ಸುನಿಲ್
ಕನಕಪುರ: ಗೆಂಡೆಕೆರೆ ಗ್ರಾಮದಲ್ಲಿ ಶನಿವಾರ ರಾತ್ರಿ ಜಮೀನು ವಿವಾದದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಎದೆಯ ಮೇಲೆ ಕಲ್ಲು ಎತ್ತಿ ಹಾಕಿ ಅಮಾನುಷವಾಗಿ ಕೊಲೆ ಮಾಡಲಾಗಿದೆ. ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎಂದು ಯುವಕನನ್ನು ಆರೋಪಿಗಳೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ತಾಲ್ಲೂಕಿನ ಜಕ್ಕಸಂದ್ರ ಯಡುವನಹಳ್ಳಿ ಗ್ರಾಮದ ನಿವಾಸಿ, ಮೂಲತಃ ತುಂಗಣಿ ಗ್ರಾಮದ ಸುನಿಲ್ (30) ಕೊಲೆಯಾದ ಯುವಕ. ಅವರ ಸಹೋದರ ಕಿರಣ್ (28) ದಾಳಿಯಲ್ಲಿ ಗಾಯಗೊಂಡಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಸಬಾ ಹೋಬಳಿ ಗೆಂಡೆಕೆರೆ ಗ್ರಾಮದ ಪಾರ್ಥ ಹಾಗೂ ಅವರ ಮಗ ಪ್ರೇಮ್ ಎಂಬುವರನ್ನು ಕೊಲೆ ಆರೋಪದ ಮೇಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆ ಹಿನ್ನೆಲೆ:
ಕೊಲೆಯಾದ ಸುನಿಲ್ ತಂದೆ ಮುನಿರಾಜು ಅಲಿಯಾಸ್ ಹುಚ್ಚ ಅವರಿಗೆ ಸೇರಿದ ತುಂಗಣಿ ಗ್ರಾಮದ ಜಮೀನನ್ನು ಕೊಲೆ ಆರೋಪಿ ಗೆಂಡೆಕೆರೆ ಪಾರ್ಥ ಖರೀದಿಸಿದ್ದ. ಇದು ಜಗಳಕ್ಕೆ ಕಾರಣವಾಗಿತ್ತು.
ಸುನಿಲ್ ತಾಯಿ 20 ವರ್ಷದ ಹಿಂದೆ ಗಂಡನಿಂದ ಬೇರೆಯಾಗಿ ತನ್ನ ಎರಡು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ ಈ ಕುಟುಂಬ ತಾಯಿ ತವರು ಮನೆಯಾದ ಯಡವನಹಳ್ಳಿ ಗ್ರಾಮಕ್ಕೆ ಬಂದು ನೆಲೆಸಿತ್ತು.
ತುಂಗಣಿ ಗ್ರಾಮದಲ್ಲಿ ತನ್ನ ಗಂಡನ ಪಾಲಿನ ಆಸ್ತಿಯನ್ನು ಮಕ್ಕಳಿಗೆ ನೀಡುವಂತೆ ಸುನೀಲ್ ತಾಯಿ ಕೇಳಿದ್ದರು. ಅವರ ಪತಿ ಮುನಿರಾಜು ಅದಕ್ಕೆ ಒಪ್ಪಿರಲಿಲ್ಲ. ಹೆಂಡತಿ, ಮಕ್ಕಳಿಗೆ ಗೊತ್ತಾಗದಂತೆ ಮುನಿರಾಜು ತನ್ನ ಜಮೀನನ್ನು ಗೆಂಡೆಕೆರೆ ಪಾರ್ಥ ಅವರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದರು. ಜಮೀನು ಖರೀದಿ ಮಾಡಿದ ಪಾರ್ಥ, ಗುಟ್ಟಾಗಿ ಕ್ರಯ ಮಾಡಿಸಿಕೊಂಡು ಖಾತೆ ಬದಲಾಯಿಸಿಕೊಂಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸುನಿಲ್ ಕುಟುಂಬ ಶನಿವಾರ ಪಾರ್ಥನೊಂದಿಗೆ ಜಗಳ ಮಾಡಿದ್ದರು.
‘ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಬೇಕು ಎಂದು ಪಾರ್ಥ ಶನಿವಾರ ರಾತ್ರಿ ತನ್ನ ಮಕ್ಕಳಾದ ಸುನಿಲ್ ಮತ್ತು ಕಿರಣ್ ಇಬ್ಬರನ್ನೂ ಗೆಂಡೆಕೆರೆಗೆ ಕರೆಸಿಕೊಂಡು 15–20 ಜನರು ಸೇರಿ ಮಾರಕಸ್ತ್ರಗಳಿಂದ ಸುನೀಲ್‌ನನ್ನು ಕೊಚ್ಚಿ ಕೊಲೆ ಮಾಡಿ, ಕಲ್ಲು ಎತ್ತಿ ಹಾಕಿದ್ದಾರೆ. ಗುಂಪಿನಿಂದ ತಪ್ಪಿಸಿಕೊಂಡ ಎರಡನೇ ಮಗ ಕಿರಣ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ’ ಎಂದು ಅವರ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಿರಣ್ ಕೂಡ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ, ಎಎಸ್‌ಪಿ ರಾಮಚಂದ್ರಯ್ಯ, ಸರ್ಕಲ್ ಇನ್‌ಸ್ಪೆಕ್ಟರ್ ವಿಕಾಸ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.