
ಕನಕಪುರ: ಸಾಗುವಳಿ ಭೂಮಿಗೆ 50 ವರ್ಷಗಳಿಂದ ಪೋಡಿ, ದುರಸ್ತಿಯಾಗಿಲ್ಲ. ಕೆರೆಗಳಲ್ಲಿ ನೀರಿಲ್ಲ, ಜನರು ಓಡಾಡಲು ಸರಿಯಾದ ರಸ್ತೆ ಇಲ್ಲದೆ ಗ್ರಾಮ ಹಿಂದುಳಿದಿದೆ. ಮೂಲಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ತೊಪ್ಪಗನಹಳ್ಳಿ ಗ್ರಾಮಸ್ಥರು ರಾಜ್ಯಪಾಲರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಬೇಸಿಗೆ ಪ್ರಾರಂಭವಾಗಿದ್ದು ತಾಲ್ಲೂಕಿನ ಕಸಬಾ ಹೋಬಳಿ ತೊಪ್ಪಗನಹಳ್ಳಿ ಗ್ರಾಮದ ಸುತ್ತಮುತ್ತ ಅಂತರ್ಜಲ ಮಟ್ಟ ಕುಸಿದಿದೆ. ನಿರೀಕ್ಷೆಯಂತೆ ಮಳೆಯಾಗದೆ ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಬರಿದಾಗಿವೆ. ದನ ಕರುಗಳು ಮತ್ತು ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ ಎಂದು ಗ್ರಾಮಸ್ಥರು ಮನವಿಯಲ್ಲಿ ದೂರಿದ್ದಾರೆ.
ಗ್ರಾಮಕ್ಕೆ ಸರ್ಕಾರಿ ಅನುದಾನಗಳಿಲ್ಲದೆ ಅಭಿವೃದ್ಧಿಯಿಂದ ಹಿಂದುಳಿದಿದೆ. ಸೂಕ್ತ ರಸ್ತೆ ಇಲ್ಲದೆ, ಗ್ರಾಮಸ್ಥರು ಓಡಾಡಲು ತೊಂದರೆಯಾಗುತ್ತಿದೆ. ಮೂಲಸೌಕರ್ಯಗಳಿಂದ ವಂಚಿತರಾಗಿದ್ದೇವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಗ್ರಾಮದಲ್ಲಿ ರಸ್ತೆ ಅಭಿವೃದ್ಧಿಯಾಗಬೇಕು. ಕೆರೆಕಟ್ಟೆಗಳಿಗೆ ನೀರು ತುಂಬಿಸಿ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಸಾಗುವಳಿ ಮಂಜುರಾಗಿರುವ ಭೂಮಿಗಳಿಗೆ ಪೋಡಿ ದುರಸ್ತಿ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ತೊಪ್ಪಗನಹಳ್ಳಿ ಗ್ರಾಮಕ್ಕೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ತೊಪ್ಪಗನಹಳ್ಳಿ ಗ್ರಾಮದ ನಂಜೇಗೌಡ, ರಾಮಚಂದ್ರ, ಮಂಜು, ರಾಮೇಗೌಡ, ಕುಮಾರ್, ಪುಟ್ಟರಾಮು, ಶಿವಕುಮಾರ್ ಮೊದಲಾದವರು ರಾಜ್ಯಪಾಲರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.