹವನ್ನು ಜೀರ್ಣೋದ್ಧಾರ ಮಾಡಿಸಿ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಲಾಗುವುದು. ನಂತರ ಪೂರ್ತಿ ಗುಡಿಯನ್ನು ಜೀರ್ಣೋದ್ಧಾರ ಮಾಡಿಸಲಿದ್ದೇವೆ. ಚೋಳ ದೊರೆಗಳ ಆಳ್ವಿಕೆ ಕಾಲದಲ್ಲಿ ನಿರ್ಮಾಣವಾಗಿರುವ ಈ ಗುಡಿಯನ್ನು ಮುಮ್ಮಡಿ ಕೆಂಪವೀರಪ್ಪ ಗೌಡರ ಆಳ್ವಿಕೆ ಕಾಲದಲ್ಲಿ ನವರಂಗ, ಪ್ರಾಂಗಣ, ಪ್ರವೇಶ ದ್ವಾರ, ಕಲ್ಲಿನ ಕಾಂಪೌಂಡ್ ಪುನರ್‌ ನಿರ್ಮಿಸಿದ್ದಾರೆ. ಚರಿತ್ರೆ ಸಾರುವ ಶಾಸನಗಳು, ವೀರಗಲ್ಲುಗಳು ಇವೆ ಎಂದರು.

ADVERTISEMENT

ಈಶ್ವರ ಗುಡಿಯ ಪ್ರಾಂಗಣದಲ್ಲಿನ ಕಲ್ಲಿನ ಕಂಬಗಳಲ್ಲಿ ನಯನ ಮನೋಹರವಾಗಿರುವ ಪ್ರಾಣಿ, ಪಕ್ಷಿ, ಶೈವ ಪರಂಪರೆ ಸಾರುವ ದೇವಾನುದೇವತೆಗಳ ನೃತ್ಯ, ಕಲಾವಿದರ ಶಿಲ್ಪಗಳಿವೆ. ದೇವಾಲಯದ ಎರಡನೇ ಬಾಗಿಲು ಕಂಬದಲ್ಲಿ ಹಿರಿಯ ಕೆಂಪೇಗೌಡ ಮತ್ತು ಕೆಂಪವೀರಪ್ಪ ಗೌಡರ ಉಬ್ಬು ಶಿಲ್ಪಗಳಿವೆ. ಕೆಂಪಮ್ಮದೇವಿ, ಲಕ್ಷ್ಮಿದೇವಿಯರ ಉಬ್ಬು ಶಿಲ್ಪಗಳಿವೆ. ಚರಿತ್ರೆಯ ಕುರುಹು ಉಳಿಸಿಕೊಂಡು ಗುಡಿಯ ಜೀರ್ಣೋದ್ಧಾರಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.

ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಮಾಜಿ ಶಾಸಕರು ಸೇರಿದಂತೆ ದಾನಿಗಳು, ಭಕ್ತರ ಸಹಕಾರ ಬಳಸಿಕೊಂಡು ಗುಡಿಯನ್ನು ಪುನರ್ ನಿರ್ಮಿಸಲಾಗುವುದು ಎಂದರು.

ತಾಲ್ಲೂಕು ಬಗರ್ ಹುಕುಂ ಸಮಿತಿ ಸದಸ್ಯ ಲಕ್ಷ್ಮೀಕಾಂತ್, ಹೊಸಪೇಟೆ ರಾಮಮಂದಿರ ಟ್ರಸ್ಟ್‌ ಅಧ್ಯಕ್ಷ ಎಚ್.ಎಸ್. ಕೆಂಪಣ್ಣ, ಕೆಂಪಸಾಗರದ ರೂಪೇಶ್‌ಕುಮಾರ್‌ ಹಾಗೂ ಗ್ರಾಮಸ್ಥರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.