ಕನಕಪುರ: ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ರೈತನ ಮೇಲೆ ದಾಳಿ ನಡೆಸಿ ಗಾಯಗೊಂಡಿರುವ ಘಟನೆ ಎನ್.ಗೊಲ್ಲಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಮಳಗಾಳು ಗ್ರಾಮದ ಬಸವಯ್ಯ (46) ಗಾಯಗೊಂಡವರು. ಬಸವಯ್ಯ ಎನ್.ಗೊಲ್ಲಹಳ್ಳಿಗೆ ಉಳುಮೆ ಕೆಲಸಕ್ಕೆ ಹೋಗಿದ್ದು, ಕೆಲಸ ಮಾಡುವಾಗ ಒಂಟಿ ಸಲಗ ದಾಳಿ ನಡೆಸಿ ಕಾಲಿನಿಂದ ತುಳಿದು, ಸೊಂಡಿಲಿನಿಂದ ಎತ್ತಿ ಬಿಸಾಡಿದೆ.
ದಾಳಿ ವೇಳೆ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಗಿರೀಶ್ ಎಂಬುವರು ಜೋರಾಗಿ ಚೀರಾಡಿ ಅಕ್ಕಪಕ್ಕ ಹೊಲದ ರೈತರು ಸೇರಿ ಶಬ್ದ ಮಾಡಿದ್ದರಿಂದ ಆನೆ ಅಲ್ಲಿಂದ ಓಡಿಹೋಗಿದೆ.
ತಕ್ಷಣವೇ ರೈತರು ಆನೆ ಓಡಿಸುವ ಕಂಟ್ರೋಲ್ ರೂಂಗೆ ಕರೆ ಮಾಡಿ ಆನೆ ದಾಳಿ ಬಗ್ಗೆ ಮಾಹಿತಿ ನೀಡಿದ್ದಾರೆ. ಆರ್‌ಎಫ್‌ಒ ಆಂತೋನಿ ರೇಗೋ, ಆನೆ ಕಾರ್ಯಪಡೆ ಆರ್‌ಎಫ್ಒ ಶ್ರೀಧರ್, ಡಿಆರ್‌ಎಫ್ಒ ನಾಗರಾಜು ಜಿ.ಎಂ., ಅರಣ್ಯ ಗಸ್ತು ಪಾಲಕರಾದ ಜಗದೀಶ್ ಎಚ್.ಎನ್., ನಿಂಗಪ್ಪ ಹಾಗೂ ಆನೆ ಕಾರ್ಯಪಡೆ ಸಿಬ್ಬಂದಿ ಗಾಯಾಳು ಬಸವಯ್ಯ ಅವರನ್ನು ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ದೇಹದ ಬಲಭಾಗದ ಮೂಳೆ ಮುರಿದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸವಯ್ಯ ಅವರ ಆಸ್ಪತ್ರೆಯ ಸಂಪೂರ್ಣ ವೆಚ್ಚವನ್ನು ಭರಿಸಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಆನೆಯು ಅರಣ್ಯದಿಂದ ರಸ್ತೆ ಮಾರ್ಗದಲ್ಲಿ ಹೊರಗಡೆ ಬಂದಿದ್ದು, ಅದನ್ನು ಬಿಳಿಕಲ್ ರಾಜ್ಯ ಅರಣ್ಯ ಪ್ರದೇಶಕ್ಕೆ ಅರಣ್ಯ ಸಿಬ್ಬಂದಿಗಳು ಹಿಮ್ಮೆಟ್ಟಿಸಿದ್ದಾರೆ. ರಾತ್ರಿ ಮತ್ತೆ ಆನೆ ಕಾಡಿನಿಂದ ಹೊರಬರಬಹುದು ಎಂದು ಅರಣ್ಯ ಸಿಬ್ಬಂದಿಗಳು ಗಸ್ತು ನಡೆಸುತ್ತಿರುವುದಾಗಿ ಆರ್‌ಎಫ್ಒ ಆಂತೋನಿ ರೇಗೋ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.