ಜೆಡಿಎಸ್
ಕನಕಪುರ: ಕನಕಪುರ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ನಾಗರಾಜು ಅವರ ಕಾರ್ಯವೈಖರಿ ವಿರುದ್ಧ ಪಕ್ಷದ ಪದಾಧಿಕಾರಿಗಳೇ ಅಪಸ್ವರ ಎತ್ತಿದ್ದಾರೆ.
ತಾಲ್ಲೂಕಿನಲ್ಲಿ ಪಕ್ಷ ಸಂಘಟನೆಗೆ ನಾಗರಾಜು ಸಹಕರಿಸುತ್ತಿಲ್ಲ ಎಂದು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಸಂದ್ರ ಬಿ.ಟಿ.ನಾಗರಾಜ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಪಕ್ಷದ ವರಿಷ್ಠರು ಕನಕಪುರ ತಾಲ್ಲೂಕು ಜೆಡಿಎಸ್ ಘಟಕಕ್ಕೆ ಹೊಸ ಅಧ್ಯಕ್ಷರನ್ನು ನೇಮಿಸುವ ಮೂಲಕ ಪಕ್ಷ ಸಂಘಟನೆಗೆ ಅವಕಾಶ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.
ಕನಕಪುರ ತಾಲೂಕಿನಲ್ಲಿ ಜೆಡಿಎಸ್ ಪಕ್ಷಕ್ಕೆ ತನ್ನದೇ ಆದ ಸಾಂಪ್ರದಾಯಿಕ ಮತದಾರರಿದ್ದಾರೆ. ಇಲ್ಲಿ ಪಕ್ಷದ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಪಕ್ಷ ಸಂಘಟನೆಗೆ ಉತ್ಸಾಹದಿಂದ ಕೆಲಸ ಮಾಡಲು ಸಿದ್ಧರಿದ್ದಾರೆ. ಆದರೆ ಅವರನ್ನು ಒಗ್ಗೂಡಿಸಿಕೊಂಡು ಪಕ್ಷ ಸಂಘಟನೆ ಮಾಡುವ ನಾಯಕರಿಲ್ಲ ಎಂದು ಅವರು ದೂರಿದರು.
ಎಂಟು ವರ್ಷದಿಂದ ಅಧ್ಯಕ್ಷರಾಗಿರುವ ನಾಗರಾಜ್ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸಿ, ಪಕ್ಷ ಸಂಘಟನೆ ಮಾಡಿಲ್ಲ. ಇನ್ಯಾವ ರೀತಿಯಲ್ಲಿ ಪಕ್ಷ ಸಂಘಟನೆ ಆಗುತ್ತದೆ ಎಂದು ಪ್ರಶ್ನಿಸಿದರು.
ಅಚ್ಚಲು ಗ್ರಾಮ ಪಂಚಾಯಿತಿ ಸದಸ್ಯ ಸೈಯದ್ ಸಾಮೀರ್ ಮಾತನಾಡಿ, ಪಕ್ಷದ ರಾಜ್ಯ ನಾಯಕರು, ವರಿಷ್ಠರು ಕನಕಪುರ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆ ಗಮನಿಸಿ ಸೂಕ್ತ ವ್ಯಕ್ತಿಗೆ ತಾಲ್ಲೂಕು ಅಧ್ಯಕ್ಷ ಸ್ಥಾನ ನೀಡಿ ಸಂಘಟನೆ ಮಾಡಬೇಕು. ಕಾರ್ಯಕರ್ತರಿಗೆ ಮುಖಂಡರಿಗೆ ಶಕ್ತಿ ತುಂಬಬೇಕು. ಜೆಡಿಎಸ್ ಭದ್ರಕೋಟೆಯಾಗಿದ್ದ ಕನಕಪುರ ಕ್ಷೇತ್ರವನ್ನು ಮತ್ತೊಮ್ಮೆ ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.
ಅನುಕುಮಾರ್, ವಿರೂಪಸಂದ್ರ ಪ್ರದೀಪ್, ಮಂಜು, ರಾಮ್ ಕುಮಾರ್ ಮಾತನಾಡಿದರು. ನಾಗರಾಜು, ಅಂದಾನಿಗೌಡ, ಡಿ.ರಾಜು, ಸೋಮಣ್ಣ, ಕಿರಣ್, ಉಮೇಶ್, ರಾಜು, ಚೇತನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.