ADVERTISEMENT

ಕಲ್ಲು ಗಣಿಗಾರಿಕೆ: ಅಧಿಕಾರಿಗಳ ಭೇಟಿ, ಸ್ಥಳ ಮಹಜರು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 7:17 IST
Last Updated 23 ಆಗಸ್ಟ್ 2024, 7:17 IST
ಕನಕಪುರ ದೊಡ್ಡ ಕೊಪ್ಪ ಗ್ರಾಮದ ಬಳಿ ನಡೆಯುತ್ತಿದ್ದ ಕಲ್ಲು ಕ್ವಾರಿ ಜಾಗಕ್ಕೆ ಕಲ್ಲು ಗಣಿ ಇಲಾಖೆ ಮತ್ತು ಕಂದಾಯ, ಮೋಜಿಣಿ ಅಧಿಕಾರಿಗಳು ಸ್ಥಳ ಮಹಜರು ಮಾಡುತ್ತಿರುವುದು
ಕನಕಪುರ ದೊಡ್ಡ ಕೊಪ್ಪ ಗ್ರಾಮದ ಬಳಿ ನಡೆಯುತ್ತಿದ್ದ ಕಲ್ಲು ಕ್ವಾರಿ ಜಾಗಕ್ಕೆ ಕಲ್ಲು ಗಣಿ ಇಲಾಖೆ ಮತ್ತು ಕಂದಾಯ, ಮೋಜಿಣಿ ಅಧಿಕಾರಿಗಳು ಸ್ಥಳ ಮಹಜರು ಮಾಡುತ್ತಿರುವುದು   

ಕನಕಪುರ: ಕೆರೆ ಜಾಗ ಒತ್ತುವರಿ ಮಾಡಿ ಆಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಕೂಡಲೇ ಅದನ್ನು ಸ್ಥಗಿತಗೊಳಿಸುವಂತೆ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಉಪತಹಶೀಲ್ದಾರ್, ತಾಲ್ಲೂಕು ಮೋಜಿಣಿದಾರರು, ರಾಜಸ್ವ ನಿರೀಕ್ಷಕರು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡಸಿ, ಮಹಜರು ಮಾಡಿದರು.

ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ದೊಡ್ಡಕೊಪ್ಪ ಗ್ರಾಮದ ಸರ್ವೆ ನಂ. 67 ರ ಆರ್ ಟಿ ಸಿ ಯಲ್ಲಿ ಸರ್ಕಾರಿ ಕೆರೆ ಎಂದು ನಮೂದಾಗಿದ್ದು ಇದರಲ್ಲಿ 2 ಎಕರೆಯನ್ನು 2007 ರಲ್ಲಿ ಎ.ಸಿ. ಶಿವಲಿಂಗೇಗೌಡ ಎಂಬುವರಿಗೆ ಮಲ್ಟಿ ಕಲರ್ ಗ್ರಾನೆಟ್ ಗಣಿಗಾರಿಕೆಗಾಗಿ ಕಲ್ಲು ಗಣಿ ಗುತ್ತಿಗೆ ಸಂಖ್ಯೆ 793 ಎಂದು ಮಂಜೂರು ಮಾಡಿದೆ.

ಆದರೆ ಸರ್ವೆ ನಂ. 67 ರ ಜಮೀನು ಸರ್ಕಾರಿ ಕೆರೆಯಾಗಿದ್ದು. ಆ ಜಾಗದಲ್ಲಿಯೇ ಕಲ್ಲು ಗಣಿ ಮಾಲೀಕರು ಕೆರೆಯ ಜಾಗದಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದಾರೆ ಎಂದು ಅರೋಪಿಸಿ ದೂರು ನೀಡಿದ್ದರು.

ADVERTISEMENT

ಗಣಿಗಾರಿಕೆ ಮಾಡಲು ಗ್ರಾಮದ ಸರ್ಕಾರಿ ಕೆರೆಯನ್ನು ಮುಚ್ಚಿರುತ್ತಾರೆ. ಜೊತೆಗೆ ರಾತ್ರಿ ಹತ್ತು ಗಂಟೆಯವರೆಗೂ ಕಲ್ಲು ಗಣಿ ಸ್ಫೋಟ ಮಾಡುತ್ತಿದ್ದಾರೆ. ಇದರಿಂದ ಸುತ್ತಮುತ್ತಲ ಗ್ರಾಮಸ್ಥರು ಮನೆಯಲ್ಲಿ ವಾಸ ಮಾಡಲು ತೊಂದರೆ ಉಂಟಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ರಾಮನಗರ ಜಿಲ್ಲೆ ಭೂ ದಾಖಲೆಗಳ ಉಪ ನಿರ್ದೇಶಕರ ಆದೇಶದ ಮೇರೆಗೆ ಕೆರೆ ಸರ್ವೆ ನಡೆಸಿದಾಗ ಕೆರೆ ಜಾಗ ಒತ್ತುವರಿಯಾಗಿರುವುದು ಬೆಳಕಿಗೆ ಬಂದಿರುತ್ತದೆ. ಆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಕೆರೆಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ದೂರುದಾರರು ಒತ್ತಾಯಿಸಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಕ್ವಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸ್ಥಳೀಯ ಗ್ರಾಮಸ್ಥರಿಂದ ಮಾಹಿತಿ ಪಡೆದು ಸ್ಥಳ ಮಹಜರು ಮಾಡಿ ವರದಿ ಸಿದ್ದಪಡಿಸಿದರು.

ದೂರುದಾರ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ಉಮೇಶ್, ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್, ಮುಖಂಡರಾದ ಕಾಳ ಮಾರೇಗೌಡ, ಮಾರೇಗೌಡ, ದೀಪು, ಶ್ರೀನಿವಾಸ್, ಕುಮಾರ್, ನಾಜೀರ್ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಸ್ಥಳ ಮಹಜರು ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.