ADVERTISEMENT

ಕಾಡಿನಲ್ಲಿ ಜಾನುವಾರುಗಳನ್ನು ಮೇಯಿಸಲು ನಿಷೇಧ: ಅರಣ್ಯ ಸಚಿವರ ಆದೇಶಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 2:07 IST
Last Updated 26 ಜುಲೈ 2025, 2:07 IST
ಕನಕಪುರದ ಅರಣ್ಯ ಕಚೇರಿ ಮುಂಭಾಗ ರೈತ ಸಂಘ ಮತ್ತು ಪ್ರಗತಿಪರ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿ ಮನವಿ ಪತ್ರವನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಿದರು
ಕನಕಪುರದ ಅರಣ್ಯ ಕಚೇರಿ ಮುಂಭಾಗ ರೈತ ಸಂಘ ಮತ್ತು ಪ್ರಗತಿಪರ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿ ಮನವಿ ಪತ್ರವನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಿದರು   

ಕನಕಪುರ: ಅರಣ್ಯ ಪ್ರದೇಶದಲ್ಲಿ ಜಾನುವಾರುಗಳನ್ನು ಮೇಯಿಸಲು ನಿಷೇಧ ಎಂಬ ಅರಣ್ಯ ಸಚಿವರ ಆದೇಶ ಖಂಡಿಸಿ ರೈತ ಸಂಘ ಮತ್ತು ಪ್ರಗತಿಪರ ಸಂಘಟನೆಗಳು ಅರಣ್ಯ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.

ಕಾಡು ಉಳಿದಿರುವುದು ರೈತರು ಹಾಗೂ ಕಾಡಂಚಿನ ಜನರಿಂದ. ಜಾನುವಾರುಗಳು ಮೇಯುವುದರಿಂದ ಕಾಡು ನಾಶವಾಗುವುದಿಲ್ಲ. ಕಾಡು ಪ್ರಾಣಿಗಳಿಂದ ರೈತರ ಬೆಳೆ ನಾಶವಾಗುತ್ತಿದೆ. ಇದು ಅರಣ್ಯ ಸಚಿವರಿಗೆ ಕಾಣುತ್ತಿಲ್ಲವೇ ಎಂದು ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಪ್ರಶ್ನಿಸಿದ್ದಾರೆ.

ಕಾಡು ಪ್ರಾಣಿಗಳ ದಾಳಿಯಿಂದ ಜನರು ನಿರಂತರ ಸಾವು–ನೋವು ಕಾಣುತ್ತಿದ್ದಾರೆ. ಅದನ್ನು ಇಲಾಖೆ ಹಾಗೂ ಸಚಿವರು ಪರಿಗಣಿಸಿ ಕ್ರಮ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಕಾಡಿಗೆ ಜಾನುವಾರುಗಳನ್ನು ಬಿಡಬಾರದು ಎಂಬ ಅವೈಜ್ಞಾನಿಕ ಆದೇಶ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಕಾಡು ಪ್ರಾಣಿಗಳಿಗೆ ಅರಣ್ಯದಲ್ಲಿ ನೀರು ಹಾಗೂ ಆಹಾರದ ವ್ಯವಸ್ಥೆ ಮಾಡಿ ಕಾಡಿನಿಂದ ಹೊರಬರದಂತೆ ಕ್ರಮ ವಹಿಸಬೇಕು. ಜೊತೆಗೆ ತಮಿಳುನಾಡಿನ ರೈತರು ಅರಣ್ಯಕ್ಕೆ ಜಾನುವಾರುಗಳನ್ನು ಬಿಡಬಾರದು, ಕರ್ನಾಟಕದವರು ಬಿಡಬಹುದು ಎಂಬ ದ್ವಂದ್ವ ನಿಲುವನ್ನು ಕೈ ಬಿಡಬೇಕು. ಕಾಡಂಚಿನ ಜನರು ಅರಣ್ಯವನ್ನೇ ಅವಲಂಬಿಸಿದ್ದಾರೆ. ಹಾಗಾಗಿ ಕೂಡಲೇ ಈ ಆದೇಶವನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದ್ದಾರೆ.

ಪ್ರತಿಭಟನೆಕಾರರು ತಮ್ಮ ಒತ್ತಾಯದ ಮನವಿ ಪತ್ರವನ್ನು ಅರಣ್ಯ ಇಲಾಖೆ ಮೂಲಕ ಅರಣ್ಯ ಸಚಿವರು ಮತ್ತು ಸರ್ಕಾರಕ್ಕೆ ಸಲ್ಲಿಸಿದರು.

ಪ್ರಶಾಂತ್, ಮುನಿಸಿದ್ದೇಗೌಡ, ರಾಜೇಶ್, ಪುಟ್ಟಲಿಂಗಯ್ಯ, ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.