ಕನಕಪುರ: ತಾಲ್ಲೂಕಿನ ರೈಸ್‌ಮಿಲ್ ಬಳಿ ಇರುವ ದೊಡ್ಡಯ್ಯನಕೆರೆ ಮತ್ತು ಅಚ್ಚಲು ಬಳಿ ಇರುವ ಹೊಂಗಾಣಿದೊಡ್ಡಿ ಗ್ರಾಮದಲ್ಲಿ ರೈತರ ಜಮೀನುಗಳನ್ನು ರಿಯಲ್ ಎಸ್ಟೇಟ್ ದಂಧೆಕೋರರು ಅಕ್ರಮವಾಗಿ ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿ ರೈತ ಸಂಘದ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಎರಡು ಗ್ರಾಮದಲ್ಲಿ ನೂರಾರು ಕುಟುಂಬಗಳು ಎರಡು–ಮೂರು ತಲೆಮಾರಿನಿಂದ ಉಳುಮೆ ಮಾಡಿ, ಉಳುವವನೇ ಭೂ ಒಡೆಯ ಕಾಯ್ದೆ ಅಡಿ ಅರ್ಜಿಗಳನ್ನು ಹಾಕಿ ಪಡೆದ ಜಮೀನನ್ನು ರಾಜಕೀಯ ನಾಯಕರು ಅಕ್ರಮವಾಗಿ ಭೂ ಕಬಳಿಕೆ ಮಾಡುತ್ತಿದ್ದಾರೆ ಎಂದು ರೈತರು ದೂರಿದರು.
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನೇತೃತ್ವದಲ್ಲಿ ರೈತರು ತಾಲ್ಲೂಕು ಕಚೇರಿವರೆಗೆ ಪ್ರತಿಭಟನಾ ರ‍್ಯಾಲಿ ನಡೆಯಿತು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಅರಳಾಪುರ ಮಂಜೇಗೌಡ, ವಕೀಲ ಅಚ್ಚಲು ಶಿವರಾಜು ಮಾತನಾಡಿ, ತಾಲ್ಲೂಕಿನಲ್ಲಿ ಎಲ್ಲವೂ ಸಂವಿಧಾನದ ವಿರುದ್ಧವೇ ನಡೆಯುತ್ತಿದೆ. ಬಡವರ ಪಾಲಿಗೆ ನ್ಯಾಯ ಮರೀಚಿಕೆಯಾಗಿದೆ ಎಂದರು.
ಅಧಿಕಾರಿಗಳು ನ್ಯಾಯಾಲಯದ ಆದೇಶಗಳನ್ನು ಧಿಕ್ಕರಿಸಿ, ರಾಜಕಾರಣಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. 1939ರಲ್ಲಿ ಮೈಸೂರು ಮಹಾರಾಜರು ಸಜ್ಜನ್ ರಾವ್ ಅವರಿಗೆ ದೊಡ್ಡಯ್ಯನ ಕೆರೆಯ 54.7 ಎಕರೆ ಜಮೀನನ್ನು ಬಳುವಳಿಯಾಗಿ ಕೊಟ್ಟಿದ್ದರು. ಬೂದಿಗುಪ್ಪೆ ಸುತ್ತಮುತ್ತಲಿನ ಗ್ರಾಮಸ್ಥರು ಅಲ್ಲಿ ವ್ಯವಸಾಯ ಮಾಡುತ್ತಿದ್ದು, ಉಳುವವನೇ ಭೂ ಒಡೆಯ ಕಾಯ್ದೆ ಅಡಿ ಸಜ್ಜನ್ ರಾವ್ ಅವರೇ ರೈತರಿಗೆ ಸಾಗುವಳಿ ಅರ್ಜಿ ಹಾಕಿಸಿ ರೈತರ ಹೆಸರಿಗೆ ಖಾತೆ ಪಹಣಿಯನ್ನೂ ಮಾಡಿಕೊಟ್ಟಿದ್ದಾರೆ. ಆದರೆ, ಇದೀಗ ಇದೇ ಜಾಗವನ್ನು ಕಬಳಿಸಲು ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಆರೋಪಿಸಿದರು.
ಅದೇ ರೀತಿ ಹೊಂಗಣಿ ದೊಡ್ಡಿ ಗ್ರಾಮದಲ್ಲಿ 1974ರಲ್ಲಿ 30 ಕುಟುಂಬಗಳು 140 ಎಕರೆ ಜಮೀನಿನಲ್ಲಿ ಗೇಣಿದಾರರಾಗಿ ಸಾಗುವಳಿ ಮಾಡುತ್ತಿದ್ದು, ಉಳುವವನೇ ಭೂ ಒಡೆಯ ಕಾಯ್ದೆ ಅಡಿ ಸಾಗುವಳಿದಾರರಾಗಿ ಕೃಷಿ ಮಾಡುತ್ತಿದ್ದಾರೆ. ಆದರೆ, ಇಲ್ಲೂ 60 ಎಕರೆ ಜಮೀನು ಕಬಳಿಕೆ ಮಾಡಲಾಗಿದೆ ಎಂದು ಪ್ರತಿಭಟನಕಾರರು ದೂರಿದರು.
ರೈತ ಮುಖಂಡ ಹರೀಶ್ ಮಾತನಾಡಿ, ‘ಬೂದಿಗುಪ್ಪೆ ಬಳಿಯ ದೊಡ್ಡಯ್ಯನಕೆರೆ ರೈತರ ಭೂಮಿಯನ್ನು ಕಬಳಿಸಿ ರೈತರನ್ನು ಒಕ್ಕಲಿಬ್ಬಿಸಲಾಗುತ್ತಿದೆ. ಹೊಂಗಾಣಿ ದೊಡ್ಡಿ ಗ್ರಾಮದಲ್ಲಿ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ನೇರವಾಗಿ ರೈತರ ಭೂಮಿ ಕಿತ್ತುಕೊಂಡಿದ್ದಾರೆ. ಜೊತೆಗೆ ರೈತರ ಮನೆಗಳನ್ನು ಧ್ವಂಸ ಮಾಡಿ, ಜಮೀನಿಗೆ ತಂತಿ ಬೇಲಿ ಹಾಕಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ’ ಎಂದು ದೂರಿದರು.
ರೈತರ ಪ್ರತಿಭಟನೆಗೆ ಜೆಡಿಎಸ್ ಮತ್ತು ಬಿಜೆಪಿ ಬೆಂಬಲ ನೀಡಿತು. ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಿ.ನಾಗರಾಜು, ಬಿಜೆಪಿ ತಾಲ್ಲೂಕು ಅಧ್ಯಕ್ಷ ಕೆ.ಪಿಕುಮಾರ್, ರೈತ ಬೂದಿಗುಪ್ಪೆ ಸಂಪತ್ ಕುಮಾರ್, ಬೂದಿಗುಪ್ಪೆ ಮತ್ತು ಹೊಂಗಾಣಿ ದೊಡ್ಡಿಯ ನೂರಾರು ರೈತ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.