ಕನಕಪುರ: ನಗರದ ಮಳಗಾಳು ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ತಾಲ್ಲೂಕು ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕೆಸಿಸಿ ಬೆಳೆ ಸಾಲ, ಸ್ತ್ರೀ ಶಕ್ತಿ ಸ್ವಸಹಾಯ ಸಂಘ ಮತ್ತು ಹಸು ಸಾಕಾಣಿಕೆ ಸಾಲದ ಚೆಕ್ ವಿತರಣೆ ಕಾರ್ಯಕ್ರಮ ನಡೆಯಿತು.
ರೈತರ ಆರ್ಥಿಕ ಪ್ರಗತಿ ಹಾಗೂ ಹಾಲಿನ ಉತ್ಪಾದನೆ ಹೆಚ್ಚಿಸಲು ಹೈನುಗಾರಿಕೆ ರೈತರಿಗೆ ₹1.80 ಲಕ್ಷ ಸಾಲ ವಿತರಿಸಲಾಗುತ್ತಿದೆ. ಇದನ್ನು ರೈತರು ಸದ್ಬಳಕೆ ಮಾಡಿಕೊಂಡು ಹೆಚ್ಚು ಹಾಲು ಉತ್ಪಾದಿಸಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆಯಿರಿ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಕರೆ ನೀಡಿದರು.
ರೈತರು ಸ್ವಾವಲಂಬಿಯಾಗಲು ಹೈನುಗಾರಿಕೆ ಮತ್ತು ರೇಷ್ಮೆ ಕೃಷಿ ಪ್ರಮುಖವಾಗಿವೆ. ಹೈನುಗಾರಿಕೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಸೊಸೈಟಿ ಮೂಲಕ ಎರಡು ಹಸುಗಳ ಖರೀದಿಗೆ ಎರಡು ಕಂತಿನಲ್ಲಿ ₹1.80 ಲಕ್ಷ ನೀಡಲಾಗುತ್ತಿದೆ ಎಂದರು.
ರೈತರಿಗೆ ವಾರ್ಷಿಕವಾಗಿ ಶೇ 3ರ ಬಡ್ಡಿ ದರದಲ್ಲಿ ₹15 ಲಕ್ಷದವರೆಗೆ ಸಾಲ ವಿತರಿಸಲಾಗುತ್ತಿದೆ. ಮಿನಿ ಡೇರಿ ಮಾಡುವವರಿಗೆ ₹15 ಲಕ್ಷ ನೀಡಲಾಗುತ್ತದೆ. ಹಾಗಾಗಿ ತಾಲ್ಲೂಕಿನ ರೈತರು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ತು ಸದಸ್ಯ ಎಸ್.ರವಿ ಮಾತನಾಡಿ, ಕೃಷಿ ಸಾಲವನ್ನು ಬಿಡಿಸಿಸಿ ಬ್ಯಾಂಕ್ ಹೆಚ್ಚು ನೀಡುತ್ತಿದೆ. ರೈತರ ಮನೆ ಬಾಗಿಲಿಗೆ ಹೋಗಿ ಅವರ ಸಾಲದ ಅವಶ್ಯಕತೆ ಅರಿತು ತ್ವರಿತವಾಗಿ ಸಾಲ ಮಂಜೂರು ಮಾಡಲಾಗುತ್ತಿದೆ. ಹಾಗಾಗಿ ರೈತರು ಸಕಾಲಕ್ಕೆ ಸಾಮ ಮರುಪಾವತಿಸಬೇಕು ಎಂದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯದೇವ್ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್ ರೀತಿಯಲ್ಲಿ ಬಿಡಿಸಿಸಿ ಬ್ಯಾಂಕ್ ಕೆಲಸ ನಿರ್ವಹಿಸುತ್ತಿದೆ. ನಮ್ಮಲ್ಲಿಯೂ ಯುಪಿಎ ಸೌಲಭ್ಯ ಒದಗಿಸಿದ್ದು, ಡಿಜಿಟಲ್ ಟ್ರಾನ್ಸಾಕ್ಷನ್‌ಗೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ₹10 ಲಕ್ಷದವರೆಗೂ ಸಾಲ ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಕೆ.ಎನ್.ದಿಲೀಪ್, ಬಸಪ್ಪ, ಹೇಮರಾಜು, ಹರೀಶ್ ಗೌಡ, ಕಿರಣ್ ಕುಮಾರ್, ವಿಜಯ್.ಜಿ, ರವಿ ಪ್ರಸಾದ್, ಪ್ರದೀಪ್, ಆನಂದ್, ಕುಮಾರ್, ಬ್ಯಾಂಕ್ ಸಿಬ್ಬಂದಿ, ಎಲ್ಲಾ ಸೊಸೈಟಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.